ಡಾ.ರಾಜ್ ಅಪಹರಣ ಪ್ರಕರಣಕ್ಕೆ 25 ವರ್ಷ – 2000 ಇಸವಿಯಲ್ಲಿ ಅಪಹರಿಸಿದ್ದ ವೀರಪ್ಪನ್
– ಅಪಹರಣದ ಬಳಿಕವೂ ಇಷ್ಟದೂರಿನಲ್ಲಿ ವಾಸ್ತವ್ಯ ಹೂಡದ ರಾಜಣ್ಣ
ಚಾಮರಾಜನಗರ: ನರಹಂತಕ, ಕಾಡುಗಳ್ಳ ವೀರಪ್ಪನ್ (Veerappan) ವರನಟ ಡಾ.ರಾಜ್‌ಕುಮಾರ್ ಅವರನ್ನ ಗಾಜನೂರಿನ ತೋಟದ ಮನೆಯಿಂದ ಅಪಹರಿಸಿದ (Kidnap) ಪ್ರಕರಣಕ್ಕೆ ಇಂದಿಗೆ 25 ವರ್ಷ. ಆ ಕಹಿ ಘಟನೆಯ ಬಗ್ಗೆ ಡಾ. ರಾಜ್ ಕುಟುಂಬಸ್ಥರು ಮಾತಾನಾಡಿದ್ದಾರೆ.
ಕನ್ನಡಿಗರಿಗೆ, ಡಾ. ರಾಜ್ ಕುಮಾರ್ (Dr Rajkumar) ಅಭಿಮಾನಿಗಳಿಗೆ ಜುಲೈ 30, 2000ನೇ ಇಸವಿ ಅಂದ್ರೆ ಮರೆಯಲಾಗದ ದಿನ. ಕನ್ನಡಿಗರ ಆರಾಧ್ಯ ದೈವ ಎಂದೆನಿಸಿದ್ದ ಅಣ್ಣಾವ್ರ ಕುಟುಂಬವನ್ನೇ ತಲ್ಲಣಗೊಳಿಸಿದ ಈ ಅಪಹರಣ ಘಟನೆ ಕರಾಳ ನೆನಪಾಗಿ ಉಳಿದಿದೆ. ಡಾ.ರಾಜ್‌ಕುಮಾರ್ ಅವರಿಗೆ ಗಾಜನೂರನ್ನು ಕಂಡರೆ ಅನನ್ಯ ಪ್ರೀತಿ. ಅಲ್ಲಿರುವ ಜಮೀನಿನಲ್ಲಿ ಕೊರೆಸಿರುವ ಕೊಳವೆಬಾವಿಯಲ್ಲಿ ನೀರು ಬಂತೆಂಬ ಸುದ್ದಿ ತಿಳಿದು ಪಾರ್ವತಮ್ಮ ಅವರೊಡನೆ ಗಾಜನೂರಿಗೆ ಬಂದಿದ್ದರು. ಆದ್ರೆ ರಾತ್ರಿವೇಳೆ ಕಾಡುಗಳ್ಳ ವೀರಪ್ಪನ್ ವರನಟ ರಾಜ್ ಕುಮಾರ್ ಅವರನ್ನೇ ಅಪಹರಿಸಿದ್ದ. ಸತ್ಯ ಮಂಗಲ ಕಾಡಿನಲ್ಲಿ (Sathyamangalam Forest) ಒತ್ತೆಯಾಳಾಗಿರಿಸಿಕೊಂಡು 108 ದಿನಗಳ ನಂತರ ಬಿಡುಗಡೆಗೊಳಿಸಿದ್ದ.
ಅಂದು ರಾತ್ರಿ ಬಂದೂಕುಗಳೊಂದಿಗೆ ಬಂದಿದ್ದ ವೀರಪ್ಪನ್ ಹಾಗೂ ಸಹಚರರು, ಮನೆಯನ್ನು ಕೂಡ ಸುತ್ತುವರಿದಿದ್ದರು. ಪಾರ್ವತಮ್ಮರಿಗೆ ಕ್ಯಾಸೆಟ್ ಕೊಟ್ಟು ಸರ್ಕಾರಕ್ಕೆ ತಲುಪಿಸಲು ಹೇಳಿದ್ದ. ಮನೆಯವರಿಗೆ, ಮಕ್ಕಳಿಗೆ ತೊಂದರೆ ಕೊಡಬೇಡ ನಾನೇ ನಿನ್ನ ಜೊತೆಗೆ ಬರ್ತೀನಿ ಅಂತಾ ಹೇಳಿ ಡಾ.ರಾಜ್‌ಕುಮಾರ್ ವೀರಪ್ಪನ್ ಜೊತೆಗೆ ಹೋಗಿದ್ರು. ಅವರ ಅಳಿಯ ಎಸ್.ಎ ಗೋವಿಂದರಾಜ್, ಸಹ ನಿರ್ದೇಶಕ ನಾಗಪ್ಪ ಮಾರಡಗಿ, ಸಂಬಂಧಿ ನಾಗೇಶ್ ಅವರನ್ನು ವೀರಪ್ಪನ್ ಅಪಹರಿಸಿದ್ದ. ಇದನ್ನೂ ಓದಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ರಾಜೀನಾಮೆ – ಆಯ್ಕೆ ಪ್ರಕ್ರಿಯೆ ಹೇಗೆ? ಅರ್ಹತೆಗಳೇನು?
ಇನ್ನೂ ಅಪಹರಣದಿಂದ ಬಿಡುಗಡೆ ಆಗಿ ಬಂದ ಬಳಿಕ ಮೂರು ಬಾರಿಯಷ್ಟೇ ಅಣ್ಣಾವ್ರು ಗಾಜನೂರಿಗೆ ಭೇಟಿ ಕೊಟ್ಟಿದ್ದರು. ಆದ್ರೆ ಒಂದು ಬಾರಿಯೂ ಕೂಡ ರಾತ್ರಿ ತಂಗುವ ಧೈರ್ಯ ಮಾಡಲಿಲ್ಲ. ಅಪ್ಪು ಸಿನಿಮಾದ 100 ದಿನದ ಸಂಭ್ರಮಾಚರಣೆಗೆ ಬರಬೇಕಾದ ಡಾ.ರಾಜ್ ಕುಮಾರ್, ಹನೂರಿನ ನಾಗಪ್ಪ ಅಪಹರಣದ ಸುದ್ದಿ ತಿಳಿದು ವಾಪಾಸ್ ಹೋಗಿದ್ದರು. ಇನ್ನೂ ಅಪಹರಣದ ವಿಚಾರ ಮತ್ತೇ ಮತ್ತೇ ಕಾಡುವ ಹಿನ್ನಲೆ, ಅಪಹರಣವಾಗಿದ್ದ ಮನೆಯನ್ನು ಕೆಡವಲಾಯಿತು ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದನ್ನೂ ಓದಿ: Hassan | ಹೋಟೆಲ್‌ನಲ್ಲಿ ಊಟ ಮಾಡಿ ಕೈತೊಳೆಯುವಾಗ ಪ್ರಾಣಬಿಟ್ಟ ಯುವಕ
ಒಟ್ಟಿನಲ್ಲಿ ಅಭಿಮಾನಿಗಳ ಆರಾಧ್ಯ ದೈವ, ಕಲಾ ರಸಿಕ ಡಾ.ರಾಜ್ ಕುಮಾರ್ ಅವರನ್ನ ವೀರಪ್ಪನ್ ಅಪಹರಣ ಮಾಡಿದ್ದ ವಿಚಾರ ಕರುನಾಡಿಗೆ ಗೊತ್ತಾಗಿದ್ದು ಜುಲೈ 31 ರಂದು ಬೆಳಗ್ಗೆ. ಈ ವಿಚಾರ ಕಾಡ್ಗಿಚ್ಚಿನಂತೆ ಎಲ್ಲಾ ಕಡೆಯೂ ಹಬ್ಬಿತ್ತು. ಇದನ್ನೂ ಓದಿ: ರಷ್ಯಾದ ಕರಾವಳಿಯಲ್ಲಿ 8.7 ತೀವ್ರತೆಯ ಭಾರೀ ಭೂಕಂಪ – ಅಮೆರಿಕ, ಜಪಾನ್‌ಗೆ ಸುನಾಮಿ ಎಚ್ಚರಿಕೆ