ಬೆಂಗಳೂರು: ಗೋದಾವರಿ-ಕೃಷ್ಣ-ಕಾವೇರಿ ನೀರಾವರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 TMC ನೀರು ಕೊಡಬೇಕು ಅಂತ ಮಾಜಿ ಪ್ರಧಾನಿ ದೇವೇಗೌಡ ಪುನರುಚ್ಚಾರ ಮಾಡಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಇದೇ ವಿಷಯ ಪ್ರಸ್ತಾಪ ಮಾಡಿದ್ದ ದೇವೇಗೌಡರು ಇಂದು ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರಕ್ಕೆ ಮತ್ತೆ ಮನವಿ ಮಾಡಿದ್ರು. ಗೋದಾವರಿ-ಕೃಷ್ಣ-ಕಾವೇರಿ ಯೋಜನೆ ವಿಚಾರವಾಗಿ ನೀರು ಹೆಚ್ಚಳ ಮಾಡುವಂತೆ ನಾನು ಪ್ರಧಾನಿಗಳು, ಕೇಂದ್ರ ನೀರಾವರಿ ಸಚಿವರಿಗೆ 2022 ಮತ್ತು 2024 ರಲ್ಲಿ ಪತ್ರ ಬರೆದಿದ್ದೆ. ಸದ್ಯ ನಮಗೆ 15.891 TMC ನೀರು ಹಂಚಿಕೆ ಮಾಡಲಾಗಿದೆ. ಆದರೆ, ಈ ಪ್ರಮಾಣವನ್ನು 25 TMC ಗೆ ಹೆಚ್ಚಳ ಮಾಡಬೇಕು ಅಂತ ಒತ್ತಾಯ ಮಾಡಿದ್ದಾರೆ.
Advertisement
ಸಂಸತ್‌ನಲ್ಲಿ ಈ ಬಗ್ಗೆ ನಾನು ಮಾತಾಡಿದ್ದೇನೆ. ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ ಅವರು ಪ್ರಧಾನಿ ಮೋದಿ ಅವರ ಬಳಿ ಮಾತಾಡ್ತಾರೆ. ಮೋದಿ ಅವರು ನಮಗೆ ಹತ್ತಿರ ಇರೋದ್ರಿಂದ ಈ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಮಾಡ್ತೀನಿ. ನೀರಾವರಿ ವಿಚಾರವಾಗಿ ನಮ್ಮಲ್ಲಿ ಯಾವುದೇ ರಾಜಕೀಯ ಇಲ್ಲ. ಸಿದ್ದರಾಮಯ್ಯ, ಡಿಕೆಶಿವಕುಮಾರ್, ಕಾಂಗ್ರೆಸ್ ಸಂಸದರು ಎಲ್ಲರ ಜೊತೆ ನಾನು ನೀರಾವರಿ ವಿಚಾರವಾಗಿ ಮಾತಾಡೋಕೆ ಸಿದ್ಧ. ನಮಗೆ ಸಮಸ್ಯೆ ಪರಿಹಾರ ಆಗಬೇಕು. ಇದಕ್ಕೆ ನನ್ನ ಹೋರಾಟ ಮುಂದುವರೆಸುತ್ತೇನೆ ಅಂತ ತಿಳಿಸಿದ್ದಾರೆ.
Advertisement
ನಾನು ಇನ್ನು ನಾಕಾರು ವರ್ಷ ಬದುಕಿರುತ್ತೇನೆ. ಅಷ್ಟರಲ್ಲಿ ಈ ನೀರಾವರಿ ಸಮಸ್ಯೆಗೆ ಪರಿಹಾರ ಕಂಡುಕೊಡುವ ಪ್ರಯತ್ನ ಮಾಡ್ತೀನಿ. ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡೊಲ್ಲ. ರಾಜ್ಯ ಸರ್ಕಾರದ ಜೊತೆಗೆ ಕೆಲಸ ಮಾಡ್ತೀನಿ. ಹಿಂದೊಮ್ಮೆ ಸಿದ್ದರಾಮಯ್ಯ ಜೊತೆ ಸಂಬಂಧ ಸರಿಯಿಲ್ಲದ ವೇಳೆ ಸಿದ್ದರಾಮಯ್ಯ ಅವರೇ ನಮ್ಮ ಮನೆಗೆ ಬಂದಿದ್ದರು. ನೀರಾವರಿ ವಿಷಯ ಆದ ಹಿನ್ನೆಲೆ ನಾನು ಅವರ ಜೊತೆ ಸಹಕಾರ ಕೊಟ್ಡಿದ್ದೆ ಅನ್ನೋ ಮೂಲಕ ನೀರಾವರಿ ವಿಷಯದಲ್ಲಿ ರಾಜಕೀಯ ಮಾಡೊಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ರಾಜ್ಯಕ್ಕೆ 25 TMC ನೀರು ತರುವ ಪ್ರಯತ್ನವನ್ನು ಮಾಡ್ತೀನಿ ಅಂತ ಭರವಸೆ ನೀಡಿದ್ದಾರೆ.