ಹದಿ-ಹರೆಯದ ವಯಸ್ಸಲ್ಲಿ ಪ್ರೀತಿ ಪ್ರೇಮದ ಹುಚ್ಚು- ಒಂದೇ ಜಿಲ್ಲೆಯಿಂದ ಪರಾರಿಯಾದವರು 233 ಮಂದಿ!

Public TV
2 Min Read
Minor Love 2

ಚಿಕ್ಕಬಳ್ಳಾಪುರ: ಹದಿಹರೆಯದ ವಯಸ್ಸು, ಹುಚ್ಚು ಕೋಡಿ ಮನಸ್ಸು, ಪ್ರೀತಿ, ಪ್ರೇಮ, ಎಂದು ಪರಾರಿಯಾದವರೇ ಹೆಚ್ಚು, ಅದು ಒಬ್ಬರಲ್ಲ ಇಬ್ಬರಲ್ಲ, ಬರೋಬ್ಬರಿ ಕಳೆದ 5 ವರ್ಷಗಳಲ್ಲಿ 233ಕ್ಕೂ ಹೆಚ್ಚು ಮಂದಿ ಜಿಲ್ಲೆಯಿಂದ ಕಾಣೆಯಾಗಿದ್ದಾರೆ. ವಿಚಿತ್ರ ಅಂದ್ರೆ ಆಕರ್ಷಣೆಯ ಅಮಲಿನಲ್ಲಿ ಪ್ರೀತಿ ಪ್ರೇಮ ಅಂತ ಕಾಣೆಯಾದ 101 ಮಂದಿ ಇದುವರೆಗೂ ಪತ್ತೆಯಾಗಲೇ ಇಲ್ಲ ಅನ್ನೋದು ಅಘಾತಕಾರಿ ಸಂಗತಿ.

CKB MAKKALU KANE

5 ವರ್ಷಗಳಲ್ಲಿ 233 ಕ್ಕೂ ಹೆಚ್ಚು ಮಕ್ಕಳ ನಾಪತ್ತೆ:
ಹದಿಹರೆಯದ ವಯಸ್ಸು, ಮೀಸೆ ಮೂಡೋ ವಯಸ್ಸು, ಪ್ರೀತಿಯೆಂಬ ಆಕರ್ಷಣೆಯತ್ತ ಸೆಳೆಯೋ ಮನಸ್ಸು. ನಲ್ಲ ನಲ್ಲೆಯ ಜೊತೆ ಪ್ರಪಂಚ ಸುತ್ತೋ ಕನಸು. ಹೌದು ವಯಸ್ಸು 12-13 ಆದರೆ ಸಾಕು ಈಗ ಪ್ರೀತಿ ಎನ್ನುವ ಮಾಯೆ ಹದಿ ಹರೆಯದ ಅಪ್ರಾಪ್ತ ವಯಸ್ಸಿನ ಹಲವರನ್ನು ಆವರಿಸಿಕೊಂಡುಬಿಡುತ್ತೆ. ಇಂತಹ ಅದೆಷ್ಟೋ ಪ್ರಕರಣಗಳಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಸಾಕ್ಷಿಯಾಗಿದೆ. 2013 ರಿಂದ 2018ರವರೆಗೂ ಕಳೆದ 5 ವರ್ಷಗಳಲ್ಲಿ ಜಿಲ್ಲೆಯಾದ್ಯಾಂತ ಬರೋಬ್ಬರಿ 233 ಕ್ಕೂ ಹೆಚ್ಚು ಹದಿಹರೆಯದ ಅಪ್ರಾಪ್ತ ವಯಸ್ಸಿನ ಮಕ್ಕಳು ಮನೆ ಬಿಟ್ಟು ಹೋಗಿ, ಕಾಣೆಯಾಗಿದ್ದಾರೆ. ಇದರಲ್ಲಿ 118 ಮಂದಿ ಗಂಡು ಮಕ್ಕಳಾಗಿದ್ದರೆ, 115 ಮಂದಿ ಹೆಣ್ಣು ಮಕ್ಕಳು. ಕಾಣೆಯಾದ 233 ಮಂದಿಯಲ್ಲಿ ಇದುವರೆಗೂ ಪತ್ತೆಯಾದವರು 132 ಮಾತ್ರ. ಆದರೆ ಉಳಿದ 101 ಮಂದಿ ಎಲ್ಲಿದ್ದಾರೆ? ಹೇಗಿದ್ದಾರೆ ಅನ್ನೋದು ಇದುವರೆಗೂ ಗೊತ್ತಾಗಿಲ್ಲ ಅನ್ನೋದು ಅಘಾತಕಾರಿ ಸಂಗತಿ.

CKB CHILD MISSING

ಕಾಣೆಯಾಗೋಕೆ ಕಾರಣಗಳೇನು?
ಇದಕ್ಕೆಲ್ಲಾ ಕಾರಣ ಹದಿಹರೆಯದ ವಯಸ್ಸಲ್ಲಿ ಮೂಡೋ ಪ್ರೀತಿ-ಪ್ರೇಮದ ಮಾಯೆ ಎನ್ನುವುದು ಬಹುತೇಕ ಪ್ರಕರಣಗಳಲ್ಲಿ ಸಾಬೀತಾದ ಸತ್ಯ ಅನ್ನೋದು ಅಧಿಕಾರಿಗಳ ವಾದ. ಹದಿ ಹರೆಯದ ವಯಸ್ಸಲ್ಲಿ ಹುಟ್ಟೋ ಪ್ರೀತಿನಾ ಪಡೆದುಕೊಳ್ಳಲಾಗದೆ ಬಿಟ್ಟು ಬಿಡಲಾಗದೆ, ಇತ್ತ ಪೋಷಕರಿಗೂ ತಿಳಿಸಲಾಗದೆ ಮನೆ ಬಿಟ್ಟು ಹೋಗೋವರ ಸಂಖ್ಯೆಯೇ ಹೆಚ್ಚು. ಒಂದೆಡೆ ಪ್ರೀತಿ-ಪ್ರೇಮ-ಪ್ರಣಯ ಅಂತ ಮನೆ ಬಿಟ್ಟು ಹೋದವರು ಜಾಸ್ತಿಯಾದರೆ ಮತ್ತೊಂದೆಡೆ ಕಡು ಬಡತನ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳಿಂದಲೂ ಬೇಸತ್ತು ಕೆಲವರು ಮನೆ ಬಿಟ್ಟು ಹೋಗಿದ್ದಾರೆ. ಇನ್ನೂ ಆಂಧ್ರದ ಗಡಿಭಾಗದ ಜಿಲ್ಲೆಯಲ್ಲಿ ಒಂದೆಡೆ ಬಾಲ್ಯ ವಿವಾಹಗಳು ಅತಿ ಹೆಚ್ಚಾಗಿ ನಡೆಯುತ್ತವೆ. ಮತ್ತೊಂದೆಡೆ ಜಿಲ್ಲೆಯ ಗಡಿ ಭಾಗಗಳಲ್ಲಿ ಮಹಿಳೆಯರು, ಮಕ್ಕಳ ಮಾರಾಟ ಜಾಲ ಸಕ್ರಿಯವಾಗಿರೋದು ಈ ಹಿಂದೆ ಬಯಲಿಗೆ ಬಂದ ಹಲವು ಪ್ರಕರಣಗಳಲ್ಲಿ ಗೊತ್ತಿರುವಂತಹ ವಿಚಾರ. ಹೀಗಾಗಿ ಪ್ರೀತಿ ಪ್ರೇಮದ ಗುಂಗಲ್ಲಿ ಮನೆಯಲ್ಲಿ ವಿಷಯ ತಿಳಿಸಲಾಗದ ಅದೆಷ್ಟೋ ಮಂದಿ ಮನೆ ಬಿಟ್ಟು ಹೋಗಿ ಮದುವೆಯಾಗಿ ಬಂದಿದ್ದಾರೆ. ಕೊನಗೆ ಕಾನೂನಿನ್ವಯ ವಯಸ್ಸಿಗೆ ಮುನ್ನ ಮದುವೆಯಾಗಿ ಶಿಕ್ಷೆಯಾದಂತಹ ಉದಾಹರಣೆಗಳು ಇವೆ.

CKB CHILD MISSING 2

ತನಿಖೆಯಿಂದ ತಿಳಿಯಬೇಕಿದೆ:
ಸದ್ಯ ಇದುವರೆಗೂ ಪತ್ತೆಯಾಗದ ಮಕ್ಕಳು-ಮಹಿಳೆಯರು ಎಲ್ಲಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ. ಒಂದೆಡೆ ನಾಪತ್ತೆಯಾಗಿರೋ ಮಕ್ಕಳು ಹಾಗೂ ಮಹಿಳೆಯರ ಪತ್ತೆ ಕೆಲಸ ಮಾಡಬೇಕಾದ ಆದ್ಯ ಕರ್ತವ್ಯ ಪೊಲೀಸ್ ಇಲಾಖೆಯದ್ದಾಗಿದೆ. ಮತ್ತೊಂದೆಡೆ ಆಕರ್ಷಣೆಯ ಅಮಲಲ್ಲಿ ಹದಿಹರೆಯದ ವಯಸ್ಸಲ್ಲಿ ಹಾದಿ ತಪ್ತಿರೋ ಮಕ್ಕಳಿಗೆ ಜಾಗೃತಿ ಮೂಡಿಸಿ ಸರಿ ದಾರಿ ತೋರೋ ಕೆಲಸ ಆಧಿಕಾರಿಗಳು ಹಾಗೂ ಪೋಷಕರು ಕೂಡ ಮಾಡಬೇಕಿದೆ.

Minor love

Share This Article
Leave a Comment

Leave a Reply

Your email address will not be published. Required fields are marked *