– ಮೂರು ದಿನ ಹೋಮ, ಹವನ, ಪೂಜೆ
ಚಾಮರಾಜನಗರ: ವಿಷ ಪ್ರಸಾದ ದುರಂತದಿಂದ ಕಳೆದ 22 ತಿಂಗಳಿಂದ ಬಾಗಿಲು ಮುಚ್ಚಿದ್ದ ಸುಳ್ವಾಡಿ ಕಿಚ್‍ಗುತ್ ಮಾರಮ್ಮನ ದೇವಾಲಯ ಇಂದಿನಿಂದ ಆರಂಭವಾಗಿದೆ. ಅ.21, 22, 23 ರಂದು ಮೂರು ದಿನಗಳ ಕಾಲ ವಿವಿಧ ಪೂಜೆ, ಹೋಮ, ಹವನ ನಡೆಯಲಿದೆ. ಅ.24 ರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲೂ ಜಿಲ್ಲಾಡಳಿತ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಪೂಜಾ ಕೈಂಕರ್ಯ ನೆರವೇರಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿರೋ ಕಿಚ್‍ಗುತ್ ಮಾರಮ್ಮನ ದೇವಾಲಯ ವಿಷ ಪ್ರಸಾದ ದುರಂತದ ನಂತರ ಬಾಗಿಲು ಮುಚ್ಚಿ ಎರಡು ವರ್ಷ ಕಳೆದಿದೆ. ಮಾರಮ್ಮನ ಭಕ್ತರು ಕೂಡ ಯಾವಾಗ ಸುಳ್ವಾಡಿ ಮಾರಮ್ಮನ ದರ್ಶನವಾಗುತ್ತೆ ಅಂತಾ ಕಾದು ಕುಳಿತಿದ್ದರು. ಸರ್ಕಾರ ದೇವಾಲಯ ತೆರೆಯಲು ನಿರ್ಧರಿಸಿದ ನಂತರ ಪೂಜೆ, ಹೋಮ ನಡೆಯುತ್ತಿದೆ.
ಡಿ.14, 2018 ರಂದು ನಡೆದ ವಿಷ ಪ್ರಸಾದ ದುರಂತದಲ್ಲಿ 17 ಜನ ಸಾವನ್ನಪ್ಪಿದ್ದು, 120ಕ್ಕೂ ಹೆಚ್ಚು ಭಕ್ತರು ಅಸ್ವಸ್ಥರಾಗಿದ್ದರು. ವಿಷವುಂಡವರ ಬದುಕು ಇಂದಿಗೂ ಕೂಡ ಸಂಕಷ್ಟದಲ್ಲಿರೋದು ವಿಪರ್ಯಾಸ. ವಿಷ ಹಾಕಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಇಂದಿಗೂ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಇದೀಗ ಆಗಮಿಕ ಪಂಡಿತರು ಪ್ರೊ.ಮಲ್ಲಣ್ಣ ನೇತೃತ್ವದಲ್ಲಿ ಪೂಜಾ,ಕೈಂಕರ್ಯಗಳು ಇಂದು ಸಂಜೆಯಿಂದಲೇ ಆರಂಭವಾಗಿದೆ.
ಮೂರು ದಿನದ ಪೂಜಾ ಕೈಂಕರ್ಯದ ವಿವರ: ಇಂದು ದೇವಾಲಯದಲ್ಲಿ ಮೊದಲಿಗೆ ಯೋಗಶಾಲಾ ಪ್ರವೇಶ, ಪುಣ್ಯಾಹ, ಪ್ರವೇಶ ಬಲಿ ಪೂಜೆ ನಡೆಯಲಿದೆ. ಅ.22 ರಂದು ಪಂಚಗವ್ಯಸಾಧನ ಪೂಜೆ, ಪ್ರೋಕ್ಷಣೆ, ದಶದಿಕ್ಪಾಲಕರ ಪೂಜೆ, ನಂದಿ, ಭೈರವೇಶ್ವರ ಗಣಪತಿ ಕಳಸ ಹೋಮ, ಪಾರಯಣ, ಗಣ ಹೋಮ, ರಕ್ಷಾ ಬಂಧನ, ಜಲಾಧಿವಸ ಪೂಜೆ ನಡೆಯಲಿದೆ.
ಅ.23 ರಂದು ಪುಣ್ಯಾಹ, ವೇದ, ಪಾರಾಯಣ, ಕಳಸ ದುರ್ಗಾ ಕಳಸೆ ಪೂಜೆ ಹಾಗೂ ಸೂಕ್ತ ಪಾರಾಯಣ ಪೂಜೆ ನಡೆಯಲಿದೆ. ಅ.24 ರಂದು ಬೆಳಗ್ಗೆ 11.20 ರಿಂದ 12.15ರ ಶುಭ ಅಭಿಜಿನ್ ಮುಹೂರ್ತದಲ್ಲಿ ಭಕ್ತರಿಗೆ ಮಾರಮ್ಮನ ದರ್ಶನವಾಗುವ ಕುರಿತು ಆಗಮಿಕ ಪಂಡಿತ ಪ್ರೊ.ಮಲ್ಲಣ್ಣ ಮಾಹಿತಿ ನೀಡಿದ್ದಾರೆ. ದೇವಾಲಯದ ಸುತ್ತಲೂ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಪೊಲೀಸ್ ಭದ್ರತೆಯ ನಡುವೆ ಪೂಜೆಗಳನ್ನು ಆರಂಭಿಸಲಾಗಿದೆ. ಅಲ್ಲದೇ ಮಾರಮ್ಮನಿಗೆ ನೆರೆಯ ತಮಿಳುನಾಡು ರಾಜ್ಯದಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ತಾತ್ಕಾಲಿಕ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.