ಸುಕ್ಮಾ: ಛತ್ತೀಸ್‌ಗಢದ (Chhattisgarh) ಸುಕ್ಮಾ ಜಿಲ್ಲೆಯಲ್ಲಿ 29 ಮಂದಿ ನಕ್ಸಲರು (Naxalites) ಮುಖ್ಯವಾಹಿನಿ ಸೇರಿದ್ದಾರೆ. ಈ ಶರಣಾಗತಿಯಲ್ಲಿ ಗೊಗುಂಡಾ ಪ್ರದೇಶದ ದಂಡಕಾರಣ್ಯ ಆದಿವಾಸಿ ಕಿಸಾನ್ ಮಜದೂರ್ ಸಂಘಟನೆಯ ನಾಯಕ ಪೊಡಿಯಂ ಬುದ್ರಾ ಸೇರಿದ್ದಾರೆ. ಇವರ ಮೇಲೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಡಿಎಕೆಎಂಎಸ್ ಸದಸ್ಯರು, ಮಿಲಿಷಿಯಾ ಸಿಬ್ಬಂದಿ ಹಾಗೂ ಜನತಾನಾ ಸರ್ಕಾರ್‌ನ ಕಾರ್ಯಕರ್ತರು ಈ ಗುಂಪಿನಲ್ಲಿದ್ದರು. ಸುಕ್ಮಾ (Sukma) ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾನ್ ಅವರು ಮಾತನಾಡಿ, ರಾಜ್ಯ ಸರ್ಕಾರದ ಪೂನಾ ಮಾರ್ಗೆಂ ಯೋಜನೆಯಡಿ ಈ ಶರಣಾಗತಿ ನಡೆದಿದೆ. ಗೊಗುಂಡಾದಲ್ಲಿ ಇತ್ತೀಚೆಗೆ ಸ್ಥಾಪಿಸಲಾದ ಭದ್ರತಾ ಕ್ಯಾಂಪ್‌ನಿಂದ ತೀವ್ರ ಆ್ಯಂಟಿ-ನಕ್ಸಲ್ ಕಾರ್ಯಾಚರಣೆಗಳು, ಶೋಧ ಕಾರ್ಯಾಚರಣೆಗಳು ನಡೆದಿವೆ. ಇದರಿಂದ ಮಾವೋವಾದಿಗಳ ಬೆಂಬಲ ವ್ಯವಸ್ಥೆ ದುರ್ಬಲಗೊಂಡಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ತೆಲಂಗಾಣದಲ್ಲಿ 500 ಬೀದಿನಾಯಿಗಳ ಸಾಮೂಹಿಕ ಹತ್ಯೆ
ಗೊಗುಂಡಾದ ದಟ್ಟ ಕಾಡು ಮತ್ತು ದುರ್ಗಮ ಪ್ರದೇಶ ಒಂದು ಕಾಲದಲ್ಲಿ ಮಾವೋವಾದಿಗಳ ದರ್ಭಾ ವಿಭಾಗಕ್ಕೆ ಸುರಕ್ಷಿತ ಆಶ್ರಯವಾಗಿತ್ತು. ಆದರೆ, ಹೊಸ ಭದ್ರತಾ ಕ್ಯಾಂಪ್‌ನಿಂದ ಒತ್ತಡ ಹೆಚ್ಚಾದ ನಂತರ ಈ ಶರಣಾಗತಿಗಳು ಸಾಧ್ಯವಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಶರಣಾಗತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜನವರಿ 8 ರಂದು ದಂತೆವಾಡಾದಲ್ಲಿ 63 ಮಂದಿ, ಜನವರಿ 7 ರಂದು ಸುಕ್ಮಾದಲ್ಲೇ 26 ಮಂದಿ ಶರಣಾಗತರಾಗಿದ್ದರು. 2025 ರಲ್ಲಿ ರಾಜ್ಯಾದ್ಯಂತ 1500ಕ್ಕೂ ಹೆಚ್ಚು ನಕ್ಸಲರು ಶರಣಾಗತರಾಗಿದ್ದಾರೆ. ಕೇಂದ್ರ ಸರ್ಕಾರವು ಮಾರ್ಚ್ 31ರೊಳಗೆ ದೇಶದಿಂದ ನಕ್ಸಲ್‌ವಾದವನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವ ಗುರಿಯನ್ನು ಇಟ್ಟುಕೊಂಡಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ 500 ಬೀದಿನಾಯಿಗಳ ಸಾಮೂಹಿಕ ಹತ್ಯೆ

