ನವದೆಹಲಿ/ಕಾರವಾರ: ಯುಪಿಎಸ್‍ಸಿ ಪರೀಕ್ಷೆ ಸಿದ್ಧತೆ ನಡೆಸಿ ಪರೀಕ್ಷೆಗೆ ಹಾಜರಾಗಲು ಬಯಸಿದ್ದ ಕನ್ನಡಿಗ ಅಭ್ಯರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಮೂಲತಃ ಕಾರವಾರ ಜಿಲ್ಲೆಯ ಕುಮಟಾ ಮೂಲದ ನಿವಾಸಿಯಾಗಿದ್ದ ವರುಣ್ ಚಂದ್ರ (28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುಪಿಎಸ್‍ಸಿ ಪರೀಕ್ಷೆಗೆ ಹಲವು ದಿನಗಳಿಂದ ಸಿದ್ಧತೆ ನಡೆಸಿದ್ದ ವರುಣ್ ಜೂನ್ 03 ರ ಭಾನುವಾರ ನಡೆದ ಪರೀಕ್ಷೆ ತೆಗೆದುಕೊಳ್ಳಬೇಕಿತ್ತು.
ಏನಿದು ಘಟನೆ: ಈ ವರ್ಷ ವರುಣ್ ಚಂದ್ರ ಯುಪಿಎಸ್‍ಸಿ ಪರೀಕ್ಷೆಗೆ ತೆಗೆದುಕೊಂಡಿದ್ದು, ದೆಹಲಿಯ ಪಹಾಡ್ ಗಂಜ್ ಕೇಂದ್ರದಲ್ಲಿ ಪರೀಕ್ಷೆ ನಿಗಧಿ ಯಾಗಿತ್ತು. ಆದರೆ ಭಾನುವಾರ ಪರೀಕ್ಷಾ ಸಮಯಕ್ಕೆ ವರುಣ್ ಕೇಂದ್ರವನ್ನು ತಲುಪಲು ವಿಫಲವಾಗಿದ್ದರು. ಅದ್ದರಿಂದ ಅಧಿಕಾರಿಗಳು ಪರೀಕ್ಷಾ ನಿಯಮಗಳ ಅನ್ವಯ ಪರೀಕ್ಷಾ ಕೊಠಡಿಯ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ. ಇದರಿಂದ ಮನನೊಂದ ವರುಣ್ ದೆಹಲಿಯ ರಾಜೇಂದ್ರ ನಗರದಲ್ಲಿನ ತನ್ನ ರೂಮಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿರುವ ವರುಣ್ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದು, ಅಲ್ಲದೇ ಪತ್ರದಲ್ಲಿ ಪರೀಕ್ಷೆಯ ಸಮಯ ಹಾಗೂ ನಿಯಮಗಳನ್ನು ಉಲ್ಲೇಖಿಸಿರುವುದಾಗಿ ವರದಿಯಾಗಿದೆ. ಸದ್ಯ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.
ದೇಶದಲ್ಲಿ ಸಿವಿಲ್ ಪರೀಕ್ಷೆಗಳನ್ನು ವರ್ಷದಲ್ಲಿ ಪೂರ್ವಭಾವಿ, ಮುಖ್ಯ, ಸಂದರ್ಶನ ಎಂಬ ಮೂರು ಹಂತಗಳಲ್ಲಿ ಯುಪಿಎಸ್‍ಸಿ ನಡೆಸುತ್ತದೆ. ಈ ಮೂರು ಪರೀಕ್ಷೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್‍ಎಸ್) ಹಾಗೂ ಭಾರತೀಯ ಪೊಲೀಸ್ ಸೇವೆ (ಐಎಎಸ್) ಸೇರಿದಂತೆ ವಿವಿಧ ಸೇವೆಗಳಿಗೆ ನಿಯೋಜನೆ ಮಾಡಲಾಗುತ್ತದೆ. ಈ ವರ್ಷ ಜೂನ್ 3ರಂದು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಎರಡು ಹಂತಗಳಲ್ಲಿ ಪೂರ್ವಭಾವಿ ಪರೀಕ್ಷೆ ನಡೆಸಿತ್ತು.