ಬಾಂಗ್ಲಾದಲ್ಲಿ ಮುಂದುವರೆದ ಹಿಂದೂಗಳ ಬಂಧನ – ಕೃಷ್ಣ ದಾಸ್ ಭೇಟಿಗೆ ತೆರಳಿದ್ದ ಅರ್ಚಕ ಅರೆಸ್ಟ್‌

Public TV
1 Min Read
Sri Shyam Das Prabhu

ಢಾಕಾ: ದೇಶದ್ರೋಹ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಇಸ್ಕಾನ್‌ನ (ISKCON) ಮಾಜಿ ಸದಸ್ಯ ಚಿನ್ಮಯ್ ಕೃಷ್ಣ ದಾಸ್ (Chinmoy Krishna Das) ಅವರನ್ನು ಭೇಟಿಗೆ ತೆರಳಿದ್ದ ಅರ್ಚಕರೊಬ್ಬರನ್ನು ಬಾಂಗ್ಲಾದೇಶದ (Bangladesh) ಪೊಲೀಸರು (Police) ಬಂಧಿಸಿದ್ದಾರೆ.

ಬಂಧಿತ ಅರ್ಚಕರನ್ನು ಶ್ಯಾಮ್ ದಾಸ್ ಪ್ರಭು (Sri Shyam Das Prabhu) ಎಂದು ಗುರುತಿಸಲಾಗಿದೆ. ಯಾವುದೇ ಅಧಿಕೃತ ವಾರಂಟ್ ಇಲ್ಲದೆ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಇಸ್ಕಾನ್‌ನ ಕೋಲ್ಕತ್ತಾದ ಉಪಾಧ್ಯಕ್ಷ ಮತ್ತು ವಕ್ತಾರ ರಾಧರಾಮ್ ದಾಸ್ ಅವರು, ಅರ್ಚಕರ ಬಂಧನದ ಕುರಿತು ಪೋಸ್ಟ್ ಮಾಡಿದ್ದಾರೆ. ಇನ್ನೊಬ್ಬ ಬ್ರಹ್ಮಚಾರಿ ಶ್ರೀ ಶ್ಯಾಮ್ ದಾಸ್ ಪ್ರಭು ಅವರನ್ನು ಇಂದು ಚಟ್ಟೋಗ್ರಾಮ್ ಪೊಲೀಸರು ಬಂಧಿಸಿದ್ದಾರೆ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಬಾಂಗ್ಲಾದೇಶದದಲ್ಲಿ ಇಸ್ಕಾನ್ ಮಾಜಿ ಸದಸ್ಯ ಚಿನ್ಮಯ್ ಕೃಷ್ಣ ದಾಸ್ ಅವರನ್ನು ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬಂಧಿಸಲಾಗಿತ್ತು. ಅವರ ಬಂಧನವು ರಾಜಧಾನಿ ಢಾಕಾ ಮತ್ತು ಚಟ್ಟೋಗ್ರಾಮ್ ಸೇರಿದಂತೆ ಬಾಂಗ್ಲಾದೇಶದ ವಿವಿಧ ಸ್ಥಳಗಳಲ್ಲಿ ಹಿಂದೂಗಳ ಪ್ರತಿಭಟನೆಗೆ ಕಾರಣವಾಗಿದೆ.

ಚಿನ್ಮಯ್‌ ಕೃಷ್ಣ ದಾಸ್ ಅವರನ್ನು ಬಿಡುಗಡೆ ಮಾಡಲು ಒತ್ತಾಯಿಸಿ ನಡೆದ ಪ್ರತಿಭಟನೆ (Protest) ವೇಳೆ ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಇನ್ನೂ ಕೃಷ್ಣದಾಸ್‌ ಅವರಿಗೆ ಚಟ್ಟೋಗ್ರಾಮ್ ನ್ಯಾಯಾಲಯ ಮಂಗಳವಾರ ಜಾಮೀನು ನಿರಾಕರಿಸಿತ್ತು.

Share This Article