ಬೀದರ್: ಲೋಕಸಭಾ ಚುನಾವಣಾ (Lok Sabha Election) ಫಲಿತಾಂಶದಿಂದಾಗಿ ಬೀದರ್‌ನಲ್ಲಿ (Bidar) ಭಾಲ್ಕಿ ಕ್ಷೇತ್ರ ಈಗ ರಾಜಕೀಯವಾಗಿ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.
ಬೀದರ್ ಲೋಕಸಭಾ ಕೇತ್ರದ ಚುನಾವಣೆಯಲ್ಲಿ ಖಂಡ್ರೆ ಪರಿವಾರದ ಮೂರನೇ ತಲೆಮಾರಿನ 26 ವಯಸ್ಸಿನ ಸಾಗರ ಖಂಡ್ರೆ ಗೆಲುವು ಭಾಲ್ಕಿ (Bhalki) ಹಿರಿಮೆ ಮತ್ತಷ್ಟು ಎತ್ತರಕ್ಕೇರಿಸಿದೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಹಾಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು 1.28 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಸಾಗರ್ ಖಂಡ್ರೆ (Sagar Khandre) ಕಿರಿಯ ಸಂಸದರಾಗಿ ಸಂಸತ್ತಿಗೆ ಎಂಟ್ರಿ ಕೊಟ್ಟಿದಾರೆ.
ಶತಾಯುಷಿ, ಮಾಜಿ ಸಚಿವ ಭೀಮಣ್ಣ ಖಂಡ್ರೆ, ಮಾಜಿ ಶಾಸಕ ದಿವಂಗತ ವಿಜಯ ಕುಮಾರ್ ಖಂಡ್ರೆ, ಹಾಲಿ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಬೀದರ್ ಡಿಸಿಸಿ ಬ್ಯಾಂಕ್ ಮತ್ತು ಮಹಾತ್ಮಾಗಾಂಧಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಮರ ಖಂಡ್ರೆ ಹಾಗೂ ನೂತನ ಸಂಸದ ಸಾಗರ್ ಖಂಡ್ರೆ ಭಾಲ್ಕಿ ನೆಲದವರಾಗಿದ್ದಾರೆ. ಹೀಗಾಗಿ ಖಂಡ್ರೆ ಕುಟುಂಬ ಈಗ ಮತ್ತೆ ರಾಜಕೀಯವಾಗಿ ಪಾರಮ್ಯ ಮೆರೆದಿದ್ದು ಭಾಲ್ಕಿ ರಾಜಕೀಯ ಪವರ್ ಸೆಂಟರ್ ಆಗಿ ಬದಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ʻಹಮಾರೆ ಬಾರಾಹ್ʼ ಸಿನಿಮಾ ಬಿಡುಗಡೆಗೆ ನಿಷೇಧ
ಈ ಹಿಂದೆ ಔರಾದ್ (Aurad) ರಾಜಕೀಯ ಶಕ್ತಿ ಕೇಂದ್ರವಾಗಿತ್ತು. ಔರಾದ್ ಕ್ಷೇತ್ರದಲ್ಲಿ ಹಾಲಿ ಶಾಸಕ ಪ್ರಭು ಚವ್ಹಾಣ್ ಅವರು ಹಿಂದಿನ ಬಿಜೆಪಿ ಸರಕಾರದಲ್ಲಿ ಪಶು ಸಂಗೋಪನೆ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಜೊತೆಗೆ ಔರಾದ್‌ನವರೇ ಆದ ಉಮಾಕಾಂತ್ ನಾಗಮಾರಪ್ಪಳ್ಳಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಭಗವಂತ ಖೂಬಾ ಕೇಂದ್ರ ಸಚಿವರಾದ ಮೇಲೆ ಎಲ್ಲದ್ದಕ್ಕೂ ಔರಾದ್ ಪವರ್ ಸೆಂಟರ್ ಆಗಿ ಬದಲಾಗಿತ್ತು. ಆದರೆ ಈಗ ಲೋಕಸಭಾ ಚುನಾವಣೆಯ ಬಳಿಕ ಜಿಲ್ಲೆಯ ಚಿತ್ರಣ ಬದಲಾಗಿದ್ದು ಖಂಡ್ರೆ ಪರಿವಾರ ಪವರ್ ಪುಲ್ ಆಗಿದೆ.
ಮೊದಲು ಔರಾದ್ ತಾಲೂಕಿನಲ್ಲಿಯೇ ಉಸ್ತುವಾರಿ ಸಚಿವ, ಕೇಂದ್ರ ಸಚಿವ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹೀಗೆ ಹಲವಾರು ಪ್ರಮುಖ ಹುದ್ದೆಗಳಿದ್ದವು. ಯಾವುದೇ ಕೆಲಸಕ್ಕೂ ಔರಾದ್‌ನತ್ತ ಮುಖ ಮಾಡುತ್ತಿದ್ದ ಜನತೆ ಈಗ ಭಾಲ್ಕಿ ಕಡೆ ನೋಡುತ್ತಿದ್ದಾರೆ. ಇದನ್ನೂ ಓದಿ: ನಟಿ, ನೂತನ ಸಂಸದೆ ಕಂಗನಾ ರಣಾವತ್‌ಗೆ ಕಪಾಳಮೋಕ್ಷ
ಶತಾಯುಷಿ ಡಾ. ಭೀಮಣ್ಣ ಖಂಡ್ರೆಯವರು ಒಂದು ಬಾರಿ ಸಚಿವರಾಗಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಭೀಮಣ್ಣ ಖಂಡ್ರೆಯವರ ಪುತ್ರ ಈಶ್ವರ್ ಖಂಡ್ರೆ (Eshwara Khandre) ಅವರು ಕ್ರಮವಾಗಿ 2013, 2018 ಮತ್ತು 2023 ಭಾಲ್ಕಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಸದ್ಯ ಅರಣ್ಯ ಖಾತೆ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.