ಲಕ್ನೋ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ (Hathras, Uttarpradesh) ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿದ್ದು, 25 ಮಂದಿ ಮಹಿಳೆಯರು ಸೇರಿ ಒಟ್ಟು 27 ಜನ ಸಾವನ್ನಪ್ಪಿದ್ದಾರೆ.
ರತಿಭಾನಪುರದಲ್ಲಿ ಭೋಲೆಬಾಬಾ ಪ್ರವಚನ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕಾಲ್ತುಳಿತ ಉಂಟಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದರು. ಇನ್ನು ಪ್ರವಚನದಲ್ಲಿ ಪಾಲ್ಗೊಳ್ಳಲು ಬಂದಿದ್ದ ನೂರಾರು ಭಕ್ತರು ಬಿಸಿಲಿನ ತಾಪಕ್ಕೆ ಮೂರ್ಛೆ ಹೋದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಮತ್ತು ಆಡಳಿತವು ಸ್ಥಳಕ್ಕೆ ಧಾವಿಸಿದ್ದು, ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 15 ಮಹಿಳೆಯರು ಮತ್ತು ಮಕ್ಕಳನ್ನು ಎಟಾಹ್ ಮೆಡಿಕಲ್ ಕಾಲೇಜಿಗೆ ಕರೆದೊಯ್ಯಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.