Connect with us

Dakshina Kannada

ಬಾಬ್ರಿ ಮಸೀದಿ ಧ್ವಂಸಕ್ಕೆ 25 ವರ್ಷ – ಕರ್ನಾಟಕ ಸೇರಿದಂತೆ ದೇಶಾದ್ಯಂತ ತೀವ್ರ ಕಟ್ಟೆಚ್ಚರ

Published

on

ಮಂಗಳೂರು/ಉಡುಪಿ: ದೇಶಾದ್ಯಂತ ಸದ್ದು ಮಾಡಿದ್ದ ಬಾಬ್ರಿ ಮಸೀದಿ ಧ್ವಂಸ ನಡೆದು ಇಂದಿಗೆ 25 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ದೇಶದೆಲ್ಲೆಡೆ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಲಾಗಿದೆ.

ಅಯೋಧ್ಯೆಯಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕೋಮು ಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಸಂಘಟನೆಗಳು ಕರಾಳ ದಿನಾಚರಣೆ, ಸಂಭ್ರಮಾಚರಣೆ ನಡೆಸುವ ಸಾಧ್ಯತೆ ಇರುವುದರಿಂದ ಜಿಲ್ಲೆಯಾದ್ಯಂತ ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದೆ. ಬಹಿರಂಗ ಸಭೆ, ಪ್ರತಿಭಟನೆ, ರ‍್ಯಾಲಿಗೆ ನಿರ್ಬಂಧ ವಿಧಿಸಲಾಗಿದೆ.

ಈ ನಡುವೆ ಸುಪ್ರೀಂಕೋರ್ಟ್‍ನಲ್ಲಿ ತಮಗೆ ವಿರುದ್ಧವಾಗಿ ತೀರ್ಪು ಬಂದರೂ, ರಾಮಮಂದಿರ ನಿರ್ಮಿಸಿಯೇ ತೀರುತ್ತೇವೆ ಎಂದು ರಾಮಜನ್ಮಭೂಮಿ ನ್ಯಾಸ್ ಮುಖ್ಯಸ್ಥ ನೃತ್ಯಗೋಪಾಲ್ ದಾಸ್ ಸ್ಪಷ್ಟಪಡಿಸಿದ್ದಾರೆ. ಇನ್ನು ಹೈದರಾಬಾದ್‍ನಲ್ಲಿ ಮಾತಾಡಿದ ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಪದ್ಮಾವತಿ ಸಿನಿಮಾ ಬಿಡುಗಡೆಯಾಗೋದನ್ನು ತಡೆದಿದ್ದೀರಾ. ಈಗ ಅಯೋಧ್ಯ ರಾಮ ಮಂದಿರ ನಿರ್ಮಾಣ ಪ್ರಕರಣದ ಅರ್ಜಿ ವಿಚಾರಣೆಯನ್ನು 2019ರಲ್ಲಿ ನಡೆಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

ಉಡುಪಿ ಕೃಷ್ಣಮಠದ ಪೇಜಾವರಶ್ರೀಗಳೂ ಮಸೀದಿ ಧ್ವಂಸದ ಕರೆ ನೀಡಿದ್ದರು ಎಂಬ ಆರೋಪ ಅಂದಿನಿಂದ ಇಂದಿನವರೆಗೂ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಮಾತನಾಡಿದ ಶ್ರೀಗಳು, ಬಾಬ್ರೀ ಮಸೀದಿ ನನ್ನ ನೇತೃತ್ವದಲ್ಲಿ ಧ್ವಂಸವಾದದ್ದಲ್ಲ, ಅದಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ. ರಾಮಜನ್ಮಭೂಮಿ ಸ್ವಚ್ಛತಾ ಅಭಿಯಾನದಲ್ಲಿ ನಾನು ಭಾಗಿಯಾಗಿದ್ದೆ. ರಾಮಭೂಮಿ ಸರ್ವೋಚ್ಛ ಸಮಿತಿ ನೇತೃತ್ವವಿತ್ತು. ಆದ್ದರಿಂದ ಹೋಮ, ಹವನಗಳು, ಶುದ್ಧೀಕರಣ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನೋಡ ನೋಡುತ್ತಿದ್ದಂತೆ ಕಲ್ಲುಗಳು ಬಿದ್ದವು. ಕರಸೇವಕರು ಮಸೀದಿಯ ಗುಂಬಜ್ ಹತ್ತಿದ್ದರು. ಸಂಭ್ರಮಿಸಿದ ವ್ಯಕ್ತಿಯೊಬ್ಬನಿಗೆ ಕಪಾಳಕ್ಕೆ ಬಾರಿಸಿದ್ದೆ. ಅದೊಂದು ವಿಷಾಧದ ಘಟನೆ ಎಂದು ಪೇಜಾವರಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಸ್ವಾಮೀಜಿಯಾಗಿ ಹೊಡೆಯುವುದು ತಪ್ಪು ಅಂತ ಗೊತ್ತಿದೆ. ಆದರೆ ಮಸೀದಿ ಧ್ವಂಸ ಮಾಡಬೇಡಿ ಎಂದು ಕೇಳಿಕೊಂಡೆ. ಮಸೀದಿ ಇದ್ದ ಜಾಗದಲ್ಲಿ ಮಂದಿರವಿತ್ತು ಅನ್ನುವುದಕ್ಕೆ ಕುರುಹುಗಳಿವೆ, ದಾಖಲೆ ಪತ್ತೆಯಾಗಿದೆ. ಮುಸಲ್ಮಾನ ಬಂಧುಗಳು ಬೇರೆಡೆ ಬಾಬ್ರಿ ಮಸೀದಿ ನಿರ್ಮಾಣ ಮಾಡುವುದಾದರೆ ನಾನು ಆರ್ಥಿಕ ಸಹಾಯ ಮಾಡಲು ಈಗಲೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಅಶೋಕ್ ಸಿಂಘಾಲ್‍ಗೂ ಧ್ವಂಸದ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.

ನನ್ನ ಮೇಲೆ ಕೆಲ ಬುದ್ಧಿಜೀವಿಗಳು ಮಾಡುತ್ತಿರುವ ಆರೋಪ ಶುದ್ಧ ಸುಳ್ಳು. ನನಗೆ ಅರಿವೇ ಇಲ್ಲದೆ ಮಸೀದಿ ಧ್ವಂಸವಾಯಿತು. ಈ ಘಟನೆ ನಡೆದ ಮಾರನೇ ದಿನ ವಿದಾಯಸಭೆ ಮಾಡಿದ್ದೆವು. ಸುಮ್ಮನೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪೇಜಾವರಶ್ರೀಗಳು ಪ್ರಶ್ನೆ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *