Bengaluru CityKarnatakaLatestMain Post

ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟು ಮೀಸಲಾತಿ ಪಾಲನೆ ಕಡ್ಡಾಯ – NLSIUಗೆ ಪತ್ರ ಬರೆದ ಅಶ್ವಥ್ ನಾರಾಯಣ

ಬೆಂಗಳೂರು: 2020ರಲ್ಲಿ ಜಾರಿಗೆ ತಂದಿರುವ ತಿದ್ದುಪಡಿ ನಿಯಮಗಳ ಪ್ರಕಾರ ರಾಜ್ಯದ ವಿದ್ಯಾರ್ಥಿಗಳಿಗೆ ಅಖಿಲ ಭಾರತೀಯ ಕೋಟಾ ಹೊರತುಪಡಿಸಿ ಶೇ.25ರಷ್ಟು ಸೀಟುಗಳನ್ನು (25% Seat Reservation) ಕೊಡುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಕುಲಪತಿಗಳಿಗೆ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ ಎನ್ ಅಶ್ವಥ್ ನಾರಾಯಣ (Dr. Aswath Narayan) ಮತ್ತೊಮ್ಮೆ ಪತ್ರ ಬರೆದಿದ್ದಾರೆ.

ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟು ಮೀಸಲಾತಿ ಪಾಲನೆ ಕಡ್ಡಾಯ - NLSIUಗೆ ಪತ್ರ ಬರೆದ ಅಶ್ವಥ್ ನಾರಾಯಣ

ಸಚಿವರು ಈ ಸಂಬಂಧವಾಗಿ ಕೆಲದಿನಗಳ ಹಿಂದೆ ಕೂಡ ಪತ್ರ ಬರೆದು, ಸಂಸ್ಥೆಯು ಅಖಿಲ ಭಾರತ ಮಟ್ಟದ ಮೆರಿಟ್ ಕೋಟಾದಡಿ ಆಯ್ಕೆಯಾದ ರಾಜ್ಯದ ವಿದ್ಯಾರ್ಥಿಗಳನ್ನು ಕೂಡ ಸ್ಥಳೀಯ ಮೀಸಲಿನಡಿ ಪರಿಗಣಿಸಿ, ದಾರಿ ತಪ್ಪಿಸುತ್ತಿರುವುದು ಸಹಜ ನ್ಯಾಯದ ತತ್ವಕ್ಕೆ ವಿರುದ್ಧವಾದುದು ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಶ್ರೀರಾಮನ ಹೆಸರು ಕೇಳಿದ್ರೆ ಕೆಲವರಿಗೆ ನಡುಕ ಶುರುವಾಗುತ್ತೆ: ಅಶ್ವಥ್ ನಾರಾಯಣ

ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟು ಮೀಸಲಾತಿ ಪಾಲನೆ ಕಡ್ಡಾಯ - NLSIUಗೆ ಪತ್ರ ಬರೆದ ಅಶ್ವಥ್ ನಾರಾಯಣ

ವಿಶಾಖಪಟ್ಟಣ, ರಾಯಪುರ, ಕೋಲ್ಕತ್ತಾ ಮುಂತಾದ ಕಡೆಗಳಲ್ಲಿ ಇರುವ ಇಂತಹುದೇ ಕಾನೂನು ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ರಾಜ್ಯದ ವಿದ್ಯಾರ್ಥಿಗಳಿಗೆ ಅಖಿಲ ಭಾರತ ಮೆರಿಟ್ ಕೋಟಾ ಹೊರತುಪಡಿಸಿಯೇ ಆಯಾ ರಾಜ್ಯಗಳ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳನ್ನು ಕೊಡಲಾಗುತ್ತಿದೆ. ಇದನ್ನು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಕೂಡ ಅನುಸರಿಸುವುದು ಕಡ್ಡಾಯವಾಗಿದೆ ಎಂದು ಸಚಿವರು ನೆನಪಿಸಿದ್ದಾರೆ.

2022ನೇ ಸಾಲಿನಲ್ಲಿ ಸಂಸ್ಥೆಯಲ್ಲಿ ಒಟ್ಟು 180 ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಲಾಗಿದೆ. ಇದರಲ್ಲಿ 45 ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಸ್ಥಳೀಯ ಮೀಸಲಾತಿ ಅಡಿ ಕೊಡಬೇಕಿತ್ತು. ಆದರೆ ಅಖಿಲ ಭಾರತೀಯ ಮೆರಿಟ್ ಕೋಟಾದಡಿ ಆಯ್ಕೆಯಾಗಿದ್ದ ರಾಜ್ಯದ 13 ವಿದ್ಯಾರ್ಥಿಗಳನ್ನು ಕೂಡ ‘ಸ್ಥಳೀಯ ಮೀಸಲಾತಿ’ ಅಡಿ ಪರಿಗಣಿಸಿ, ಕೇವಲ 32 ವಿದ್ಯಾರ್ಥಿಗಳಿಗೆ ಮಾತ್ರ ಸ್ಥಳೀಯ ಮೀಸಲಾತಿ ಸೌಲಭ್ಯದಡಿ ಪ್ರವೇಶ ಕೊಟ್ಟಿರುವುದು ಸರಿಯಲ್ಲ. ಇದರಿಂದ ರಾಜ್ಯದ 13 ವಿದ್ಯಾರ್ಥಿಗಳು ಅವಕಾಶ ಕಳೆದುಕೊಂಡಂತಾಗಿದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ನನ್ನ ರಾಜಕೀಯ ನಿವೃತ್ತಿ ಜೊತೆಗೆ ನನ್ನ ಆಸೆ ಆಕಾಂಕ್ಷೆಗಳು ನಿವೃತ್ತವಾಗಿವೆ: ಎಸ್.ಎಂ.ಕೃಷ್ಣ

2023ರಲ್ಲಿ ಈ ಸಂಸ್ಥೆಯಲ್ಲಿ ಒಟ್ಟು 240 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಈ ಪೈಕಿ 60 ಸೀಟುಗಳನ್ನು ಸ್ಥಳೀಯ ಮೀಸಲಾತಿ ಅಡಿ ರಾಜ್ಯದ ವಿದ್ಯಾರ್ಥಿಗಳಿಗೆ ಕೊಡಬೇಕು. ಈಗಾಗಲೇ ತಾತ್ಕಾಲಿಕ ಆಯ್ಕೆ ಪ್ರಕಟಿಸಿದ್ದಲ್ಲಿ ಆಗಿರುವ ಲೋಪವನ್ನು ಸರಿಪಡಿಸಬೇಕು. ಅಕಸ್ಮಾತ್ ಆಗದಿದ್ದರೆ ‘ಸೂಪರ್-ನ್ಯೂಮರಿ’ ಮಾನದಂಡವನ್ನು ಪರಿಗಣಿಸಿ, ಆಯ್ಕೆ ಪಟ್ಟಿಯನ್ನು ಪರಿಷ್ಕರಿಸಿ ಎಂದು ಅವರು ನಿರ್ದೇಶಿಸಿದ್ದಾರೆ. ಇದಲ್ಲದೆ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಸಂಸ್ಥೆಗೆ ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ 22 ಕೋಟಿ ರೂಪಾಯಿ ಅನುದಾನ ನೀಡಿದೆ. ಇದನ್ನು ಸಂಸ್ಥೆಯು ಮರೆಯಬಾರದು. ಹಾಗೆಯೇ ಸ್ಥಳೀಯ ಮೀಸಲಾತಿಗೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳು ಮತ್ತು ವಕೀಲರ ಸಂಘಗಳು ಎತ್ತಿರುವ ದನಿಯನ್ನು ಕೂಡ ಗಮನಿಸಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button