ನವದೆಹಲಿ: ದೇಶದಲ್ಲಿ ಕೊರೊನಾದಿಂದ ಗುಣಮುಖಗೊಳ್ಳುವವರ ಪ್ರಮಾಣ 77.77% ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 81,533 ಮಂದಿ ಚೇತರಿಕೆ ಕಂಡಿದ್ದು, ಇದು ಒಂದೇ ದಿನದಲ್ಲಿ ಗುಣಮುಖಗೊಂಡವರ ಗರಿಷ್ಠ ಸಂಖ್ಯೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಒಂದು ಕಡೆ ದಾಖಲೆ ಪ್ರಮಾಣದಲ್ಲಿ ಸೋಂಕು ಏರಿಕೆಯಾಗುತ್ತಿದ್ದು ಸಾವು ಸಂಭವಿಸುತ್ತಿವೆ. ಮತ್ತೊಂದು ಕಡೆ ಚೇತರಿಕೆ ಪ್ರಮಾಣವೂ ಕೂಡಾ ಹೆಚ್ಚಾಗಿದೆ. ಈ ಮೂರು ವಲಯಗಳಲ್ಲಿ ಐದು ರಾಜ್ಯಗಳು ಪ್ರಮುಖ ಪಾತ್ರ ನಿರ್ವಹಿಸಿವೆ. ಈವರೆಗೂ ದೇಶದಲ್ಲಿ 36,24,196 ಮಂದಿ ಗುಣಮುಖವಾಗಿದ್ದು, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶದಲ್ಲಿ 60% ಮಂದಿ ಚೇತರಿಕೆ ಕಂಡಿದ್ದಾರೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 97,570 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ಈ ಐದು ರಾಜ್ಯದ 60% ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ದೆಹಲಿಯಲ್ಲಿ 69% ಸಾವುಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.