ಕರ್ನಾಟಕದಲ್ಲಿ 23, ದೇಶದಲ್ಲಿದೆ 277 ನಕಲಿ ಎಂಜಿನಿಯರಿಂಗ್ ಕಾಲೇಜುಗಳು!

Public TV
1 Min Read
UGC 1

ನವದೆಹಲಿ: ದೇಶದಲ್ಲಿ ಒಟ್ಟಾರೆ 277 ನಕಲಿ ಎಂಜಿನಿಯರಿಂಗ್ ಕಾಲೇಜುಗಳು ಇರುವುದಾಗಿ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.

ದೇಶಾದ್ಯಂತ ಇರುವ ನಕಲಿ ಕಾಲೇಜುಗಳ ಪೈಕಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿಹೆಚ್ಚು 66 ನಕಲಿ ಕಾಲೇಜುಗಳಿವೆ. ಉಳಿದಂತೆ ತೆಲಂಗಾಣದಲ್ಲಿ 35, ಪಶ್ಚಿಮ ಬಂಗಾಳದಲ್ಲಿ 23 ಕಾಲೇಜುಗಳಿದ್ದು ಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿದೆ.

ಕರ್ನಾಟಕ ನಕಲಿ ಕಾಲೇಜುಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದು, 23 ನಕಲಿ ಕಾಲೇಜುಗಳಿದೆ. ನಂತರದಲ್ಲಿ ಉತ್ತರ ಪ್ರದೇಶದ 5ನೇ ಸ್ಥಾನದಲ್ಲಿದ್ದು 22 ನಕಲಿ ಕಾಲೇಜುಗಳು ಪತ್ತೆಯಾಗಿದೆ.

UGC

ದೇಶದಲ್ಲಿ ನಕಲಿ ಎಂಜಿನಿಯರಿಂಗ್ ಕಾಲೇಜುಗಳು ಎಷ್ಟಿವೆ ಎಂದು ಎಐಎಂಡಿಕೆ ಸಂಸದ ಪಿ ನಾಗರಾಜನ್, ಬಿಜೆಪಿಯ ಲಕ್ಷ್ಮಣ್ ಗಲುವಾ ಹಾಗೂ ರಮಾದೇವಿ ಅವರು ಪ್ರಶ್ನಿಸಿದ್ದರು. ಮೂವರ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಮಾನವ ಸಂಪನ್ಮೂಲ ಖಾತೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ನಕಲಿ ಕಾಲೇಜುಗಳ ವಿವರ ನೀಡಿದರು. ಅಲ್ಲದೇ ಇಂತಹ ಕಾಲೇಜುಗಳ ಮೇಲೆ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದು, ರಾಜ್ಯ ಸರ್ಕಾರಗಳು ಇಂತಹ ಕಾಲೇಜುಗಳನ್ನು ಮುಚ್ಚಲು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ನಕಲಿ ಕಾಲೇಜುಗಳ ಮಾಹಿತಿಯನ್ನು ಸಾರ್ವಜನಿಕವಾಗಿ ನೋಟಿಸ್ ನೀಡುವ ಮೂಲಕ ಮಾಹಿತಿ ನೀಡಲಾಗುವುದು. ಅಲ್ಲದೇ ರಾಜ್ಯ ಸರ್ಕಾರಗಳು ಹೊಸ ಕಾಲೇಜು ಆರಂಭಿಸಲು ಹಾಗೂ ಅವುಗಳನ್ನು ಮುಚ್ಚಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅನುಮತಿ ಕಡ್ಡಾಯ ಎಂದು ತಿಳಿಸಿದರು.

ನಕಲಿ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ತನ್ನ ವೆಬ್‍ಸೈಟ್ ನಲ್ಲಿ ಪ್ರಕಟಿಸಿದೆ. ಅಲ್ಲದೇ ಈ ಪಟ್ಟಿಯನ್ನು ನಿರಂತರವಾಗಿ ಪರಿಶೀಲನೆ ನಡೆಸಿ ಹೊಸ ನಕಲಿ ಕಾಲೇಜು ಪತ್ತೆಯಾದರೆ ಅವುಗಳನ್ನು ಸಾರ್ವಜನಿಕವಾಗಿ ಪ್ರಕಟಗೊಳಿಸಲಿದೆ.

Share This Article
Leave a Comment

Leave a Reply

Your email address will not be published. Required fields are marked *