– ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಣೆ
– ಎರಡೂ ವಾಹನಗಳ ಚಾಲಕರು ಬಲಿ
ಹೈದರಾಬಾದ್: ತೆಲಂಗಾಣದ (Telangana) ರಂಗಾರೆಡ್ಡಿ ಜಿಲ್ಲೆಯಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಇಂದು ಬೆಳಗ್ಗೆ ತೆಲಂಗಾಣ ಸರ್ಕಾರಿ ಬಸ್ ಮತ್ತು ಖಾಸಗಿ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ್ದು, ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಘಟನೆಯ ವಿಡಿಯೋ ಹಾಗೂ ಫೋಟೋಗಳು ಹರಿದಾಡುತ್ತಿದ್ದು, ಚಿತ್ರಗಳೇ ಅಪಘಾತದ (Accident) ತೀವ್ರತೆಯನ್ನು ಹೇಳುತ್ತಿವೆ.
ಯೆಸ್. ಜಲ್ಲಿಕಲ್ಲು ತುಂಬಿಕೊಂಡು ಹೈದರಾಬಾದ್ (Hyderabad) ಕಡೆಯಿಂದ ಬಿಜಾಪುರ ಕಡೆಗೆ ಹೋಗುತ್ತಿದ್ದ ಲಾರಿಯೊಂದು ತಾಂಡೂರ್‌ನಿಂದ ಹೈದರಾಬಾದ್ ಕಡೆಗೆ ತೆರಳುತ್ತಿದ್ದ ತೆಲಂಗಾಣ ಸಾರಿಗೆ ಸಂಸ್ಥೆಯ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ 24 ಮಂದಿ ಸಾವನ್ನಪ್ಪಿದ್ದಾರೆ. ತೆಲಂಗಾಣದ ಮಿರ್ಜಗೂಡ ಬಳಿ ಹೈದರಾಬಾದ್-ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ (Hyderabad Bijapur highway) ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಸರ್ಕಾರಿ ಬಸ್ ಮತ್ತು ಟಿಪ್ಪರ್ ಲಾರಿ ಎರಡೂ ನಜ್ಜುಗುಜ್ಜಾಗಿದೆ. ಹೀಗಾಗಿ ಬಸ್ ಚಾಲಕ ಮತ್ತು ಟಿಪ್ಪರ್ (Gravel Ttruck) ಚಾಲಕ ಇಬ್ಬರೂ ಅಸುನೀಗಿದ್ದಾರೆ. ಈ ದೃಶ್ಯಗಳೇ ಅಪಘಾತದ ತೀವ್ರತೆಯನ್ನ ಹೇಳುತ್ತಿವೆ.
ಜಲ್ಲಿ ರಾಶಿ ಅಡಿಯಲ್ಲೇ ಹಲವರು ಸಮಾಧಿ
ಬಸ್ ಮೇಲೆ ಜಲ್ಲಿಕಲ್ಲುಗಳು ಬಿದ್ದಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಏಕಾಏಕಿ ಬಸ್‌ನಲ್ಲಿದ್ದ ಪ್ರಯಾಣಿಕರ ಮೇಲೆ ಬಿದ್ದ ಜಲ್ಲಿಕಲ್ಲುಗಳು ಮಧ್ಯೆ ಸಿಲುಕಿಯೇ ಸುಮಾರು 10ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮೂರು ಜೆಸಿಬಿಗಳ (JCB) ಸಹಾಯದಿಂದ ಜಲ್ಲಿಕಲ್ಲುಗಳ ರಾಶಿಯ ಅಡಿಯಲ್ಲಿ ಸಿಲುಕಿರುವ ಪ್ರಯಾಣಿಕರನ್ನ ಹೊರತೆಗೆಯಲಾಯಿತು. ಒಟ್ಟು ಮೃತರಲ್ಲಿ 10 ಮಂದಿ ಪುರುಷರು, 9 ಮಹಿಳೆಯರೂ ಕೂಡ ಸೇರಿದ್ದಾರೆ. ಅಪಘಾತ ನಡೆಯುವಾಗ ಬಸ್‌ನಲ್ಲಿ ಸುಮಾರು 70 ಪ್ರಯಾಣಿಕರಿದ್ದರು ಎಂದು ವರದಿಗಳು ತಿಳಿಸಿವೆ.
ಚೇವೆಲ್ಲಾ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು. ಕುಟುಂಬಗಳಿಗೆ ಶವಗಳ ಹಸ್ತಾಂತರ ಮಾಡಲಾಗಿದೆ. ಇನ್ನು 5 ಮಂದಿ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಪ್ರಧಾನಿ ಮೋದಿ ಪರಿಹಾರ ಘೋಷಣೆ
ಇನ್ನು ತೆಲಂಗಾಣ ಬಸ್ ಅಪಘಾತಕ್ಕೆ ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿಯ ಅತಿವೇಗವೇ ದುರಂತಕ್ಕೆ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಇದರೊಂದಿಗೆ ಸಂತ್ರಸ್ತ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ದುರಂತ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದು, ಮೃತ ಪ್ರಯಾಣಿಕರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ, ಗಾಯಾಳುಗಳಿಗೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.



