ಹಾಸನ: ಹಾಸನಾಂಬೆ (Hasanamba) ದೇವಿ ಗರ್ಭಗುಡಿ ಬಾಗಿಲು ತೆರೆದು ಇಂದಿಗೆ ಮೂರನೇ ದಿನವಾಗಿದ್ದು, ಸಾರ್ವಜನಿಕ ದರ್ಶನಕ್ಕೆ ಎರಡನೇ ದಿನವಾಗಿದೆ.
ಹಾಸನಾಂಬೆ ದೇವಿ ದರ್ಶನಕ್ಕೆ ಈಗಾಗಲೇ ಭಕ್ತರು ಆಗಮಿಸುತ್ತಿದ್ದಾರೆ. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವಿ ದರ್ಶನ ಪಡೆಯುತ್ತಿದ್ದಾರೆ. ಭಕ್ತರ ಸಂಖ್ಯೆ ಕೊಂಚ ಕಡಿಮೆ ಇರುವುದರಿಂದ ಭಕ್ತರು ಬೇಗ ಬೇಗ ಹಾಸನಾಂಬೆಯ ದರ್ಶನ ಪಡೆಯುತ್ತಿದ್ದಾರೆ.
ಒಂದು ಸಾವಿರ ಹಾಗೂ 300 ರೂ. ವಿಶೇಷ ದರ್ಶನದ ಸಾಲು ಸದ್ಯಕ್ಕೆ ಖಾಲಿ ಖಾಲಿಯಾಗಿದ್ದು, ವೀಕೆಂಡ್ ಆದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದೆ. ಇದನ್ನೂ ಓದಿ: ಜನವಸತಿ ಪ್ರದೇಶದಲ್ಲೇ ಅಕ್ರಮ ಗಣಿಗಾರಿಕೆ- ಕಟ್ಟಡಗಳು ಬಿರುಕು, ಬೆಚ್ಚಿದ ಅಂಗನವಾಡಿ ಮಕ್ಕಳು
ವರ್ಷಕ್ಕೆ ಒಂದು ಬಾರಿಯಷ್ಟೇ ದರ್ಶನ ಭಾಗ್ಯ ಕರುಣಿಸಲಿರುವ ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ಓಪನ್ ಆಗಿದೆ. ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.24ಕ್ಕೆ ಗೊನೆಯುಳ್ಳ ಬಾಳೆ ಕಂಬ ಕಡಿದ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಗಿದೆ. ಈ ಬಾರಿಯ ಜಾತ್ರಾ ಮಹೋತ್ಸವ ಇಂದಿನಿಂದ ನ.15 ರವರೆಗೆ ನಡೆಯಲಿದೆ.
ಈ ಬಾರಿ ಜಾತ್ರಾ ಮಹೋತ್ಸವ ವಿಶೇಷತೆಯಿಂದ ಕೂಡಿದ್ದು ಹೆಲಿಟೂರಿಸಂ, ಪ್ಯಾರಾ ಸೈಲಿಂಗ್, ಪ್ಯಾರಾ ಮೋಟಾರ್, ಚಾಪರ್‍ನಲ್ಲಿ ಹಾರಾಟ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಈ ಬಾರಿ ಒಟ್ಟು ಹದಿನೈದು ದಿನಗಳಲ್ಲಿ 13 ದಿನ ಮಾತ್ರ ಸಾರ್ವಜನಿಕ ದರ್ಶನ ಹಾಗೂ ಶಕ್ತಿ ಯೋಜನೆ ಜಾರಿ ಇರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಮಳೆ ಬಂದರೆ ಭಕ್ತರು ನೆನೆಯದಂತೆ ಜರ್ಮನ್ ಟೆಂಟ್, ಫ್ಯಾನ್, ಎಸಿ ಸೇರಿ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಈ ಬಾರಿ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಮೂರು ಹೊತ್ತು ಕೂಡ ಪ್ರಸಾದ ವಿತರಣೆ ವ್ಯವಸ್ಥೆ ಕಲ್ಪಿಸಿದೆ.
Web Stories