ರಾಯ್ಪುರ: ಪ್ರತಿಷ್ಠಿತ ಪಾರ್ಲೆ-ಜಿ ಬಿಸ್ಕೆಟ್ ಅಂದರೆ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ. ಅಲ್ಲದೆ ಮಕ್ಕಳಿಗೆಂದೇ ಇದು ತಯಾರಾಗುತ್ತದೆ. ಆದರೆ ಇದೇ ಬಿಸ್ಕೆಟ್ ಕಾರ್ಖಾನೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ. ಛತ್ತೀಸ್‍ಗಡದ ಪಾರ್ಲೆ-ಜಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 26 ಬಾಲ ಕಾರ್ಮಿಕರನ್ನು ಜಿಲ್ಲಾ ಕಾರ್ಯಪಡೆ ಅಧಿಕಾರಿಗಳು ರಕ್ಷಿಸಿದ್ದಾರೆ.
ರಾಯ್ಪುರದ ಅಮಾಸಿವ್ನಿ ಪ್ರದೇಶದಲ್ಲಿ ಇರುವ ಪಾರ್ಲೆ-ಜಿ ಫ್ಯಾಕ್ಟರಿಯಿಂದ 26 ಮಕ್ಕಳನ್ನು ರಕ್ಷಿಸಲಾಗಿದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಫ್ಯಾಕ್ಟರಿಯಲ್ಲಿ ನಾವು ಕಾರ್ಯಾಚರಣೆ ನಡೆಸಿ 26 ಮಕ್ಕಳನ್ನು ರಕ್ಷಿಸಿದೆವು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನವನೀತ್ ಸ್ವರ್ಣಾಂಕರ್ ತಿಳಿಸಿದ್ದಾರೆ.
Advertisement
ಈ ಫ್ಯಾಕ್ಟರಿಯಲ್ಲಿ 12ರಿಂದ 16 ವರ್ಷದೊಳಗಿನ ಮಕ್ಕಳು ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿತ್ತು. ಈ ಆಧಾರದ ಮೇಲೆ ಫ್ಯಾಕ್ಟರಿಗೆ ಹೋಗಿ ಕಾರ್ಯಾಚರಣೆ ನಡೆಸಿದಾಗ ಈ ದೌರ್ಜನ್ಯ ಬೆಳಕಿಗೆ ಬಂದಿದೆ. ಮಧ್ಯ ಪ್ರದೇಶ, ಜಾರ್ಖಂಡ್, ಒಡಿಶಾ ಮತ್ತು ಬಿಹಾರ ಮೂಲದ ಮಕ್ಕಳು ಇಲ್ಲಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತಿಂಗಳಿಗೆ 5ರಿಂದ 7 ಸಾವಿರ ರೂಪಾಯಿ ವೇತನಕ್ಕೆ ಇಲ್ಲಿ ದುಡಿಯುತ್ತಿದ್ದೆವು ಎಂದು ರಕ್ಷಣೆಯಾದ ಮಕ್ಕಳು ಹೇಳಿದ್ದಾರೆ.
Advertisement
Advertisement
ದೇಶದಲ್ಲಿ ಬ್ರಾಂಡ್ ಕಂಪೆನಿಯಾಗಿ ಗುರುತಿಸಿಕೊಂಡಿರುವ ಪಾರ್ಲೆ-ಜಿ ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಜಿಲ್ಲಾ ಕಾರ್ಯ ನಿರ್ವಹಣಾಧಿಕಾರಿ ಸಮೀರ್ ಮಾಥುರ್ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಈಗಾಗಲೇ ಮಕ್ಕಳನ್ನು ರಕ್ಷಿಸಿದ ನಂತರ ಅವರನ್ನು ಸರ್ಕಾರದ ಆಶ್ರಯ ಮನೆಗೆ ಕಳುಹಿಸಲಾಗಿದ್ದು, ಫ್ಯಾಕ್ಟರಿ ಮಾಲಿಕರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಜೂನ್ 12ರಂದು ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನದ ಪ್ರಯುಕ್ತ ನಾವು ಜಿಲ್ಲೆಯಲ್ಲಿ ಇರುವ ಬಾಲ ಕಾರ್ಮಿಕರ ರಕ್ಷಣೆ ಮಾಡುವ ಕಾರ್ಯಕ್ಕೆ ಕೈಹಾಕಿದ್ದೇವೆ. ಈವರೆಗೆ ಕಳೆದ 6 ದಿನಗಳಿಂದ ಜಿಲ್ಲೆಯಲ್ಲಿ 51 ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಮಕ್ಕಳನ್ನು ನಾವು ರಕ್ಷಿಸಿದ್ದೇವೆ ಎಂದು ನವನೀತ್ ಸ್ವರ್ಣಾಂಕರ್ ಹೇಳಿದ್ದಾರೆ.