Connect with us

Latest

ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪಾಸ್ – ಪರ 311, ವಿರುದ್ಧ 80 ಮತ

Published

on

ನವದೆಹಲಿ: ಭಾರೀ ಚರ್ಚೆಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಮಸೂದೆಯು 311 ಮತಗಳಿಂದ ಲೋಕಸಭೆಯಲ್ಲಿ ಪಾಸ್ ಆಗಿದೆ.

ಲೋಕಸಭೆಯಲ್ಲಿ ಸೋಮವಾರ ನಡೆದ ಪೌರತ್ವ ತಿದ್ದುಪಡಿ ಮಸೂದೆ ಚರ್ಚೆಯು ಕೋಲಾಹಲ ಉಂಟು ಮಾಡಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಸೂದೆಯನ್ನು ಸದನದಲ್ಲಿ ಮಂಡಿಸಿ ಮತಕ್ಕೆ ಹಾಕಿದರು. ಆದರೆ ಇದಕ್ಕೆ ವಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿ, ಇದು ಅಲ್ಪಸಂಖ್ಯಾತ ವಿರೋಧಿ ಎಂದು ಕರೆದರು. ಆರೋಪವನ್ನು ತಳ್ಳಿ ಹಾಕಿದ ಅಮಿತ್ ಶಾ, ಪೌರತ್ವ ತಿದ್ದುಪಡಿ ಮಸೂದೆಯು ಶೇ.0.001 ರಷ್ಟು ಕೂಡ ದೇಶದ ಅಲ್ಪಸಂಖ್ಯಾತ ಸಮೂದಾಯದ ವಿರುದ್ಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಮಸೂದೆ ಮಂಡನೆಗೂ ಮುನ್ನ ಮಾತನಾಡಿದ ಅಮಿತ್ ಶಾ, ನಿಮ್ಮ ಪ್ರತಿ ಪ್ರಶ್ನೆಗೂ ನಾವು ಉತ್ತರಿಸುತ್ತೇವೆ. ಆದರೆ ಸದನವನ್ನು ಬಹಿಷ್ಕರಿಸಿ ಹೊರನಡೆಯಬೇಡಿ. ಈ ಮಸೂದೆಯಲ್ಲಿ ಒಮ್ಮೆಯೂ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಲಾಗಿಲ್ಲ ಎಂದು ಮನವಿ ಮಾಡಿಕೊಂಡರು. ಇದನ್ನು ಲೆಕ್ಕಿಸಿದ ವಿಪಕ್ಷಗಳ ಸಂಸದರು, ಮಸೂದೆ ಮಂಡಿಸುವುದನ್ನು ವಿರೋಧಿಸುತ್ತಲೇ ಇದ್ದರು. ಇದರಿಂದಾಗಿ ಸುಮಾರು ಒಂದು ಗಂಟೆ ಸುದೀರ್ಘ ಚರ್ಚೆಯಾಯಿತು.

ಕಾಂಗ್ರೆಸ್‍ನ ಸಂಸದ, ಮುಖಂಡ ಅಧೀರ್ ರಂಜನ್ ಚೌಧರಿ, ಎಐಎಂಐಎಂನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ಅನೇಕ ಸಂಸದರು ಸದನದಲ್ಲಿ ಅಸಮಾಧಾನ ಹೊರಹಾಕಿದರು. ಈ ಎಲ್ಲ ಬೆಳವಣಿಗೆಯಿಂದಾಗಿ ಸ್ಪೀಕರ್ ಓಂ ಬಿರ್ಲಾ ಮಸೂದೆಯನ್ನು ಮಂಡಿಸಿ, ಮತದಾನಕ್ಕೆ ಹಾಕುವಂತೆ ನಿರ್ದೇಶನ ನೀಡಿದರು. ಮಸೂದೆಯನ್ನು ಮತಕ್ಕೆ ಹಾಕಿದ್ದಾಗ 391 ಸಂಸದರು ಮತದಾನದಲ್ಲಿ ಭಾಗವಹಿಸಿದ್ದರು. ಈ ಪೈಕಿ 311 ಸಂಸದರು ಮಸೂದೆ ಪರವಾಗಿ ಮತ ಹಾಕಿದರೆ, ಪ್ರತಿಪಕ್ಷದ 80 ಸಂಸದರು ವಿರೋಧವಾಗಿ ಮತ ಹಾಕಿದರು. ಪೌರತ್ವ ತಿದ್ದುಪಡಿ ಮಸೂದೆಯೂ ಬಹುಮತ ಪಡೆದು ಲೋಕಸಭೆಯಲ್ಲಿ ಪಾಸ್ ಆಗಿದೆ.

ಧಾರ್ಮಿಕ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಸದನದಲ್ಲಿ ಗದ್ದಲ ಶುರು ಮಾಡಿದರುವು. ಮಸೂದೆಯನ್ನು ಮಂಡಿಸಿದರೆ ಅಮಿತ್ ಶಾ ಅವರ ಹೆಸರನ್ನು ಹಿಟ್ಲರ್ ಹಾಗೂ ಇಸ್ರೇಲ್‍ನ ಮೊದಲ ಪ್ರಧಾನಿ ಡೇವಿಡ್ ಬೆನ್ ಗುರಿಯನ್ ಅವರೊಂದಿಗೆ ಸೇರಿಸಲಾಗುವುದು ಎಂದು ಅಸಾದುದ್ದೀನ್ ಓವೈಸಿ ಗುಡುಗಿದರು. ಅವರ ಈ ಹೇಳಿಕೆಗೆ ಬಿಜೆಪಿ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಪೀಕರ್ ಓಂ ಬಿರ್ಲಾ ಅವರು, ಸದನದಲ್ಲಿ ಅಸಂಸದೀಯ ಪದಗಳನ್ನು ಬಳಸಬೇಡಿ. ನಿಮ್ಮ ಹೇಳಿಕೆಯನ್ನು ದಾಖಲೆಯಿಂದ ತೆಗೆದು ಹಾಕಲಾಗುತ್ತದೆ ಎಂದು ಸೂಚಿಸಿದರು.

ವಿಪಕ್ಷಗಳಿಗೆ ಶಾ ಸುದೀರ್ಘ ಉತ್ತರ:
ವಿಪಕ್ಷಗಳ ಆರೋಪಗಳಿಗೆ ಅಮಿತ್ ಶಾ ಉತ್ತರಿಸಲು ಆರಂಭಿಸಿ, ಈ ಮಸೂದೆ ಯಾವುದೇ ರೀತಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧವಲ್ಲ. ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸದಿದ್ದರೆ, ಪೌರತ್ವ ಮಸೂದೆಯನ್ನು ತರುವ ಅಗತ್ಯವೇ ಇರಲಿಲ್ಲ. ಸಮಾನತೆಯ ಕಾನೂನು ಇದ್ದರೆ ಅಲ್ಪಸಂಖ್ಯಾತರಿಗೆ ಹೇಗೆ ಸವಲತ್ತುಗಳು ಸಿಗುತ್ತವೆ? ಸಂವಿಧಾನದ 14ನೇ ವಿಧಿ ಶಿಕ್ಷಣ ಮತ್ತು ಇತರ ವಿಷಯಗಳಲ್ಲಿ ಉಲ್ಲಂಘನೆಯಾಗಿಲ್ಲವೇ? ಎಲ್ಲ ಉಲ್ಲಂಘನೆಗಳನ್ನು ಗಣನೆಗೆ ತೆಗೆದುಕೊಂಡ ನಂತರವೇ ಮಸೂದೆಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಅಫ್ಘಾನಿಸ್ತಾನದ ಸಂವಿಧಾನದ 2ನೇ ವಿಧಿ ಪ್ರಕಾರ, ಆ ದೇಶ ಇಸ್ಲಾಮಿಕ್ ಆಗಿದೆ. ಪಾಕಿಸ್ತಾನ ಕೂಡ ಇಸ್ಲಾಮಿಕ್ ಆಗಿದೆ. ಬಾಂಗ್ಲಾದೇಶದ ಸಂವಿಧಾನದಲ್ಲಿ ಇಸ್ಲಾಂ ಧರ್ಮ ಎಂದು ತಿಳಿಸಲಾಗಿದೆ. ನಾನು ಇದನ್ನು ಉಲ್ಲೇಖಿಸುತ್ತಿದ್ದೇನೆ. ಏಕೆಂದರೆ ಈ ಮೂರು ದೇಶಗಳ ಸಂವಿಧಾನವು ಧರ್ಮವನ್ನು ಉಲ್ಲೇಖಿಸುತ್ತದೆ. ಆದರೂ ಈ ಮೂರು ದೇಶಗಳಿಂದ ನಿರಾಶ್ರಿತರು ಇಲ್ಲಿಗೆ ಬರುತ್ತಿದ್ದಾರೆ ಎಂದು ಹೇಳಿದರು.

ತುಳಿತಕ್ಕೊಳಗಾದ ಮುಸ್ಲಿಮರಿಗೆ ಆಶ್ರಯ ನೀಡುವ ಕುರಿತು ಪ್ರತಿಕ್ರಿಯಿಸಿದ ಅಮಿತ್ ಶಾ, ಮೂರು ನೆರೆಹೊರೆಯ ದೇಶಗಳ ಯಾವುದೇ ಮುಸ್ಲಿಂ ಧಾರ್ಮಿಕ ಕಿರುಕುಳದ ಆಧಾರದ ಮೇಲೆ ಪೌರತ್ವವನ್ನು ಕೋರಿದರೆ, ನಾವು ಮುಕ್ತ ಮನಸ್ಸಿನಿಂದ ಪರಿಗಣಿಸುತ್ತೇವೆ. ಪ್ರಧಾನಿ ಮೋದಿ ಸರ್ಕಾರದ ಹಿಂದಿನ ಅವಧಿಯಲ್ಲಿ ಪೌರತ್ವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದರೂ ರಾಜ್ಯಸಭೆಯಲ್ಲಿ ಸಿಲುಕಿಕೊಂಡಿತ್ತು. ಈ ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಡಿಸೆಂಬರ್ 4ರಂದು ಅಂಗೀಕರಿಸಿತ್ತು. ಈ ಮಸೂದೆಯು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಮುಸ್ಲಿಮೇತರರಿಗೆ (ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು) ಭಾರತೀಯ ಪೌರತ್ವ ನೀಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *