ನವದೆಹಲಿ: ಪ್ರೀತಿಯ ಸಂಬಂಧವನ್ನು ಕೊನೆಮಾಡಿದ್ದಕ್ಕೆ 24 ವರ್ಷದ ಪ್ರಿಯತಮನೊಬ್ಬ ಸುತ್ತಿಗೆಯಿಂದ ಪ್ರೇಯಸಿಯ ತಲೆಗೆ ಹೊಡೆದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಆರೋಪಿಯನ್ನು ನಿಶಾಂತ್ ಸೈನಿ ಎಂದು ಗುರುತಿಸಲಾಗಿದ್ದು, ಈತ ದೆಹಲಿಯ ಸರೋಜಿನಿ ನಗರದಲ್ಲಿ ವಾಸಿಸುತ್ತಿದ್ದನು. ಈಗ ಆರೋಪಿ ಸೈನಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಸೈನಿ ಮತ್ತು ಯುವತಿ ಕಳೆದ ಎಂಟು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಪ್ರೇಮಿಗಳಿಬ್ಬರು ಹೋಟೆಲ್ ನಲ್ಲಿ ಭೇಟಿಯಾಗಿದ್ದಾರೆ. ಆಗ ಪ್ರೇಯಸಿ ನೀನು ಯಾವುದೇ ಕೆಲಸವನ್ನು ಹೊಂದಿಲ್ಲ. ಹಾಗಾಗಿ ನಮ್ಮಿಬ್ಬರ ಸಂಬಂಧವನ್ನು ಇಲ್ಲಿಗೆ ಮುಗಿಸಿ, ಇಬ್ಬರು ದೂರವಾಗೋಣ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಸೈನಿ ಸುತ್ತಿಗೆಯಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಡಿಸಿಪಿ ದೇವೇಂದ್ರ ಆರ್ಯ ಅವರು ಹೇಳಿದ್ದಾರೆ.
ಆರೋಪಿ ಸೈನಿ ಮುಂಬೈನಲ್ಲಿ ಟಿವಿ ಧಾರಾವಾಹಿಗೆ ಆಡಿಶನ್ ಕೊಟ್ಟಿದ್ದೇನೆ ಎಂದು ಸುಳ್ಳು ಹೇಳಿದ್ದ. ಆದರೆ ಅವನಿಗೆ ಯಾವುದೇ ಕೆಲಸವಿಲ್ಲ. ಹೀಗಾಗಿ ನಾನು ಅವನಿಂದ ದೂರವಾಗಲು ನಿರ್ಧರಿಸಿದ್ದೆ. ಆದರೆ ಇದರಿಂದ ಕೋಪಗೊಂಡ ಸೈನಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಅಂತ ಹಲ್ಲೆಗೊಳಗಾದ ಯುವತಿ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.
ತಕ್ಷಣ ಯುವತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಇತ್ತ ಆರೋಪಿಯ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಸೈನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv