– ಏಳು ತಿಂಗಳ ಹಿಂದೆ ಮದುವೆ
– ಯುವತಿ ಪೋಷಕರಿಂದ ಕೊಲೆ ಆರೋಪ
ನವದೆಹಲಿ: 23 ವರ್ಷದ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಪೂರ್ವ ದೆಹಲಿಯ ಮಂಡ್ವಾಲಿಯಲ್ಲಿ ನಡೆದಿದೆ.
ಶಿವಾನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವತಿ. ಏಳು ತಿಂಗಳ ಹಿಂದೆ ಶಿವಾನಿ ಮದುವೆ ಮಂಡ್ವಾಲಿ ನಿವಾಸಿ ಸುದಿಸ್ ಜೊತೆ ನಡೆದಿತ್ತು. ಮದುವೆ ಬಳಿಕ ಪತಿ ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ಶಿವಾನಿ ಪೋಷಕರ ಬಳಿ ಹೇಳಿಕೊಂಡಿದ್ದಳು. ಆದ್ರೂ ಪೋಷಕರು ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಪುತ್ರಿಗೆ ಸಲಹೆ ನೀಡಿದ್ದರು.
ಶುಕ್ರವಾರ ಬೆಳಗ್ಗೆ ಶಿವಾನಿ ಆರೋಗ್ಯ ಏರುಪೇರಾಗಿದ್ದು, ಆದಷ್ಟು ಬೇಗ ಬರುವಂತೆ ಪೋಷಕರು ಫೋನ್ ಬಂದಿದೆ. ಶಿವಾನಿಯನ್ನ ಆಸ್ಪತ್ರೆಗೆ ತಂದಾಗ ಆಕೆ ಮೃತಪಟ್ಟಿರೋದನ್ನ ವೈದ್ಯರು ಖಚಿತ ಪಡಿಸಿದ್ದಾರೆ. ಶಿವಾನಿ ಪತಿ ಮತ್ತು ಆತನ ಪೋಷಕರ ನಡವಳಿಕೆ ಅನುಮಾನಾಸ್ಪಾದವಾಗಿತ್ತು ಎನ್ನಲಾಗಿದೆ.
ಶಿವಾನಿಯ ಕತ್ತು ಮತ್ತು ದೇಹದ ಇತರೆ ಭಾಗಗಳಲ್ಲಿ ಗಾಯದ ಗುರುತುಗಳಿದ್ದವು. ಸಂಚು ಮಾಡಿ ಮಗಳನ್ನ ಕೊಲೆ ಮಾಡಲಾಗಿದೆ. ಪತಿಯ ಕುಟುಂಬ ಆಕೆಗೆ ಬಲವಂತವಾಗಿ ವಿಷ ಕುಡಿಸಿ, ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಶಿವಾನಿ ತಂದೆ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.