– ಶೀಘ್ರವೇ ಸೀರಂ ಜೊತೆ ಖರೀದಿ ಸಂಬಂಧ ಸರ್ಕಾರ ಒಪ್ಪಂದ
– ಆರಂಭದಲ್ಲಿ ಸಿಗಲಿದೆ 6 ಕೋಟಿ ಡೋಸ್
ನವದೆಹಲಿ: ಇಂಗ್ಲೆಂಡಿನ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್ ಲಸಿಕೆ ಖರೀದಿ ವಿಚಾರವಾಗಿ ಶೀಘ್ರವೇ ಪುಣೆಯ ಸೀರಂ ಮತ್ತು ಭಾರತ ಸರ್ಕಾರದ ನಡುವೆ ಒಪ್ಪಂದ ನಡೆಯುವ ಸಾಧ್ಯತೆಯಿದೆ.
ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಸೀರಂ 1 ಡೋಸ್ಗೆ 250 ರೂ. ದರ ನಿಗದಿ ಪಡಿಸಿದ್ದು ಒಪ್ಪಂದದ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.
Advertisement
ಈ ಕುರಿತು ಮಾತನಾಡಿದ ಸಂಸ್ಥೆ ಸಿಇಒ ಅದರ್ ಪೂನಾವಾಲಾ, ಖಾಸಗಿಯಾಗಿ ಖರೀದಿಸಿದರೆ ಈ ಲಸಿಕೆಗೆ ದರ ಪ್ರತಿ ಡೋಸ್ಗೆ 1 ಸಾವಿರ ರೂ. ಆಗಲಿದೆ. ಆದರೆ ಸರ್ಕಾರ ಭಾರೀ ಪ್ರಮಾಣದಲ್ಲಿ ಖರೀದಿಸಿದರೆ ಕಡಿಮೆ ಹಣಕ್ಕೆ ಸಿಗಲಿದೆ ಎಂದು ಹೇಳಿದ್ದಾರೆ.
Advertisement
Advertisement
ಒಪ್ಪಂದದ ಬಳಿಕ ಆರಂಭದಲ್ಲಿ 6 ಕೋಟಿ ಡೋಸ್, ಜನವರಿ- ಫೆಬ್ರವರಿಯಲ್ಲಿ 10 ಕೋಟಿ ಲಸಿಕೆಯನ್ನು ಕಂಪನಿ ಸರ್ಕಾರಕ್ಕೆ ನೀಡಲಿದೆ.
Advertisement
ಸೀರಂ ಕಂಪನಿ ಬಿಲ್ ಗೇಟ್ಸ್ ಪ್ರತಿಷ್ಠಾನದ ಜೊತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಜಗತ್ತಿನ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ 250 ರೂ. ನಂತೆ ಲಸಿಕೆಯನ್ನು ನೀಡಬೇಕಿದೆ.
ಮಾರ್ಚ್ ವೇಳೆಗೆ ಕೋವಿಶೀಲ್ಡ್ ಲಸಿಕೆ ಭಾರತದ ಮೆಡಿಕಲ್ ಸ್ಟೋರ್ನಲ್ಲೂ ಸಿಗುವ ಸಾಧ್ಯತೆಯಿದೆ. ಆದರೆ ಇಲ್ಲಿ 1 ಡೋಸ್ ಬೆಲೆ 600 ರೂ. ಇರಬಹುದು ಎಂದು ಕಂಪನಿ ಸುಳಿವು ನೀಡಿದೆ.
ಕೋವಿಶೀಲ್ಡ್ ಲಸಿಕೆ ಶೇ.70ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಂಪನಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಸೀರಂ ಸಂಸ್ಥೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ(ಡಿಸಿಜಿಐ) ಅರ್ಜಿ ಸಲ್ಲಿಸಿದೆ.
ಭಾರತದಲ್ಲಿಈ ರೀತಿ ಮನವಿ ಮಾಡಿಕೊಂಡ ಮೊದಲ ದೇಶಿಯ ಸಂಸ್ಥೆ ಸೀರಂ ಆಗಿದೆ. ಆಕ್ಸ್ಫರ್ಡ್ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆ ಜಂಟಿಯಾಗಿ ಸಂಶೋಧಿಸಿದ ಕೋವಿಶೀಲ್ಡ್ ಲಸಿಕೆಯನ್ನು ಸಿರಂ ಸಂಸ್ಥೆ ಭಾರತದಲ್ಲಿ ಉತ್ಪಾದನೆ ಮಾಡುತ್ತಿದೆ.
ಸದ್ಯ ಕೋವಿಶೀಲ್ಡ್ ಲಸಿಕೆಯ ಮೂರನೇ ಹಂತದ ಪ್ರಯೋಗ ಭಾರತದಲ್ಲಿ ನಡೆಯುತ್ತಿದೆ. ಇದು ಪೂರ್ಣಗೊಳ್ಳುವ ಮೊದಲೇ ಲಸಿಕೆಗೆ ಬಳಕೆಗೆ ಅನುಮತಿ ಕೋರಲಾಗಿದೆ. ಕೋವಿಶೀಲ್ಡ್ನಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ ಎಂದು ಸೀರಂ ಸಂಸ್ಥೆ ಹೇಳಿಕೊಂಡಿದೆ.