Districts
ಒಂದೇ ನಿಮಿಷದಲ್ಲಿ 6 ಇಡ್ಲಿ ತಿಂದು ಮೊದಲ ಸ್ಥಾನ ಪಡೆದ 60 ವರ್ಷದ ಅಜ್ಜಿ

-ಅತ್ತೆ-ಸೊಸೆಯರಿಂದ ಅಡುಗೆ, ಬ್ಯಾನರ್ ನೋಡಿ ಗರಂ ಆದ ಸೋಮಣ್ಣ
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಇಂದು ದಸರಾದ ಎರಡನೇ ದಿನ ಅರಮನೆ ನಗರಿಯಲ್ಲಿ ವಿವಿಧ ಕಾರ್ಯಕ್ರಮಗಳು ಜನರಿಗೆ ಮಸ್ತ್ ಮನರಂಜನೆ ನೀಡಿತು.
ಭಾನುವಾರ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾಗೆ ವಿದ್ಯುಕ್ತವಾದ ಚಾಲನೆ ಸಿಕ್ಕಿದೆ. ಇಂದು ಎರಡನೇ ದಿನದ ದಸರೆಯನ್ನು ಸ್ತ್ರೀಯರ ಕಲಾನೈಪುಣ್ಯತೆಯಾದ ರಂಗೋಲಿ ಸ್ಪರ್ಧೆಯಿಂದ ಆರಂಭಗೊಳಿಸಲಾಯಿತು. ಅಂಬಾ ವಿಲಾಸ ಅರಮನೆಯ ಮುಂಭಾಗ ಆಯೋಜಿಸಿದ್ದ, ದಸರಾ ರಂಗೋಲಿ ಸ್ಪರ್ಧೆಗೆ ಶಾಸಕ ಆರ್. ರಾಮದಾಸ್ ಚಾಲನೆ ನೀಡಿದರು. ಇಲ್ಲಿ ಮಹಿಳೆಯರು ಚಿತ್ತಾರಗಳನ್ನು ತುಂಬಿದ ರಂಗೋಲಿಗಳನ್ನು ಬಿಡಿಸುವ ಮೂಲಕ ಅರಮನೆಯ ಆವರಣವನ್ನು ವರ್ಣರಂಚಿತಗೊಳಿಸಿದರು.
ಇನ್ನೊಂದೆಡೆ ಜಗನ್ಮೋಹನ ಅರಮನೆಯಲ್ಲಿ ಮಕ್ಕಳಿಗಾಗಿ ನಡೆಯುತ್ತಿರುವ ಚಿಣ್ಣರ ದಸರಾಗೆ ವಿ.ಸೋಮಣ್ಣ ಚಾಲನೆ ನೀಡಿದರು. ಮಹಿಳಾ ದಸರಾಗೆ ಬಂದರೆ ಅಲ್ಲಿ ಹಾಲಿ ಮಾಜಿ ಎಂದು ಬಿಜೆಪಿಯ ಮಹಿಳೆಯರು ಹಾಗೂ ಸಚಿವರು ಗರಂ ಆಗಿದರು. ಜೆಕೆ ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ದಸರಾದ ಬ್ಯಾನರ್ ಅಲ್ಲಿ ಮಾಜಿ ಸಚಿವೆ ಉಮಾಶ್ರೀ ಫೋಟೋ ಇದ್ದ ಕಾರಣ ಸಚಿವ ಸೋಮಣ್ಣ ಮತ್ತು ಬಿಜೆಪಿಯ ಮಹಿಳೆಯರು ಗರಂ ಆಗಿದರು.
ಒಂದು ಕಡೆ ಮೈಸೂರಿನಲ್ಲಿ ದಸರಾ ಕಾರ್ಯಕ್ರಮಗಳ ಮೂಲಕ ಮನರಂಜನೆ ದೊರೆಯುತ್ತಿದ್ರೆ, ಇನ್ನೊಂದೆಡೆ ಆಹಾರ ಮೇಳದಲ್ಲಿ ನೋಡುಗರ ಬಾಯಲ್ಲಿ ನೀರೂರಿಸುವ ಹಾಗೂ ಬಿದ್ದು ನಕ್ಕು ನಲಿಯುವ ಸ್ಪರ್ಧೆಗಳು ನಡೆದವು. ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಅತ್ತೆ-ಸೊಸೆ ಜೋಡಿ ಅಡುಗೆ ಮಾಡುವ ಸ್ಪರ್ಧೆ ಕಮಾಲ್ ಮಾಡಿತು. ಅತ್ತೆ-ಸೊಸೆಯರಿಬ್ಬರು ಕೂಡಿಗೊಂಡು ಅಕ್ಕಿ ರೊಟ್ಟಿ ಮತ್ತು ಎಣಗಾಯಿ ಪಲ್ಯ ಮಾಡುತ್ತಿದ್ದು, ಎಲ್ಲರ ಬಾಯಲ್ಲಿ ನೀರೂರಿಸುವಂತೆ ಇತ್ತು.
ಮಹಿಳೆಯರಿಗಾಗಿಯೇ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆ ನೋಡುಗರು ನಕ್ಕು ನಲಿಯುವುದರ ಜೊತೆಗೆ ಬಾಯಿಯ ಮೇಲೆ ಬೆರಳಟ್ಟುಕೊಳ್ಳುವ ಹಾಗೆ ಮಾಡಿತು. ಈ ಸ್ಪರ್ಧೆಯಲ್ಲಿ 60 ವರ್ಷದ ಅಜ್ಜಿ ಸರೋಜಮ್ಮ ಒಂದೇ ನಿಮಿಷದಲ್ಲಿ 6 ಇಡ್ಲಿ ತಿನ್ನುವ ಮೂಲಕ ಮೊದಲ ಸ್ಥಾನ ಪಡೆದುಕೊಂಡರು.
ದಸರಾ ಮಹೋತ್ಸವ ಮೈಸೂರಿಗೆ ವಿಶೇಷ ಮೆರಗನ್ನು ನೀಡುತ್ತಿದ್ದು, ಹಗಲಿನ ವೇಳೆ ವಿವಿಧ ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸುತ್ತಿದ್ರೆ, ರಾತ್ರಿಯ ವೇಳೆ ವಿದ್ಯುತ್ ಅಲಂಕಾರದ ಮೂಲಕ ಕೈಲಾಸವೇ ಧರೆಗಿಳಿದಂತೆ ಬಾಸವಾಗುತ್ತಿದೆ. ಈ ರಂಗು ಇನ್ನೂ ಎಂಟು ದಿನಗಳ ಕಾಲ ಮೈಸೂರನ್ನು ಗತಕಾಲಕ್ಕೆ ಕರೆದೊಯ್ಯಲಿದೆ.
