– ಯುಪಿಎ ಅವಧಿಯಲ್ಲಿ 26 ರಾಜ್ಯಗಳನ್ನ ಹೆಸರಿಸಿಲ್ಲ
– ಜಮ್ಮು-ಕಾಶ್ಮೀರ 2024-25 ಬಜೆಟ್‌ಗೆ ಸಂಸತ್ ಅನುಮೋದನೆ
ನವದೆಹಲಿ: ಸಂಸತ್ ಸಾಕ್ಷಿಯಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅಬ್ಬರಿಸಿದ್ದಾರೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಮೇಲೆ ಮುಗಿಬಿದ್ದಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi), ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಹಲ್ವಾ ಕಾರ್ಯಕ್ರಮದ ಫೋಟೋದಲ್ಲಿ ಎಸ್ಸಿ-ಎಸ್ಟಿ-ಒಬಿಸಿ ಅಧಿಕಾರಿಗಳೇ (SC, ST, OBC Officers) ಇರಲಿಲ್ಲ ಎಂಬ ವಿಪಕ್ಷ ನಾಯಕ ರಾಹುಲ್ ಟೀಕೆಗೆ ತಲೆ ಚಚ್ಚಿಕೊಂಡ ಬಗ್ಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ. ಒಬಿಸಿ ಸಮುದಾಯದ ಚಾಯ್‌ವಾಲಾ ಪ್ರಧಾನಿ ಆಗಿರೋದೇ ವಿಪಕ್ಷಗಳಿಗೆ ಸಮಸ್ಯೆಯಾಗಿದೆ. ಹಲ್ವಾ ಕಾರ್ಯಕ್ರಮ ಫೋಟೋ ಸೆಷನ್ ಅಲ್ಲ. ಕೇಂದ್ರ ಬಜೆಟ್ ಸಿದ್ದತೆ ವೇಳೆ ನಡೆಯುವ ಹಲ್ವಾ ಕಾರ್ಯಕ್ರಮವನ್ನೂ ನೀವು ಇಷ್ಟು ಹಗುರವಾಗಿ ತೆಗೆದುಕೊಂಡ್ರೆಲ್ಲಾ ಎಂದು ನನಗೆ ನಗು ಬಂತು ಎಂದು ಕುಟುಕಿದ್ದಾರೆ.
ಕರ್ನಾಟಕದ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖವೇ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ (Siddaramaiah) ಟೀಕೆಗೆ ಪ್ರತಿಕ್ರಿಯೆ ನೀಡಿದರು. ಯಾವುದೇ ರಾಜ್ಯಕ್ಕೂ ಅನುದಾನ ನೀಡಲು ಕೇಂದ್ರ ಸರ್ಕಾರ ನಿರಾಕರಣೆ ಮಾಡಿಲ್ಲ. ಯುಪಿಎ ಸರ್ಕಾರದ (UPA Governmement) ಅವಧಿಯಲ್ಲಿ ಮಂಡನೆ ಮಾಡಲಾಗುತ್ತಿದ್ದ ಬಜೆಟ್‌ಗಳಲ್ಲಿ ಎಲ್ಲ ರಾಜ್ಯಗಳ ಹೆಸರನ್ನೂ ಹೇಳುತ್ತಿದ್ರಾ? ನಾನು ಸಹ ಯುಪಿಎ ಅವಧಿಯ ಬಜೆಟ್‌ಗಳನ್ನ ನೋಡಿದ್ದೇನೆ. 2004-05ರ ಬಜೆಟ್‌ನಲ್ಲಿ 17 ರಾಜ್ಯಗಳನ್ನು ಹೆಸರಿಸಿಲ್ಲ, 2006-07ರ ಬಜೆಟ್‌ನಲ್ಲಿ 16 ರಾಜ್ಯಗಳನ್ನ ಹೆಸರಿಸಿಲ್ಲ. 2009ರ ಬಜೆಟ್ ಭಾಷಣದಲ್ಲಿ 26 ರಾಜ್ಯಗಳನ್ನ ಹೆಸರಿಸಿಲ್ಲ. ಹಾಗೆಂದ ಮಾತ್ರಕ್ಕೆ ಆ ರಾಜ್ಯಗಳಿಗೆ ಅನುದಾನ ಸಿಕ್ಕಿರಲಿಲ್ಲವೇ? ಅಂದಿನ ಯುಪಿಎ ಸರ್ಕಾರ ಆ ಎಲ್ಲಾ ರಾಜ್ಯಗಳಿಗೂ ಅನುದಾನ ತಡೆ ಹಿಡಿದಿತ್ತೇ? 2007ರಲ್ಲಿ ಅಂದಿನ ಯುಪಿಎ ಸರ್ಕಾರವೆ ಸ್ವಾಮಿನಾಥನ್ ಆಯೋಗದ ವರದಿಯನ್ನು ತಿರಸ್ಕಾರ ಮಾಡಿತ್ತು. 2013-2014ರ ಬಜೆಟ್‌ನಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಗೆ ಕೇವಲ 21,934 ಕೋಟಿ ರೂ. ಮೀಸಲಿಡಲಾಗಿತ್ತು. ಆದ್ರೆ 2024 -2025ರ ಬಜೆಟ್‌ನಲ್ಲಿ 1.23 ಲಕ್ಷ ಕೋಟಿ ಮೀಸಲಿಡಲಾಗಿದೆ. ಇದೀಗ ಕಾಂಗ್ರೆಸ್ ಪಕ್ಷ ರೈತರ ಪರವಾಗಿ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಟೀಕಿಸಿದರು.
ಮುಂದುವರಿದು, ರಾಜ್ಯದ ವಾಲ್ಮೀಕಿ, ಮುಡಾ ಹಗರಣಗಳನ್ನ ಪ್ರಸ್ತಾಪಿಸಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಗ್ಯಾರಂಟಿಗಳಿಗೆ ಎಸ್ಸಿ-ಎಸ್ಟಿ ಹಣ ದುರ್ಬಳಕೆ, ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು, ಯುಪಿಎ ಸರ್ಕಾರ ನಿರುದ್ಯೋಗ ಪ್ರಮಾಣವನ್ನು ಮುಚ್ಚಿಟ್ಟಿತ್ತು. ನಾವು ಪಾರದರ್ಶಕವಾಗಿದ್ದೇವೆ ಎಂದು ವಿತ್ತ ಸಚಿವೆ ಹೇಳಿಕೊಂಡಿದ್ದಾರೆ. ಗ್ಲೋಬಲ್ ಹಂಗರ್ ಇಂಡೆಕ್ಸ್ ಎಲ್ಲಾ ಸುಳ್ಳು ಎಂದಿದ್ದಾರೆ. ತಮ್ಮ ಬಜೆಟ್‌ನಲ್ಲಿ ಹಿಂದಿನ ಬಜೆಟ್‌ಗಳಿಂತ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಜಮ್ಮು-ಕಾಶ್ಮೀರ 2024-25 ಬಜೆಟ್‌ಗೆ ಅನುಮೋದನೆ:
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ 2024-25ನೇ ಸಾಲಿನ ಬಜೆಟ್‌ಗೆ ಲೋಕಸಭೆಯಲ್ಲಿ ಮಂಗಳವಾರ ಅನುಮೋದನೆ ದೊರೆತಿದೆ. ಧ್ವನಿ ಮತದ ಮೂಲಕ ಜಮ್ಮ ಮತ್ತು ಕಾಶ್ಮೀರದ ಬಜೆಟ್‌ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನುಮೋದನೆ ಪಡೆದಿದ್ದಾರೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯನ್ನು 2024-25ರ ವರೆಗೆ ಜಿಡಿಪಿಯ 4.9%ರಷ್ಟು ತಗ್ಗಿಸಲಾಗಿದೆ. 2025-26ನೇ ಸಾಲಿನಲ್ಲಿ ಇದನ್ನು 4.5%ಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.