ಹುಟ್ಟುಹಬ್ಬದ ಸಂಭ್ರಮದ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು – ಭಾರತ ಮೂಲದ ವಿದ್ಯಾರ್ಥಿ ಅಮೆರಿಕದಲ್ಲಿ ಸಾವು

Public TV
1 Min Read
Aryan Reddy

ವಾಷಿಂಗ್ಟನ್‌: ಹುಟ್ಟುಹಬ್ಬದ ಪಾರ್ಟಿ ವೇಳೆ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿದ ಪರಿಣಾಮ ತೆಲಂಗಾಣದ (Telangana) 23 ವರ್ಷದ ವಿದ್ಯಾರ್ಥಿಯೊಬ್ಬ (Student) ಅಮೆರಿಕದಲ್ಲಿ (America) ಸಾವಿಗೀಡಾಗಿದ್ದಾನೆ.

ಮೃತ ಯುವಕನನ್ನು ತೆಲಂಗಾಣದ ಉಪ್ಪಲ್ ಮೂಲದ ಆರ್ಯನ್ ರೆಡ್ಡಿ ಎಂದು ಗುರುತಿಸಲಾಗಿದೆ. ಆತ ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ. ನ.13 ರಂದು ಈ ಘಟನೆ ನಡೆದಿದ್ದು, ಮೃತದೇಹ ಇಂದು ರಾತ್ರಿ (ಶುಕ್ರವಾರ) ತೆಲಂಗಾಣಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ಯನ್ ತಂದೆ ಸುದರ್ಶನ್, ಮಗನನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಇದೇ ವೇಳೆ, ವಿದೇಶದಲ್ಲಿ ಓದುತ್ತಿರುವ ಮಕ್ಕಳು ಗನ್ ಲೈಸೆನ್ಸ್ ಪಡೆಯುವ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕು. ಆರ್ಯನ್ ಬೇಟೆಯಾಡುವ ಗನ್ ಪರವಾನಗಿಯನ್ನು ಪಡೆದಿದ್ದ. ವಿದ್ಯಾರ್ಥಿಗಳು ಅಲ್ಲಿ ಬಂದೂಕಿನ ಪರವಾನಗಿ ಪಡೆದುಕೊಳ್ಳಬಹುದು ಎಂದು ನಮಗೆ ತಿಳಿದಿರಲಿಲ್ಲ. ಯಾವುದೇ ಪೋಷಕರಿಗೂ ಇಂತಹ ಸ್ಥಿತಿ ಎದುರಾಗಬಾರದು ಎಂದು ಭಾವುಕರಾಗಿದ್ದಾರೆ.

ಇತ್ತೀಚೆಗೆ ಅಮೆರಿಕ ಕಾನ್ಸುಲರ್ ಅಧಿಕಾರಿಗಳು ಹಂಚಿಕೊಂಡ ಅಂಕಿ ಅಂಶಗಳ ಪ್ರಕಾರ, 2023-24ರಲ್ಲಿ ಸುಮಾರು 56% ಭಾರತೀಯ ವಿದ್ಯಾರ್ಥಿಗಳು ತೆಲಂಗಾಣ ಹಾಗೂ ಆಂಧ್ರಪ್ರದೇಶದಿಂದ ಯುಎಸ್‌ಗೆ ಹೋಗಿದ್ದಾರೆ. ತೆಲಂಗಾಣದಿಂದ 34% ಮತ್ತು ಆಂಧ್ರಪ್ರದೇಶದಿಂದ 22% ವಿದ್ಯಾರ್ಥಿಗಳು ಅಮೆರಿಕಕ್ಕೆ ವಿದ್ಯಾಭ್ಯಾಸಕ್ಕೆ ತೆರಳಿದ್ದಾರೆ.

Share This Article