ಚೆನ್ನೈ: ವಯಸ್ಸಾಗುತ್ತಿದ್ದರು ಇನ್ನೂ ಮದುವೆಯಾಗಿಲ್ಲ (Marriage) ಅನ್ನೋ ಹುಡುಗರು ಒಂದು ಕಡೆ. ಮತ್ತೊಂದು ಕಡೆ ಹುಡುಗಿ ಸಿಕ್ಕರೂ ಮದುವೆ ಆಗೋದು ಗ್ಯಾರಂಟಿ ಇರುವುದಿಲ್ಲ. ಎಷ್ಟೋ ಯುವಕರು (Youth) 35 ರಿಂದ 40ರ ಹರೆಯಕ್ಕೆ ಬಂದರೂ ಹೆಣ್ಣು ಸಿಗೋದು ಕಷ್ಟ. ಆದರೆ ಇಲ್ಲೊಬ್ಬ ಆಸಾಮಿ ತನ್ನ 26ನೇ ವಯಸ್ಸಿಗೇ 13 ಜಿಲ್ಲೆಗಳಲ್ಲಿ 21 ಯುವತಿಯರನ್ನು ವರಿಸುವ ಮೂಲಕ ನೆಟ್ಟಿಗರ ಹುಬ್ಬೇರಿರುವಂತೆ ಮಾಡಿದ್ದಾನೆ.
ಹೌದು. ತಮಿಳುನಾಡಿನ (Tamil Nadu) ತಂಜಾವೂರು ಜಿಲ್ಲೆಯ ರಾಮನಪುಡಿ ಮೂಲದ ಕಾರ್ತಿಕ್ ರಾಜ (26) ಎಂಬ ಭೂಪನೇ 21 ಯುವತಿಯರನ್ನ ಮದುವೆಯಾಗಿ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಈತ ರಾಣಿ ಎಂಬಾಕೆಯನ್ನ ಮದುವೆಯಾಗಿದ್ದ (Marriage). ಆಗ ವಧುವಿನ ಕಡೆಯವರು ಕಾರ್ತಿಕ್‌ಗೆ 5 ಎಕರೆ ಭೂಮಿ, ಒಂದೂವರೆ ಲಕ್ಷ ಹಣ ಹಾಗೂ ಚಿನ್ನಾಭರಣಗಳನ್ನ ವರದಕ್ಷಿಣೆಯಾಗಿ ಕೊಟ್ಟಿದ್ದರು. ಆದರೆ ಕೆಲವೇ ದಿನಗಳಲ್ಲಿ ಕಾರ್ತಿಕ್ ಹಣದೊಂದಿಗೆ ಪರಾರಿಯಾಗಿದ್ದ, ಬಳಿಕ ಹುಡುಕಾಡಿದ್ದರೂ ಆತನ ಸುಳಿವು ಸಿಕ್ಕಿರಲಿಲ್ಲ. ಕೆಲ ದಿನಗಳ ಬಳಿಕ ಕಾರ್ತಿಕ್ ಸುಳಿವು ಸಿಕ್ಕ ನಂತರ ರಾಣಿ ಕುಟುಂಬ ಪೊಲೀಸ್ ಠಾಣೆಗೆ (Police Station) ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ತೀವ್ರ ಶೋಧ ನಡೆಸಿ ಕಾರ್ತಿಕ್‌ನನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ಬಳಿಕ ನಡೆದ ವಿಚಾರಣೆಯಲ್ಲಿ ಅನೇಕ ಶಾಕಿಂಗ್ ಸಂಗತಿಗಳನ್ನು ಆರೋಪಿ ಕಾರ್ತಿಕ್ ಬಾಯ್ಬಿಟ್ಟಿದ್ದಾನೆ. ಕಾರ್ತಿಕ್ ಈವರೆಗೆ ರಾಣಿ ಸೇರಿದಂತೆ ಒಟ್ಟು 21 ಯುವತಿಯರನ್ನ ಮದುವೆಯಾಗಿದ್ದಾನೆಂದು ತಿಳಿದುಬಂದಿದೆ. ಇದನ್ನೂ ಓದಿ: ಸಾಲ ವಂಚನೆ ಪ್ರಕರಣ – ವೀಡಿಯೋಕಾನ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಬಂಧನ
ಆರೋಪಿ ಕಾರ್ತಿಕ್ ರಾಜ ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದ. ಹಣ ಸಂಪಾದನೆಗಾಗಿ ಈ ಮಾರ್ಗವನ್ನು ಆಯ್ದುಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಒಳ್ಳೆಯ ಉದ್ಯೋಗದಲ್ಲಿದ್ದೇನೆ ಎಂದು ಹೇಳಿದ್ರೆ ಜಾಸ್ತಿ ವರದಕ್ಷಿಣೆ ಕೊಡುತ್ತಾರೆ ಅಂತಾ ಸುಳ್ಳು ಹೇಳುತ್ತಿದ್ದನು. ತನ್ನ ಯೋಜನೆಯಂತೆ ಬೇರೆ ಬೇರೆ ಹೆಸರಿನ ಯುವತಿಯರನ್ನ ಮದುವೆಯಾಗುತ್ತಿದ್ದ. ಬಳಿಕ ಯಾವೊಬ್ಬ ಪತ್ನಿಯ ಜೊತೆಯೂ ಆತ ಕನಿಷ್ಠ ಪಕ್ಷ 5 ತಿಂಗಳು ಸಹ ಕಳೆಯುತ್ತಿರಲಿಲ್ಲ. ಮದುವೆಯ ಬಳಿಕ ಎಲ್ಲ ಹಣವನ್ನು ತೆಗೆದುಕೊಂಡು ಆರೋಪಿ ಪರಾರಿಯಾಗುತ್ತಿದ್ದ. ಎಲ್ಲವೂ ಮುಗಿದ ಮೇಲೆ ಬೇರೆ ಊರಿಗೆ ಹೋಗಿ ಬೇರೆ ಹುಡುಗಿಯ ಜೊತೆ ಮದುವೆ ಮಾಡಿಕೊಳ್ಳುತ್ತಿದ್ದ. ತಮಿಳುನಾಡಿನ 13 ಜಿಲ್ಲೆಗಳಲ್ಲಿ ಮದುವೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ತೈವಾನ್ ಮೇಲೆ ಮತ್ತೆ ಚೀನಾ ಕ್ಯಾತೆ – 71 ಯುದ್ಧ ವಿಮಾನಗಳಿಂದ ತಾಲೀಮು
ಇದೀಗ ಕಾರ್ತಿಕ್ ರಾಜನ ಬಣ್ಣ ಬಯಲಾಗುತ್ತಿದ್ದಂತೆ ಆತ ಈ ಹಿಂದೆ ಮದುವೆಯಾಗಿದ್ದ 20 ಪತ್ನಿಯರು ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತರ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾರ್ತಿಕ್ ರಾಜಾ ಬಳಿ ಆಡಿ ಕಾರು ಮಾತ್ರ ಇದೆ, ಚಿನ್ನ ಅಥವಾ ನಗದು ಏನೂ ಇಲ್ಲ ಎಂದು ಪೊಲೀಸರು ಕಂಡುಕೊಂಡಿದ್ದಾರೆ.