ಕೊಟ್ಟೂರಿನಲ್ಲಿ ನೆಲದಡಿ ದೊರೆತವು ಸ್ವಾತಂತ್ರ್ಯಪೂರ್ವದ 25 ಕೆಜಿ ನಾಣ್ಯಗಳು!

Public TV
1 Min Read
Old Coins 1

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಮನೆಯೊಂದರ ನೆಲದಡಿಯಲ್ಲಿ 25 ಕಿಲೋಗೂ ಹೆಚ್ಚು ತೂಕದ ಸ್ವಾತಂತ್ರ್ಯ ಪೂರ್ವದ ತಾಮ್ರ, ಹಿತ್ತಾಳೆ ನಾಣ್ಯಗಳು ದೊರೆತಿವೆ.

ಕೊಟ್ಟೂರಿನ ಗುರು ಬಸವೇಶ್ವರ ದೇವಸ್ಥಾನದ ಹತ್ತಿರದಲ್ಲಿನ ಗುತ್ತಿಗೆದಾರ ಕೀರ್ತಿಶೇಖರ್ ಅವರು ತಮ್ಮ ಹಳೇ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಲು ಮುಂದಾಗಿದ್ದಾರೆ. ಮೇಲ್ಛಾವಣಿ ಮತ್ತು ಗೋಡೆಗಳನ್ನು ಕೆಡವಿ ನೆಲಮಟ್ಟವನ್ನು ಅಗೆಯುವಾಗ ನಿನ್ನೆ ಸಂಜೆ ತಾಮ್ರದ ಕೊಡ ಒಂದು ಇರುವುದು ಪತ್ತೆಯಾಗಿದೆ. ತಕ್ಷಣ ಅವರು ಕೂಲಿಕಾರರನ್ನು ಕಳುಹಿಸಿದ್ದಾರೆ.

Old Coins 2

ಇಂದು ಬೆಳಗಿನ ಜಾವದೊಳಗೆ ಅದನ್ನು ಅಗೆದು ಹೊರ ತೆಗೆದಿದ್ದು ಅದರಲ್ಲಿ 25 ಕಿಲೋಗೂ ಹೆಚ್ಚು ತೂಕದ ಕ್ರಿ.ಶ. 1930, 1936 ಮತ್ತು 1940 ಇಸವಿಯ ತಾಮ್ರ, ಹಿತ್ತಾಳೆ ನಾಣ್ಯಗಳು ದೊರೆತಿದ್ದು ಅವುಗಳ ಒಂದು ಬದಿಯಲ್ಲಿ ಜಾರ್ಜ್ 4 ಕಿಂಗ್ ಎಂಪೈರ್ ಎಂದು ಅಕ್ಷರದಲ್ಲಿದೆ. ಮತ್ತೊಂದು ಕಡೆ ಬ್ರಿಟಿಷ್ ರಾಜನ ಚಿತ್ರವಿದೆ. ಕೆಲವು ನಾಣ್ಯಗಳಿಗೆ ದಮ್ಮಡಿ ಎಂದು, ಎರಡು ಪೈಸೆ, ಒನ್ ಕ್ವಾರ್ಟರ್ ಆಣೆ ಎಂದು ಬರೆಯಲಾಗಿದೆ.

Old Coins 3

ಜೊತೆಗೆ ಒಂದಿಷ್ಟು ಅನುಮಾನ!: ಕೇವಲ ಇಷ್ಟೇ ನಾಣ್ಯಗಳು ದೊರೆತಿವೆ ಎಂದು ಮನೆಯ ಮಾಲೀಕರು ಹೇಳುತ್ತಿದ್ದಾರೆ. ಆದರೆ ಇಲ್ಲಿನ ಜನ ನಿನ್ನೆ ಕೂಲಿಕಾರರನ್ನು ಕಳುಹಿಸಿ, ಯಾರನ್ನೂ ಕರೆಯದೆ ರಾತ್ರೋ ರಾತ್ರಿ ಅಗೆದು ತೆಗೆದಿರುವುದು, ಅನುಮಾನಕ್ಕೆ ಕಾರಣವಾಗಿದೆ. ಬೆಳ್ಳಿ ನಾಣ್ಯಗಳ ಕೊಡವೊಂದನ್ನು ಮರೆ ಮಾಚಿದ್ದಾರೆ ಎನ್ನುತ್ತಿದ್ದಾರೆ. ಸದ್ಯ ದೊರೆತಿರುವ ನಾಣ್ಯಗಳು ಮನೆಯ ಮಾಲೀಕರ ಬಳಿ ಇದ್ದು, ಅವುಗಳ ಬಳಕೆ ನಿಂತ ಮೇಲೆ ಹಿರಿಯರು ನೆಲದಲ್ಲಿ ಹೂತಿರಬೇಕು ಎಂದು ಸಹ ಹೇಳಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಬೇಕಿದೆ.

 

Share This Article
Leave a Comment

Leave a Reply

Your email address will not be published. Required fields are marked *