ಬೆಂಗಳೂರು: 2018ರ ನಾಗರಿಕ ಸೇವಾ ಆಯೋಗ ನಡೆಸಿದ್ದ ಐಎಎಸ್ ಮೌಖಿಕ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಕರ್ನಾಟಕದಲ್ಲಿ ಒಟ್ಟು 27 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಅದರಲ್ಲಿ ಡಾ ರಾಜ್‍ಕುಮಾರ್ ಅಕಾಡೆಮಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ನಾಡು ನುಡಿ ಜಲಕ್ಕಾಗಿ ಸೇವೆ ಸಲ್ಲಿಸಿದ್ದ ಕಲಾವಿದ ಡಾ. ರಾಜ್‍ಕುಮಾರ್ ಹೆಸರಿಗೆ ಅದೆಷ್ಟು ಶಕ್ತಿ ಇದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಕಡಿಮೆ ಶುಲ್ಕದಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಗೆ ಕೋಚ್ ಕೊಡೋಕೆ ಶುರುವಾದ ಡಾ.ರಾಜ್‍ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಿಂದ ಮೊದಲ ವರ್ಷದಲ್ಲೇ 16 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಈ ಬಾರಿಯ ನಾಗರಿಕಾ ಸೇವಾ ಆಯೋಗದ ಮೌಖಿಕ ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ ಒಟ್ಟು 27 ವಿದ್ಯಾರ್ಥಿಗಳು ರ‍್ಯಾಂಕಿಂಗ್ ಗೆ ಒಳಪಡುತ್ತಾರೆ. ಅದರಲ್ಲಿ ಸಿಂಹಪಾಲು ಡಾ. ರಾಜ್‍ಕುಮಾರ್ ಅಕಾಡೆಮಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳದ್ದಾಗಿದೆ.
ಕನ್ನಡಿಗರಿಗೆ ಕಬ್ಬಿಣದ ಕಡಲೆಯಂತಿದ್ದ ಐಎಸ್‍ಎಸ್ ಪರೀಕ್ಷೆಯನ್ನ ಸುಲಭ ಮಾಡೋಕೆ ದೆಹಲಿಯ ಶ್ರೀನಿವಾಸ್ ಮತ್ತು ಡಾ. ರಾಜ್‍ಕುಮಾರ್ ಕುಟುಂಬ ಬೆಂಗಳೂರಿನ ಚಂದ್ರ ಲೇಔಟ್‍ನಲ್ಲಿ ರಾಜ್‍ಕುಮಾರ್ ಹೆಸರಲ್ಲಿ ದೊಡ್ಡ ಸಂಸ್ಥೆಯೊಂದನ್ನ ಕಳೆದ ಮಾರ್ಚ್‍ನಲ್ಲಿ ಶುರುಮಾಡಿತ್ತು. ಮೊದಲ ವರ್ಷದ ರಿಸಲ್ಟ್ ಉತ್ತಮವಾಗಿ ಬಂದಿರೋದು ವಿದ್ಯಾರ್ಥಿಗಳಲ್ಲೂ ಮ್ಯಾನೇಜ್ಮೆಂಟ್‍ಗೂ ಹೊಸ ಹುರುಪು ತಂದಿದೆ.
ಸಾಮಾನ್ಯವಾಗಿ ಕಲಾವಿದರ ಹೆಸರಲ್ಲಿ ಅಭಿನಯ ತರಬೇತಿ ಶಾಲೆಗಳಿರೋದು ಸಾಮಾನ್ಯ. ಆದರೆ ರಾಜ್ಯದ ಬುದ್ಧಿವಂಥ ವಿದ್ಯಾರ್ಥಿಗಳನ್ನ ದೇಶದ ಅತ್ಯುತ್ತಮ ಹುದ್ದೆಗೆ ಆಯ್ಕೆ ಮಾಡುವ ಸಂಸ್ಥೆಯನ್ನ ತೆರೆದು ಮೊದಲ ವರ್ಷದಲ್ಲೇ ಉತ್ತಮ ಫಲಿತಾಂಶ ಪಡೆದಿರೋದು ಸರ್ವರಲ್ಲೂ ಅಚ್ಚರಿ ಮೂಡಿಸಿದೆ. ಇದರಿಂದ ರಾಜ್ ಅಭಿಮಾನಿಗಳು ಹಾಗೂ ಸಂಸ್ಥೆ ಎದೆಯುಬ್ಬಿಸಿ ನಡೆಯುತ್ತಿದೆ.