ಬೆಂಗಳೂರು: ವಿಧಾನಸೌಧ ವಜ್ರನಹೋತ್ಸವಕ್ಕೆ ದುಂದು ವೆಚ್ಚ ಮಾಡುತ್ತಿರುವ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪೀಕರ್ ಹಾಗೂ ಸಭಾಪತಿ ಭೇಟಿ ವೇಳೆ ಕೆಂಡಾಮಂಡಲವಾಗಿದ್ದಾರೆ.
ರಾಜ್ಯದ ಜನತೆ ಮೊದಲೇ ಸಂಕಷ್ಟದಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ವಜ್ರಮಹೋತ್ಸವಕ್ಕೆ 26 ಕೋಟಿ ರೂ. ದುಂದುವೆಚ್ಚ ಯಾಕೆ ಎಂದು ಪ್ರಶ್ನಿಸಿದ ಸಿಎಂ, 10 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ಮಾಡುವಂತೆ ಸೂಚಿಸಿದ್ದಾರೆ. ಈ ಮೂಲಕ ದುಂದು ವೆಚ್ಚದ ಕಾರ್ಯಕ್ರಮಕ್ಕೆ ಕಡಿವಾಣ ಹಾಕಿದ್ದಾರೆ. ಅಲ್ಲದೇ ಇದೇ ತಿಂಗಳ 25, 26ರಂದು ಎರಡು ದಿನ ನಡೆಯಬೇಕಿದ್ದ ಕಾರ್ಯಕ್ರಮವು 25ರಂದು ಒಂದು ದಿನ ಮಾತ್ರ ನಡೆಸುವಂತೆ ಸೂಚನೆ ನೀಡಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.
ವಿಧಾನ ಸಭೆಯ ಸ್ಪೀಕರ್ ಕೋಳಿವಾಡ ಹಾಗೂ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಸಿಎಂ ಗೃಹ ಕಚೇರಿ ಕೃಷ್ಣಾಕ್ಕೆ ಭೇಟಿ ನೀಡಿ ಸಿಎಂ ಗೆ ವಜ್ರಮಹೋತ್ಸವದ ಖರ್ಚು-ವೆಚ್ಚದ ವಿವರ ನೀಡಲು ಮುಂದಾದ್ರು. ಇದನ್ನು ಪರಿಶೀಲಿಸಿದ ಸಿಎಂ ವಜ್ರಮಹೋತ್ಸವಕ್ಕೆ 26 ಕೋಟಿ ತೆಗೆದುಕೊಂಡು ಏನು ಮಾಡುತ್ತೀರಾ?. ನನಗೆ ಯಾವ ವಿವರವನ್ನು ನೀಡುವುದು ಬೇಡ. 26 ಕೋಟಿ ಪ್ರಸ್ತಾವನೆ, ಶಾಸಕರಿಗೆ ಚಿನ್ನದ ಬಿಸ್ಕತ್ ನೀಡುವುದು ಹಾಗೂ ನೌಕರರಿಗೆ ಬೆಳ್ಳಿ ತಟ್ಟೆ ನೀಡುವ ವಿಚಾರ ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ. ಯಾರಿಗೂ ಯಾವ ದುಬಾರಿ ಗಿಫ್ಟ್ ಬೇಡ. ನಾನು ಕೊಡುವುದು ಹತ್ತು ಕೋಟಿ ಮಾತ್ರ. ಅದರಲ್ಲೇ ಎಲ್ಲವನ್ನೂ ಒಂದೇ ದಿನದಲ್ಲಿ ಕಾರ್ಯಕ್ರಮ ಮುಗಿಸಬೇಕು ಅಂತ ಇದೇ ಮೊದಲ ಬಾರಿಗೆ ಸ್ಪೀಕರ್ ಮತ್ತು ಸಭಾಪತಿ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿ.ಎಂ ಮಾತಿಗೆ ಮರು ಪ್ರಶ್ನೆ ಹಾಕದೇ ಸ್ಪೀಕರ್ ಕೆ.ಬಿ ಕೋಳಿವಾಡ ಮತ್ತು ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಎಲ್ಲವನ್ನೂ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಭೇಟಿ ಬಳಿಕ ಸ್ಪೀಕರ್ ಕೋಳಿವಾಡ ಮಾಧ್ಯಮದೊಂದಿಗೆ ಮಾತನಾಡಿ, ವಜ್ರ ಮಹೋತ್ಸವಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ. ವಜ್ರ ಮಹೋತ್ಸವ ನಡೆಯುತ್ತದೆ. ಅದ್ಧೂರಿಯಾಗಿ ನಡೆಯುತ್ತಾ ಇಲ್ವಾ ಅನ್ನೋದು ನೀವೇ ನೋಡಿ. ವಜ್ರಮಹೋತ್ಸವ ಸಮಾರಂಭಕ್ಕೆ 27ಕೋಟಿ ರೂ. ಖರ್ಚಿಗೆ ಪ್ರಸ್ತಾವನೆ ಸಲ್ಲಿರೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಬಗ್ಗೆ ಸಿಎಂ ಒಪ್ಪಿಗೆ ನೀಡಿದ್ದಾರಾ ಇಲ್ವಾ ಅನ್ನೋದನ್ನು ನಾನು ಏನು ಹೇಳಲ್ಲ. ಬೆಳಗಾವಿ ಅಧಿವೇಶನದ ಬಗ್ಗೆ ಚರ್ಚೆ ಮಾಡಿದ್ದೇವೆ ಅಷ್ಟೇ ಎಂದು ಹೇಳಿದರು.