– ಬೆಂಗಳೂರಿನಲ್ಲಿ ಕೊರೊನಾ ನಿಗೂಢ ಹೆಜ್ಜೆ
– ರಾಜ್ಯದಲ್ಲಿ ಈಗ ಸಕ್ರೀಯ ಪ್ರಕರಣಗಳಿಗಿಂತ ಬಿಡುಗಡೆಯಾದವರ ಸಂಖ್ಯೆ ಹೆಚ್ಚು
ಬೆಂಗಳೂರು: ಹೊಸದಾಗಿ 271 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6,516ಕ್ಕೆ ಏರಿಕೆಯಾಗಿದೆ. ಇಂದು ಒಟ್ಟು 464 ಮಂದಿ ಬಿಡುಗಡೆಯಾಗಿದ್ದು, 7 ಮಂದಿ ಮೃತಪಟ್ಟಿದ್ದಾರೆ.
ಇಂದಿನ 271 ಸೋಂಕಿತರ ಪೈಕಿ 92 ಅಂತರಾಜ್ಯ ಪ್ರಯಾಣಿಕರಿದ್ದರೆ 14 ಮಂದಿ ಅಂತರಾಷ್ಟ್ರೀಯ ಪ್ರಯಾಣಿಕರಿದ್ದಾರೆ. ಒಟ್ಟು 6,516 ಸೋಂಕಿತರ ಪೈಕಿ 2,995 ಸಕ್ರಿಯ ಪ್ರಕರಣಗಳಿದ್ದು 3,440 ಮಂದಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳಿಗಿಂತ ಬಿಡುಗಡೆಯಾದವರ ಸಂಖ್ಯೆ ಹೆಚ್ಚಾಗಿದೆ.
ಬೆಂಗಳೂರು ನಗರದಲ್ಲಿ 4 ಮಂದಿ, ಕಲಬುರಗಿಯಲ್ಲಿ 2, ಹಾಸನದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ ಒಟ್ಟು 79 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಕಂಡು ಬಂದ 36 ಮಂದಿ ಪೈಕಿ 26 ಜನರ ಸೋಂಕಿನ ಮೂಲವೇ ನಿಗೂಢವಾಗಿದೆ.
ಮೃತಪಟ್ಟವರ ವಿವರ:
ರಕ್ತದೊತ್ತಡ, ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಬೆಂಗಳೂರಿನ 61 ವರ್ಷದ ಮಹಿಳೆ ಜೂನ್ 6 ರಂದು ಆಸ್ಪತ್ರೆಗೆ ದಾಖಲಾಗಿದ್ದು, 12 ರಂದು ಮೃತಪಟ್ಟಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 60 ವರ್ಷದ ಹಾಸನದ ಪುರುಷ ಜೂನ್ 11 ರಂದು ಆಸ್ಪತ್ರೆಗೆ ದಾಖಲಾಗಿದ್ದು 12ರಂದು ನಿಧನರಾಗಿದ್ದಾರೆ.
ಕಲಬುರಗಿಯ 53 ವರ್ಷ ಮತ್ತು 48 ವರ್ಷದ ಇಬ್ಬರು ಪುರುಷರಿಗೆ ಉಸಿರಾಟದ ಸಮಸ್ಯೆ ಇತ್ತು. ಇವರಿಬ್ಬರು ಜೂನ್ 9 ರಂದು ಆಸ್ಪತ್ರೆಗೆ ದಾಖಲಾಗಿ 10 ರಂದು ಮೃತಪಟ್ಟಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬೆಂಗಳೂರು ನಗರದ 52 ವರ್ಷದ ವ್ಯಕ್ತಿ ಮತ್ತು ಜ್ವರ, ಕೆಮ್ಮುನಿಂದ ಬಳಲುತ್ತಿದ್ದ 49 ವರ್ಷದ ಬೆಂಗಳೂರಿನ ಮಹಿಳೆ ಜೂನ್ 11 ರಂದು ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಎಲ್ಲಿ ಎಷ್ಟು ಮಂದಿ ಬಿಡುಗಡೆ?
ಇಂದು ಒಟ್ಟು 464 ಮಂದಿ ಬಿಡುಗಡೆಯಾಗಿದ್ದು ಈ ಪೈಕಿ ಯಾದಗಿರಿ 129, ಉಡುಪಿ 125, ಬೆಳಗಾವಿ 62, ಕಲಬುರಗಿ 60, ಬೀದರ್ 22, ದಕ್ಷಿಣ ಕನ್ನಡ 17, ಚಿತ್ರದುರ್ಗ 16, ಶಿವಮೊಗ್ಗ 12, ಹಾವೇರಿ 7, ಬಾಗಲಕೋಟೆ 5, ಉತ್ತರ ಕನ್ನಡ 3, ದಾವಣಗೆರೆ 3, ಚಿಕ್ಕಬಳ್ಳಾಪುರ 2, ಗದಗ್ ನಲ್ಲಿ ಒಬ್ಬರು ಬಿಡುಗಡೆಯಾಗಿದ್ದಾರೆ.
ಎಲ್ಲಿ ಎಷ್ಟು ಮಂದಿಗೆ ಸೋಂಕು?
ಬಳ್ಳಾರಿ 97, ಬೆಂಗಳೂರು ನಗರ 36, ಉಡುಪಿ 22, ಕಲಬುರಗಿ 20, ಧಾರವಾಡ 19, ದಕ್ಷಿಣ ಕನ್ನಡ 17, ಬೀದರ್ 10, ಹಾಸನ 9, ಮೈಸೂರು 9, ತುಮಕೂರು 7, ಶಿವಮೊಗ್ಗ 6, ರಾಯಚೂರು 4, ಉತ್ತರ ಕನ್ನಡ 4, ಚಿತ್ರದುರ್ಗ 3, ರಾಮನಗರ 3, ಮಂಡ್ಯ 2, ಬೆಳಗಾವಿ, ವಿಜಯಪುರ, ಕೋಲಾರದಲ್ಲಿ ತಲಾ ಒಂದೊಂದು ಪ್ರಕರಣ ಬೆಳಕಿಗೆ ಬಂದಿದೆ.
ಐಸಿಯುನಲ್ಲಿ ಎಷ್ಟು ಮಂದಿ?
ಬೆಂಗಳೂರು ನಗರದಲ್ಲಿ 11, ಕಲಬುರಗಿ 3, ಬೀದರ್ 2, ಮಂಡ್ಯ ಮತ್ತು ದಕ್ಷಿಣ ಕನ್ನಡದಲ್ಲಿ ಒಬ್ಬರು ಐಸಿಯುನಲ್ಲಿದ್ದಾರೆ.