ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಸೋಮಲಾಪುರ ಗ್ರಾಮಸ್ಥರ ನಿದ್ದೆಗೆಡೆಸಿದ್ದ ಎರಡನೇ ನರಭಕ್ಷಕ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.
ಕಳೆದ ಎರಡು ವಾರದಿಂದ ಸುತ್ತಮುತ್ತಲಿನ ಗ್ರಾಮದಿಂದ ಎರಡು ಮಕ್ಕಳನ್ನು ಚಿರತೆಗಳು ಹೊತ್ತೊಯ್ದಿದ್ದವು. ಈ ಚಿರತೆಗಳ ಕಾಟ ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿತ್ತು. ಹೀಗಾಗಿ ಕಳೆದ ಎರಡು ವಾರದಿಂದ ಚಿರತೆ ಹಿಡಿಯಲು ಕೂಂಬಿಂಗ್ ಕಾರ್ಯಾಚರಣೆ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.
ಹೀಗಾಗಿ ಸೋಮಲಾಪುರ ಗುಡ್ಡದ ಬಳಿ ನಾಯಿ ಹಾಕಿ 11 ಬೋನುಗಳನ್ನು ಅರಣ್ಯ ಇಲಾಖೆ ಅಳವಡಿಸಿತ್ತು. ಈ ಹಿಂದೆ ಒಂದು ಚಿರತೆ ಸೆರೆಸಿಕ್ಕಿತ್ತು. ಅಲ್ಲದೇ ಇಂದು ಮುಂಜಾನೆ ಆಹಾರ ಅರಸಿ ಬಂದ ಮತ್ತೊಂದು ಚಿರತೆಯೂ ಬೋನಿಗೆ ಬಿದ್ದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಚಿರತೆ ಸ್ಥಳಾಂತರ ಕಾರ್ಯ ಕೈಗೊಂಡಿದ್ದಾರೆ. ಬೋನಿನಲ್ಲಿ ಬಿದ್ದ ಚಿರತೆ ನೋಡಲು ಸೋಮಲಾಪುರ ಸುತ್ತಮುತ್ತಲಿನ ಗ್ರಾಮದ ಜನರು ತಂಡೋಪ ತಂಡವಾಗಿ ಗ್ರಾಮದತ್ತ ಆಗಮಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv