Connect with us

5 ಪುಟ ಡೆತ್‍ನೋಟ್ ಬರೆದು ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

5 ಪುಟ ಡೆತ್‍ನೋಟ್ ಬರೆದು ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

ಚಂಡೀಗಢ: 5 ಪುಟ ಡೆತ್‍ನೋಟ್ ಬರೆದು ಯುವಕನೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಹಿಸ್ಸಾರ್ ನಲ್ಲಿ ನಡೆದಿದೆ.

23 ವರ್ಷದ ಸಾಹಿಲ್ ರೈಲ್ವೇ ಹಳಿ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಸಾಹಿಲ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 5 ಪುಟಗಳ ಡೆತ್‍ನೋಟ್ ಬರೆದಿದ್ದು, ಆತನ ಜೇಬಿನಲ್ಲಿ ಡೆತ್‍ನೋಟ್ ಸಿಕ್ಕಿದೆ. ಫೈನಾನ್ಶಿಯರ್ ಗೆ ಭಯಪಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಡೆತ್‍ನೋಟ್ ಆಧಾರದ ಮೇಲೆ ಫೈನಾನ್ಶಿಯರ್ ಕುಲ್ವಂತ್ ಜಂಗ್ಡಾ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮೃತ ಯುವಕನ ತಂದೆ ಪವನ್ ಕುಮಾರ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗ ಹಿಸ್ಸಾರ್ ನ ಮೊಬೈಲ್ ಕಂಪನಿಯಲ್ಲಿ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದನು ಎಂದು ಹೇಳಿದ್ದಾರೆ.

ಜಂಗ್ಡಾ ಅವರಿಂದ ಸಾಹಿಲ್ ಸುಮಾರು 50,000 ರೂ. ಸಾಲ ಪಡೆದಿದ್ದನು. ಸಾಲಗಾರನ ಒತ್ತಡವೇ ಸಾಹಿಲ್ ನ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಡೆತ್‍ನೋಟ್ ಮೂಲಕ ತಿಳಿದಿದೆ ಎಂದು ಪೊಲೀಸರು ಹೇಳಿದ್ದಾರೆ. ಬುಧವಾರ ರಾತ್ರಿ ಸಮಯವಾದರೂ ಸಾಹಿಲ್ ಮನೆಗೆ ಹಿಂದಿರುಗಿರಲಿಲ್ಲ. ಆದ್ದರಿಂದ ಪೋಷಕರು ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದರು.

ಡೆತ್‍ನೋಟ್ ನಲ್ಲಿ ಏನಿದೆ?: ಮೊದಲನೇ ಪುಟದಲ್ಲಿ ಸಾಹಿಲ್ ತನ್ನ ಪೋಷಕರಿಗೆ ಕ್ಷಮೆ ಕೇಳಿದ್ದಾನೆ. ಅಷ್ಟೇ ಅಲ್ಲದೇ ಜಂಗ್ಡಾಗೆ ಹಿಂದಿರುಗಿಸಬೇಕಾದ ಹಣದ ಬಗ್ಗೆಯೂ ತಿಳಿಸಿದ್ದಾನೆ. ನಾನು ದೆಹಲಿಗೆ ಹೋಗಲು ಮತ್ತು ಶಿಕ್ಷಣವನ್ನು ಪೂರ್ಣಗೊಳಿಸಲು ಜಂಗ್ಡಾರಿಂದ ಸುಮಾರು 12,000 ರೂ. ಸಾಲ ಪಡೆದಿದ್ದೆ. ನನ್ನ ಶಿಕ್ಷಣವನ್ನು ಮುಗಿಸಿದ ನಂತರ ಹಣ ವಾಪಸ್ ನೀಡಲು ಯೋಜಿಸಿದ್ದೆ. ಆದರೆ ನನ್ನ ಸಂಬಳದಿಂದ ಅವರ ಸಾಲ ತೀರಿಸಲು ಸಾಧ್ಯವಾಗಿಲ್ಲ ಎಂದು ಬರೆದಿದ್ದಾನೆ.

ಜಂಗ್ಡಾ ಸಾಹಿಲ್ ಗೆ ನೀಡಿದ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿಯನ್ನು ಸೇರಿಸಿದ್ದ ಬಗ್ಗೆ ಮೂರನೇ ಪುಟದಲ್ಲಿ ತಿಳಿಸಿದ್ದಾನೆ. ಜನ ಸಾಲದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲ್ಲ ಎನ್ನುವುದು ನಿಜ. ಆದ್ರೆ ಸಾಯುವವರು ಸುಳ್ಳು ಹೇಳುವುದಿಲ್ಲ. ಹೀಗಾಗಿ ಸಾಲದ ವಿಚಾರಕ್ಕಿಂತ ನಾನು ಸುಳ್ಳು ಹೇಳುತ್ತಿಲ್ಲ ಎಂಬುದು ಮುಖ್ಯ ಎಂದು ಬರೆದಿದ್ದಾನೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

Advertisement
Advertisement