ಬೆಂಗಳೂರು: 2019ರ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನದ ಅಂತ್ಯಗೊಂಡಿದೆ. 2ನೇ ಹಂತದಲ್ಲಿ 13 ರಾಜ್ಯಗಳ 95 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಿತು.
ಎಲ್ಲೆಲ್ಲಿ ಎಷ್ಟು ಮತದಾನ?
ತಮಿಳುನಾಡಿನ 38 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆದಿದ್ದು, ಶೇ. 61.52 ರಷ್ಟು ಮತದಾನ ಆಗಿದೆ. ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಪಿ. ಚಿದಂಬರಂ ಅವರು ಸ್ಪರ್ಧೆ ಮಾಡಿರುವ ಶಿವಗಂಗಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಚ್ ರಾಜಾ ಸ್ಪರ್ಧೆ ಮಾಡಿದ್ದಾರೆ. ಚೆನ್ನೈ ಕ್ಷೇತ್ರದಲ್ಲಿ ಡಿಎಂಕೆ ಮುಖಂಡ ದಯಾನಿಧಿ ಮಾರನ್ ವಿರುದ್ಧ ಪಿಎಂಕೆ ಪಕ್ಷದ ಸ್ಯಾಮ್ ಪಾಲ್ ಕಣಕ್ಕೆ ಇಳಿದಿದ್ದಾರೆ. ಬಿಜೆಪಿಯ ಪೊನ್ ರಾಧಾಕೃಷ್ಣನ್ ಕನ್ಯಾ ಕುಮಾರಿಯಿಂದ ಕಾಂಗ್ರೆಸ್ ಪಕ್ಷದ ಎಚ್. ವಸಂತಕುಮಾರ್ ಅವರ ವಿರುದ್ಧ ಸ್ಪರ್ಧೆ ನಡೆಸಿದ್ದಾರೆ. ತೂತುಕುಡಿ ಯಿಂದ ಡಿಎಂಕೆ ನಾಯಕಿ ಕನಿಮೋಳಿ ಕಣಕ್ಕೆ ಇಳಿದ್ದು, ಬಿಜೆಪಿಯ ತಮಿಳ್‍ಸಾಯಿ ಸುಂದರರಾಜನ್ ಬಿಜೆಪಿಯಿಂದ ಸ್ಪರ್ಧೆ ನಡೆಸಿದ್ದಾರೆ. ನೀಲ್‍ಗಿರೀಸ್ ಕ್ಷೇತ್ರದಿಂದ ಡಿಎಂಕೆ ನಾಯಕ ಎ.ರಾಜಾ ಕಣಕ್ಕೆ ಇಳಿದಿದ್ದರೆ ಎಐಡಿಎಂಕೆ ಪಕ್ಷದಿಂದ ತ್ಯಾಗರಾಜನ್ ಕಣದಲ್ಲಿದ್ದಾರೆ. ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಭದ್ರವಾಗಿದ್ದು, 23 ರಂದು ನಡೆಯುವ ಮತ ಎಣಿಕೆವರೆಗೂ ಫಲಿತಾಶಂಕ್ಕಾಗಿ ಕಾಯಬೇಕಿದೆ.
ದೇಶದಲ್ಲಿ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಇಂದು 8 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ಇಲ್ಲಿ ಶೇ. 58.12 ರಷ್ಟು ಮತದಾನ ನಡೆದಿದೆ. ಪ್ರಮುಖವಾಗಿ ನಟಿ ಹೇಮಾ ಮಾಲಿನಿ ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಮಥುರಾದಲ್ಲಿ ಕಾಂಗ್ರೆಸ್ ಪಕ್ಷದ ಮಹೇಶ್ ಪಾಠಕ್ ಹಾಗೂ ಆರ್ ಎಲ್‍ಡಿ ಯಿಂದ ಕಣಕ್ಕೆ ಇಳಿದಿರುವ ಖುನ್ವರ್ ನರೇಂದ್ರ ಸಿಂಗ್ ಅವರ ನಡುವೆ ತ್ರಿಕೋನ ಸ್ಪರ್ಧೆ ಇದೆ. ಅಲ್ಲದೇ ಕಾಂಗ್ರೆಸ್ ಪಕ್ಷದ ರಾಜ್‍ಬಬ್ಬರ್ ಸ್ಪರ್ಧೆ ಮಾಡಿರುವ ಫತೇಪುರ್ ಸಿಕ್ರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಜಕುಮಾರ್ ಚಹಾರ್ ಹಾಗೂ ಬಿಎಸ್‍ಪಿಯಿಂದ ಭಗವಾನ್ ಶರ್ಮಾ ಕಣದಲ್ಲಿ ಇದ್ದಾರೆ. ಡ್ಯಾನಿಶ್ ಅಲಿ ಅವರು ಅಮ್ರೋಹಾ ಕ್ಷೇತ್ರದಿಂದ ಬಿಜೆಪಿಯ ಕನ್ವರ್ ಸಿಂಗ್ ಅವರ ವಿರುದ್ಧ ಸ್ಪರ್ಧೆ ನಡೆಸಿದ್ದಾರೆ.
ಜಮ್ಮು ಕಾಶ್ಮೀರ ಶ್ರೀನಗರದಲ್ಲಿ ಎನ್‍ಸಿ ಪಕ್ಷದಿಂದ ಫಾರೂಕ್ ಅಬ್ದುಲ್ಲಾ ಹಾಗೂ ಬಿಜೆಪಿಯಿಂದ ಖಲೀದ್ ಜಹಾಂಗೀರ್ ಕಣದಲ್ಲಿದ್ದಾರೆ. ಇನ್ನು ಉಧಾಂಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ.ಜಿತೇಂದ್ರ ಸಿಂಗ್ ಮತ್ತು ಕಾಂಗ್ರೆಸ್ ನಿಂದ ವಿಕ್ರಮಾಧಿತ್ಯ ಸಿಂಗ್ ಸ್ಪರ್ಧೆ ನಡೆಸಿದ್ದಾರೆ. 2 ಕ್ಷೇತ್ರಗಳಲ್ಲಿ ಶೇ. 43.37 ಮತದಾನ ನಡೆದಿದೆ.
ಉಳಿದಂತೆ ಆಸ್ಸಾಂನ 5 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, 2ನೇ ಹಂತದ ಮತದಾನದಲ್ಲಿ ಅಧಿಕ ಅಂದರೆ ಶೇ. 73.30 ರಷ್ಟು ಮತದಾನ ನಡೆದಿದೆ. ಉಳಿದಂತೆ ಮಹಾರಾಷ್ಟ್ರ 10 ಕ್ಷೇತ್ರಗಳಲ್ಲಿ ಶೇ. 55.37, ಒಡಿಶಾ 5 ಕ್ಷೇತ್ರಗಳಲ್ಲಿ ಶೇ. 57.40, ಚತ್ತೀಸ್‍ಗಢ 3 ಕ್ಷೇತ್ರದಲ್ಲಿ 68.70 ಹಾಗೂ ಪಶ್ಚಿಮ ಬಂಗಾಳದ 3 ಕ್ಷೇತ್ರಗಳಲ್ಲಿ ಶೇ.75.27 ರಷ್ಟು ಮತದಾನ ದಾಖಲಾಗಿದೆ. ಇನ್ನು ಮಣಿಪುರದಲ್ಲಿ ಶೇ. 74.69 ಹಾಗೂ ಪಾಂಡಿಚೇರಿಯಲ್ಲಿ 72.40 ರಷ್ಟು ಮತದಾನ ಆಗಿದೆ.