ಯಾದಗಿರಿ: ಒಂದು ಕಡೆ ಮಹಾಮಾರಿ ಕೊರೊನಾ ತನ್ನ ರೌದ್ರ ನರ್ತನದಿಂದ ಇಡೀ ವಿಶ್ವದ ಆರೋಗ್ಯವನ್ನೇ ಕಿತ್ತುಕೊಂಡಿದೆ, ಈಗ ದೇಶದ ಆರ್ಥಿಕತೆಯನ್ನು ಸಹ ಕಿತ್ತುಕೊಳ್ಳುತ್ತಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಯಾದಗಿರಿಯಲ್ಲಿ 24 ಹತ್ತಿ ಕಾರ್ಖಾನೆಗಳು ಬಂದ್ ಆಗಿವೆ.
ಹೌದು. ಯಾದಗಿರಿಯಲ್ಲಿ ಹತ್ತಿಯನ್ನು ಅತೀ ಹೆಚ್ಚು ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ಹತ್ತಿಗೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಭಾರಿ ಬೇಡಿಕೆಯಿದೆ. ಇಲ್ಲಿ ಬೆಳೆಯುವ ಹತ್ತಿ ಚೀನಾ, ಬಾಂಗ್ಲಾದೇಶ ಸೇರಿದಂತೆ ಏಷ್ಯಾದ ಅನೇಕ ರಾಷ್ಟ್ರಗಳಿಗೆ ರಫ್ತು ಆಗುತ್ತದೆ. ಹೀಗಾಗಿ ಯಾದಗಿರಿ ಜಿಲ್ಲೆಯಲ್ಲಿ 25 ಹತ್ತಿ ಕಾರ್ಖಾನೆಗಳಿವೆ.
ಈ ಎಲ್ಲಾ ಕಾರ್ಖಾನೆಯ ಆದಾಯ ಒಂದು ಸೀಜನ್‍ನಲ್ಲಿ ನೂರಾರು ಕೋಟಿ ಇತ್ತು. ಆದರೆ ಕೊರೊನಾ ಲಾಕ್‍ಡೌನ್ ಎಫೆಕ್ಟ್ ನಿಂದ ಯಾದಗಿರಿಯ 25 ಹತ್ತಿ ಕಾರ್ಖಾನೆಗಳ ಪೈಕಿ 24 ಕಾರ್ಖಾನೆಗಳು ಬಂದ್ ಆಗಿವೆ. ಆದ್ದರಿಂದ ಕೇವಲ ಒಂದು ಕಾರ್ಖಾನೆ ಮಾತ್ರ ಭಾರತೀಯ ಹತ್ತಿ ನಿಗಮದ ಸಹಯೋಗದಲ್ಲಿ ರೈತರಿಂದ ಹತ್ತಿ ಖರೀದಿಸುತ್ತಿದೆ.
ಈಗಾಗಲೇ ಕಾರ್ಖಾನೆಯಲ್ಲಿ ರಪ್ತಿಗೆ ತಯಾರಾಗಿರುವ ಕೋಟಿಗಟ್ಟಲೆ ಬೆಲೆ ಬಾಳುವ ಹತ್ತಿ, ಅಂತರರಾಜ್ಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಿಲ್ಲದೆ ಕಾರ್ಖಾನೆಯಲ್ಲಿಯೆ ಕೊಳೆಯುತ್ತಿದೆ. ಇದರಿಂದ ಹತ್ತಿ ಕಾರ್ಖಾನೆ ಮಾಲೀಕರು, ರೈತರು ಮತ್ತು ಕಾರ್ಮಿಕರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.