ಲಕ್ನೋ: ಇಬ್ಬರು ದುಷ್ಕರ್ಮಿಗಳು ತಮ್ಮ ಸಹೋದರಿಯನ್ನು ಕಾರಿನಿಂದ ಹೊರ ತಳ್ಳಿ ಆ್ಯಸಿಡ್ ದಾಳಿ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಸಂತ್ರಸ್ತೆಯು 22 ವರ್ಷದವಳಾಗಿದ್ದು, ಬುಲಂದರ್ ಶಹರ್ ಜಿಲ್ಲೆಯ ಗುಲೋತಿ ಗ್ರಾಮದ ನಿವಾಸಿಯಾಗಿದ್ದಾರೆ. ಗುರುವಾರ ಘಟನೆ ನಡೆದಿದ್ದು, ಯುವತಿಯು ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾಳೆ.
ಇಬ್ಬರು ಸಹೋದರರು ನನ್ನನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ಬಳಿಕ ಕೋಟ್ ಗ್ರಾಮದ ಹೊರ ವಲಯದಲ್ಲಿ ಕಾರಿನಿಂದ ನನ್ನನ್ನು ಹೊರ ತಳ್ಳಿ ಆ್ಯಸಿಡ್ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೊಲೆ ಮಾಡಲು ಯತ್ನಿಸಿದ್ದರು ಅಂತ ಯುವತಿ ದೂರು ನೀಡಿದ್ದಾಳೆ ಎಂದು ದಾದ್ರಿ ಪೊಲೀಸ್ ಠಾಣೆಯ ಅಧಿಕಾರಿ ನೀರಜ್ ಮಲಿಕ್ ತಿಳಿಸಿದ್ದಾರೆ.
ದುಷ್ಕರ್ಮಿಗಳು ಆ್ಯಸಿಡ್ ದಾಳಿ ಮಾಡಿ ಪರಾರಿಯಾದ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ್ಯಸಿಡ್ ದಾಳಿಯಿಂದಾಗಿ ಯುವತಿಯ ದೇಹದ ಮೇಲೆ ಶೇ.50ರಷ್ಟು ಸುಟ್ಟ ಗಾಯಗಳಾಗಿವೆ. ಅಷ್ಟೇ ಅಲ್ಲದೆ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾಳೆ.
ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 326 (ಆ್ಯಸಿಡ್ ದಾಳಿ) ಹಾಗೂ 307 (ಕೊಲೆಗೆ ಯತ್ನ) ಅಡಿ ಪ್ರಕರಣ ದಾಖಲಾಗಿದೆ. ಆ್ಯಸಿಡ್ ದಾಳಿಗೆ ನಿಖರ ಕಾರಣ ವರದಿಯಾಗಿಲ್ಲ.