ಚುನಾವಣಾ ದಂಗಲ್ ನಲ್ಲಿ ಈಗ ಎಲ್ಲರ ಚಿತ್ತ ಕರಾವಳಿ ಕರ್ನಾಟಕದತ್ತ. ದಕ್ಷಿಣ ಕೆನರಾದಲ್ಲಿ ರಾಜಕಾರಣಕ್ಕೆ ಧರ್ಮದ ಹೊದಿಕೆ ಮುಚ್ಚಿ ಅದೆಷ್ಟೋ ಕಾಲವೇ ಆಯ್ತು. ಬುದ್ಧಿವಂತರ ಜಿಲ್ಲೆಯಲ್ಲಿ ಅಭಿವೃದ್ಧಿ ಹಾಗೂ ಇತರೆ ವಿಷಯಗಳು ರಾಜಕೀಯದ ವಿಷಯದಲ್ಲಂತೂ ನಗಣ್ಯ. ಚುನಾವಣೆಯ ಹೊಸ್ತಿಲಲ್ಲಿ ತಲೆ ಎತ್ತಿದ ಕೋಮುಗಲಭೆ,ಹತ್ಯೆ ವಿಚಾರಗಳು ಈ ಬಾರಿ ನಿರ್ಣಾಯಕ ಅಂತಾ ಅನಿಸಿದ್ರೂ ಮತದಾರನ ಮನದಾಳವನ್ನುಅರಿತವರಾರು..?
ಸಾಮರಸ್ಯ ಜೀವನವೇ ತುಳುನಾಡಿನ ಅಂದ-ಚಂದ..
ಅಂದ ಹಾಗೆ, 1948ನೇ ಇಸವಿಗೂ ಮೊದಲು ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡಗಳೆರಡನ್ನೂ ಒಟ್ಟಾಗಿ ಬ್ರಿಟೀಷರು ಕೆನರಾ ಅಂತಾ ಕರೀತಿದ್ರು. ದಕ್ಷಿಣ ಕೆನರಾ ಮದ್ರಾಸ್ ಪ್ರೆಸಿಡೆನ್ಸಿ ವ್ಯಾಪ್ತಿಗೆ ಒಳಪಟ್ಟಿತ್ತು. ಪೌರಾಣಿಕ ಕಥೆಗಳ ಮೂಲಗಳ ಪ್ರಕಾರ ದಕ್ಷಿಣ ಕನ್ನಡವನ್ನ ಪರಶುರಾಮ ಸೃಷ್ಟಿಸಿದ ಅನ್ನೋ ನಂಬಿಕೆ ಇದೆ. ಬೆಂಗಳೂರಿನ ನಂತರ ಅತ್ಯಂತ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರೋ ನಗರ ದಕ್ಷಿಣ ಕನ್ನಡ. ತುಳು ಪ್ರಮುಖ ಭಾಷೆಯಾಗಿದ್ರೂ ಕನ್ನಡ, ಹವ್ಯಕ, ಕನ್ನಡ, ಮಲಯಾಳಂ, ಕುಂದಾಪುರ ಕನ್ನಡ, ಕೊಂಕಣಿ, ಬ್ಯಾರಿ ಭಾಷೆ ಮಾತನಾಡುವ ಜನರ ಸಾಮರಸ್ಯ ಸಂಗಮ.
Advertisement
ಇಲ್ಲಿನ ಕಲ್ಲು ಕಲ್ಲು ಹೇಳುತ್ತೆ ಕ್ಷೇತ್ರ ಮಹಿಮೆಯನ್ನ..!
ಧರ್ಮಸ್ಥಳದ ಶ್ರೀ ಮಂಜುನಾಥ ಕ್ಷೇತ್ರ, ಕದ್ರಿ ಮಂಜುನಾಥೇಶ್ವರ ದೇಗುಲ, ಕುಕ್ಕೆ ಸುಬ್ರಹ್ಮಣ್ಯ, ಕಾರ್ಕಳದ ಗೋಮಟೇಶ್ವರ ಬೆಟ್ಟ ಮತ್ತು ಚತುರ್ಮುಖ ಬಸದಿ, ಮೂಡಬಿದಿರೆಯ ಸಾವಿರ ಕಂಬದ ಬಸದಿ, ಅತ್ತೂರು ಸೇಂಟ್ ಲಾರೆನ್ಸ್ ಚರ್ಚ್, ಪುತ್ತೂರಿನ ಮಹಾಲಿಂಗೇಶ್ವರ ಮತ್ತು ದರ್ಗಾ ಶರೀಫ್ ಮಾಡನ್ನೂರು ಹೀಗೆ ಅನೇಕ ಧಾರ್ಮಿಕ ಪ್ರೇಕ್ಷಣೀಯ ಸ್ಥಳಗಳಿವೆ. ಒಂದರ್ಥದಲ್ಲಿ ದಕ್ಷಿಣ ಕನ್ನಡ ಧಾರ್ಮಿಕ ನೆಲೆಬೀಡು. ಇಂತಿಪ್ಪ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಚುನಾವಣೆಯಿಂದಾಗಿ ಮತ್ತಷ್ಟು ಕಲರ್ ಫುಲ್ ಆಗಿದೆ.
Advertisement
ಕಣ್ಣುಗಳೆರಡು ಸಾಲದು ಕಡಲನಗರಿಯನ್ನ ತುಂಬಿಕೊಳ್ಳಲು..!
ಕಣ್ಣು ಹಾಯಿಸಿದಷ್ಟೂ ದೂರ, ಆಕಾಶ ಭೂಮಿಗಳ ಸಮಾಗಮದಂತೆ ಕಾಣುವ ನಯನ ಮನೋಹರ ಕಡಲ ತಡಿಗಳೇ ದಕ್ಷಿಣ ಕನ್ನಡದ ಜಿಲ್ಲೆಯ ಪ್ರಮುಖ ಆಕರ್ಷಣೆ. ಪಣಂಬೂರು ಬೀಚ್, ತಣ್ಣೀರು ಬಾವಿ ಬೀಚ್, ಪಿಲಿಕುಳ, ಕುಮಾರ ಪರ್ವತ, ಜಮಾಲಾಬಾದ್ ಕೋಟೆ ಹೀಗೆ ಸಾಕಷ್ಟು ತಾಣಗಳು ಪ್ರವಾಸಿಗರ ಹಾಟ್ ಫೇವರೇಟ್.
Advertisement
ಚೆಂಡೆ ಪೆಟ್ಟಿಗೆ ಕುಣಿಯೋ ವಿಶಿಷ್ಟ ಗಂಡು ಕಲೆ ಯಕ್ಷಗಾನ
ಯಕ್ಷಗಾನ ಕರಾವಳಿಯ ಗಂಡು ಕಲೆ ಅಂತಾನೇ ಪ್ರಸಿದ್ಧ. ಹಿಂದೆಲ್ಲಾ ಈ ಕಲೆ ದೊಂದಿ ಬೆಳಕಿನ ನಡುವೆ ಆಡಿಸ್ತಾ ಇದ್ರು. ಭಾಗವತಿಕೆ, ಮದ್ದಳೆ, ಚೆಂಡೆ, ಚಕ್ರತಾಳ, ಹಿಮ್ಮೇಳದಲ್ಲಿ ಹಾರ್ಮೋನಿಯಂ ಹೀಗೆ ಅವ್ರದ್ದೇ ಚೌಕಟ್ಟಿನಲ್ಲಿ ರಂಗ ಸ್ಥಳದಲ್ಲಿ ಕೂತ್ರೆ ಮುಮ್ಮೇಳದಲ್ಲಿ ಆಯಾ ಪಾತ್ರಧಾರಿಗಳು ಬಂದು ಪ್ರಸಂಗಕ್ಕೆ ತಕ್ಕ ಹಾಗೆ, ಅಭಿನಯಿಸ್ತಾರೆ. ಪೌರಾಣಿಕ ಕಥೆಗಳನ್ನು ಯಕ್ಷರಂಗದ ಮೇಲೆ ತಂದು ಜನರನ್ನ ರಂಜಿಸ್ತಾರೆ. ಯಕ್ಷಗಾನ ಕೇವಲ ಕಲೆ ಅನ್ನೋದಕ್ಕಿಂತ ಹೆಚ್ಚಾಗಿ ಅದು ಸಂಸ್ಕೃತಿಯ ಭಾಗವಾಗಿ ಕರಾವಳಿಯ ಜನರ ಜೀವನಾಡಿಯಾಗಿದೆ.
Advertisement
ಬಂಗುಡೆ ಗಸಿ ಜೊತೆ ನೀರು ದೋಸೆ ಸೂಪರ್ರೋ ಸೂಪರ್
ಆಯಾ ಪ್ರಾಂತ್ಯಗಳಿಗೆ ಅನುಗುಣವಾಗಿ ಭಾಷೆ, ಜನರ ಜೀವನ ಶೈಲಿಯ ಜೊತೆಗೆ ಖಾದ್ಯವೂ ಬದಲಾಗುತ್ತೆ. ಒಮ್ಮೆ ನೀವು ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ನೀರ್ ದೋಸೆ, ಬಂಗುಡೆ ಗಸಿ, ಪತ್ರೊಡೆ (ಕೆಸುವಿನ ಎಲೆಯಲ್ಲಿ ಮಾಡೋ ಖಾದ್ಯ), ಮಂಗಳೂರು ಶೈಲಿಯ ಚಿಕನ್ ಸುಕ್ಕಾ, ಪುಂಡಿ (ಅಕ್ಕಿಯಲ್ಲಿ ಮಾಡೋ ಖಾದ್ಯ), ಕಣಿಲೆ ಉಪ್ಪಿನಕಾಯಿ, ಉಪ್ಪಡ್ ಪಚ್ಚಿಲ್ ರೊಟ್ಟಿ ಅಥವಾ ಪಲ್ಯ ( ಹಲಸಿನ ಖಾದ್ಯ) ಸವಿದಿಲ್ಲ ಅಂದ್ರೆ ಜೀವನವೇ ವ್ಯರ್ಥ. ಇವಿಷ್ಟು ದಕ್ಷಿಣ ಕನ್ನಡ ಜಿಲ್ಲೆಯ ಬಗೆಗಿನ ವೈವಿಧ್ಯಮಯ ವಿಷಯಗಳಾಗಿದ್ರೆ, ಇಷ್ಟೇ ಕಲರ್ಫುಲ್ಲಾಗಿದೆ ಇಲ್ಲಿನ ರಾಜಕೀಯ ಚಿತ್ರಣ.
ಬಿರು ಬೇಸಿಗೆಯ ತಾಪ ಹೆಚ್ಚಿಸಲಿದೆ ದಕ್ಕಣ ರಾಜಕಾರಣ..!
ಸದ್ಯಕ್ಕೆ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭದ್ರವಾಗಿ ಕೂತು ಬಿಟ್ಟಿದೆ. ಹಾಗಾಗಿ ಕಾಂಗ್ರೆಸ್ ಗೆ ದಕ್ಷಿಣ ಕನ್ನಡ ಜಿಲ್ಲೆ ಆಶಾಕಿರಣವಾಗಿರೋದ್ರಲ್ಲಿ ನೋ ಡೌಟ್. 2013ರ ಹೀನಾಯ ಸೋಲಿನಿಂದ ಪಾಠ ಕಲಿತಿರುವ ಬಿಜೆಪಿ ಇಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಇನ್ನಿಲ್ಲದಂತೆ ಕಸರತ್ತು ನಡೆಸಿದೆ. ಕಾಂಗ್ರೆಸ್ ಬಿಜೆಪಿ ಜಿದ್ದಾಜಿದ್ದಿನ ನಡುವೆ ಜೆಡಿಎಸ್, ಎಸ್ ಡಿಪಿಐ ಸ್ಪರ್ಧೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಪರಿಸ್ಥಿತಿ ಇದೆ.
ಬಂಟ್ವಾಳದ ಬಂಟ ರಮಾನಾಥ್ ರೈ ನಡೆದದ್ದೇ ಹಾದಿ..!
ಡಬಲ್ ಹ್ಯಾಟ್ರಿಕ್ ಗೆಲುವು ಕಂಡಿರುವ ರಮಾನಾಥ ರೈ ಸೋಲಿಲ್ಲದ ಸರದಾರನಾಗಿದ್ದಾರೆ. ಕೋಮು ರಾಜಕಾರಣದಿಂದ ಸದಾ ಕುದಿಯುವ ಕಲ್ಲಡ್ಕ, ರಮಾನಾಥ ರೈಯವರಿಗೆ ಸೆರಗಿನಲ್ಲಿಟ್ಟುಕೊಂಡ ಕೆಂಡ. ಹಾಲಿ ಉಸ್ತುವಾರಿ ಸಚಿವರ ವಿರುದ್ಧವೇ ಉರಿದು ಬಿದ್ದಿರುವ ಸಂಘ ಪರಿವಾರ ಹಾಗೂ ಬಿಜೆಪಿಗೆ ರೈ ಮೇನ್ ಟಾರ್ಗೆಟ್. ರಮಾನಾಥ್ ರೈ ವಿರುದ್ಧ ಕಳೆದ ಬಾರಿ ಸೋತಿದ್ದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಈ ಬಾರಿ ಕೂಡಾ ಬಿಜೆಪಿಯ ಹುರಿಯಾಳು. ಆದ್ರೆ, ರಮಾನಾಥ್ ರೈಗೆ ಇರೋ ಪ್ರಭಾವದ ಮುಂದೆ ರಾಜೇಶ್ ನಾಯ್ಕ್ ಗೆಲ್ತಾರಾ ಅನ್ನೋದೇ ಸದ್ಯದ ಪ್ರಶ್ನೆ. ಕಳೆದ ಬಾರಿ ರಮಾನಾಥ ರೈ 81,665 ಮತಗಳನ್ನು ಪಡೆದು ಜಯ ಗಳಿಸಿದ್ರು. ರಾಜೇಶ್ ನಾಯ್ಕ್ 63,815 ಜನ ಓಟ್ ಹಾಕಿದ್ರೆ, ಜೆಡಿಎಸ್‍ನ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ 1,927 ಮತಗಳಿಗೆ ತೃಪ್ತಿ ಪಟ್ಕೋಬೇಕಾಯ್ತು.
ಮಂಗಳೂರಲ್ಲಿ ಈ ಬಾರಿ ಯಾರ `ಖದರ್’..?
ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ನಾಯಕ ಯುಟಿ ಖಾದರ್ ಖದರ್ ಜೋರಾಗೇ ಇತ್ತು. ಇಡೀ ದಕ್ಷಿಣ ಕನ್ನಡದಲ್ಲೇ ಕಾಂಗ್ರೆಸ್ ಗೆ ಅತ್ಯಂತ ಸೇಫೆಸ್ಟ್ ಜಾಗ ಅಂದ್ರೆ ಅದು ಮಂಗಳೂರು. ಇಲ್ಲಿ ಅಲ್ಪಸಂಖ್ಯಾತರೇ ನಿರ್ಣಾಯಕರಾಗಿರೋದ್ರಿಂದ ಯುಟಿ ಖಾದರ್ ಸದ್ಯದ ಮಟ್ಟಿಗೆ ಸೇಫ್ ಗೇಮ್ ಆಡ್ತಿದ್ದಾರೆ. ಎರಡೂವರೆ ದಶಕಗಳ ಹಿಂದೆ ಒಮ್ಮೆ ಮಾತ್ರ ಬಿಜೆಪಿ ಗೆಲುವಿನ ರುಚಿ ಕಂಡಿತ್ತು. ಇನ್ನು, ಕಳೆದ ಚುನಾವಣೆಯಲ್ಲಿ ಬಿಜೆಪಿಯ ಚಂದ್ರಹಾಸ್ ಉಳ್ಳಾಲ್ ಎದುರು ಯು.ಟಿ.ಖಾದರ್ 29,111 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ರು. ಕ್ಷೇತ್ರದ ಜನರ ಜೊತೆ ಯುಟಿ ಖಾದರ್ ಕುಟುಂಬದ ಒಡನಾಟ ಸಾಕಷ್ಟು ಹಳೇದು. ಖಾದರ್ ತಂದೆ ಯು.ಟಿ ಫರೀದ್ 1972, 1978, 1999 ಮತ್ತು 2004ರಲ್ಲಿ ಗೆಲುವು ಕಂಡಿದ್ರು. ಬಿಜೆಪಿ ಈಗಾಗ್ಲೇ ತನ್ನ ಕದನ ಕಲಿ ಸಂತೋಷ್ ಕುಮಾರ್ ಬೋಳಿಯಾರ್ ಅಂತಾ ಘೋಷಿಸಿದ್ದು ಚುನಾವಣೆ ಕುತೂಹಲ ಕೆರಳಿಸಿದೆ. ಜಿಲ್ಲಾಪಂಚಾಯತ್, ಗ್ರಾಮ ಪಂಚಾಯತ್ ಗಳಲ್ಲಿ ಕೆಲಸ ಮಾಡಿ ಜನರ ನಡುವೆ ಕೆಲಸ ಮಾಡಿರೋ ಬೋಳಿಯಾರ್ ಅಬ್ಬಕ್ಕನ ನಾಡಲ್ಲಿ ಜಯದ ಕೇಕೆ ಹಾಕ್ತಾರಾ ಅನ್ನೋದಕ್ಕೆ ಕಾಲವೇ ಉತ್ತರ ಹೇಳ್ಬೇಕಿದೆ.
ಮೂಡಬಿದರೆಯಲ್ಲಿ ಯಾರಾಗ್ತಾರೆ ಗೆಲ್ಲೋ ಕುದುರೆ..?
ಜೈನ ಕಾಶಿ ಮೂಡಬಿದಿರೆಯ ರಾಜಕೀಯ ಜಾತಿಯ ಮೇಲೆ ಆಧರಿತವಾಗಿಲ್ಲ. ಮಾಜಿ ಸಚಿವ ಹಾಲಿ ಶಾಸಕರಾಗಿರೋ ಅಭಯಚಂದ್ರ ಜೈನ್ ಗೆ ಪಕ್ಷ ಹಾಗೂ ವೈಯಕ್ತಿಕ ಪ್ರಭಾವವೇ ಪ್ಲಸ್ ಪಾಯಿಂಟ್. 2013ರಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಅಭಯ ಚಂದ್ರ ಜೈನ್ 53180 ಮತಗಳನ್ನು ಪಡೆದು ಗೆದ್ದು ಶಾಸಕರಾದ್ರು. ಬಿಜೆಪಿಯ ಉಮಾನಾಥ್ ಕೋಟ್ಯಾನ್ 48630 ಮತಗಳನ್ನು ಪಡೆದು 4550 ಮತಗಳ ಅಂತರದಿಂದ ಸೋತ್ರು. ಇನ್ನುಳಿದಂತೆ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಅಮರನಾಥ್ ಶೆಟ್ಟಿ 20471 ಮತಗಳನ್ನು ಪಡೆದ್ರು. ಒಂದು ಬಾರಿ ಜೆಡಿಎಸ್ ಇಲ್ಲಿ ಗೆದ್ದಿದ್ದು ಬಿಟ್ರೆ ಕಾಂಗ್ರೆಸ್ ಹಾಗೂ ಬಿಜೆಪಿಗೇ ಇಲ್ಲಿ ಸಾಕಷ್ಟು ಫೈಟ್ ಇದೆ. ಅಂದ ಹಾಗೆ, ಈ ಬಾರಿ ಬಿಜೆಪಿಯಿಂದ ಮತ್ತೆ ಉಮಾನಾಥ್ ಕೋಟ್ಯಾನ್ ಹೆಸ್ರು ಫೈನಲೈಸ್ ಆಗಿದೆ.
ಚುನಾವಣಾ ಕಾವಿಗೆ ತತ್ತರವಾಯ್ತು ಮಂಗಳೂರು ಉತ್ತರ !
ಹಾಲಿ ಶಾಸಕ ಮೊಯಿದ್ದೀನ್ ಬಾವಾ ಈ ಬಾರಿ ಕೂಡಾ ಕಾಂಗ್ರೆಸ್ ನಿಂದ ಟಿಕೆಟ್ ಪಡೆದು ಅಂತಿಮ ಹಣಾಹಣಿಯಲ್ಲಿದ್ದಾರೆ. 2013ರ ಚುನಾವಣೆಯಲ್ಲಿ ಬಿಜೆಪಿಯ ಪಾಲೆಮಾರ್ ಅವರನ್ನು ಸೋಲಿಸೋ ಮೂಲಕ ಎಲ್ಲರ ಹುಬ್ಬೇರಿಸಿದ್ರು ಬಾವಾ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕೃಷ್ಣ ಪಾಲೇಮಾರ್ ಆಸೆಗೆ ತಣ್ಣೀರೆರಚಿದ್ದು ಇದೇ ಮೊಯಿದ್ದೀನ್ ಬಾವಾ. ಈ ಬಾರಿ ಬಿಜೆಪಿ ಕೃಷ್ಣ ಪಾಲೇಮಾರ್ ಗೆ ಟಿಕೆಟ್ ಕೊಡೋ ನಿರೀಕ್ಷೆ ಇತ್ತು. ಆದ್ರೆ,ಎಲ್ಲರಿಗಿಂತ ಮೊದಲೇ ಸಿಪಿಐಎಂನಿಂದ ಮುನೀರ್ ಕಾಟಿಪಳ್ಳ ಕ್ಯಾಂಪೇನ್ ನಲ್ಲಿ ಬ್ಯುಸಿಯಾಗಿದ್ದಾರೆ. ಅತ್ಯಂತ ಸೂಕ್ಷ್ಮ ಪ್ರದೇಶ ಅಂತಾ ಚುನಾವಣಾ ಆಯೋಗ ಈ ಕ್ಷೇತ್ರವನ್ನ ಗುರುತಿಸಿದೆ. ಕಳೆದ ಬಾರಿ ಮೊಯಿದ್ದೀನ್ ಬಾವಾ ಅವರ ಎದುರು 5,373 ಮತಗಳ ಅಂತರದಿಂದ ಪರಾಭವಗೊಂಡಿದ್ದ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ, ಬಿಜೆಪಿ ಉತ್ತರವಲಯದ ಅಧ್ಯಕ್ಷ ಡಾ. ಭರತ್ ಶೆಟ್ಟಿ ಅಂತಿಮವಾಗಿ ಟಿಕೆಟನ್ನ ತಮ್ಮದಾಗಿಸಿಕೊಂಡಿದ್ದಾರೆ. ಇಲ್ಲಿ ಜೆಡಿಎಸ್ ಅಷ್ಟೊಂದು ಪ್ರಾಮುಖ್ಯತೆ ಗಳಿಸಿಲ್ಲ.
ಸುಳ್ಯದ ಬಂಗಾರ ಶಾಸಕ ಅಂಗಾರ
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ವಶದಲ್ಲಿರುವ ಏಕೈಕ ಕ್ಷೇತ್ರ ಸುಳ್ಯ. ಎರಡೂವರೆ ದಶಕಗಳಿಂದಲೂ ಇಲ್ಲಿ ಹಾಲಿ ಶಾಸಕ ಎಸ್ ಅಂಗಾರರ ಅಶ್ವಮೇಧ ಕುದುರೆಯನ್ನ ಕಟ್ಟಿ ಹಾಕೋದಕ್ಕೆ ಯಾರಿಂದಲೂ ಸಾಧ್ಯವಾಗಿಲ್ಲ. 2013ರಲ್ಲಿ ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳನ್ನು ಬಿಜೆಪಿ ಸೋತಿದ್ದಾಗ್ಲೂ ಜಿಲ್ಲೆಯಲ್ಲಿ ಬಿಜೆಪಿಗೆ ಆಸರೆಯಾದ ಏಕೈಕ ಕ್ಷೇತ್ರ ಅಂದ್ರೆ ಅದು ಸುಳ್ಯ. ಆದ್ರೆ, ಮತಗಳು ಕುಸಿತ ಕಂಡಿದ್ರೂ ಅಂಗಾರ ಮಾತ್ರ ಸೋಲೇ ಇಲ್ಲದ ಸರದಾರನಂತೆ ಮುನ್ನುಗ್ಗುತ್ತಿದ್ದಾರೆ. ಕಳೆದ ಬಾರಿ ಕೇವಲ ಒಂದೂವರೆ ಸಾವಿರದಷ್ಟು ಮತಗಳ ಅಂತರದಲ್ಲಿ ಸೋತಿದ್ದ ಡಾ ಬಿ ರಘು ಈ ಬಾರಿಯೂ ಕಾಂಗ್ರೆಸ್ ನಿಂದ ಕಣದಲ್ಲಿದ್ದಾರೆ. ಉಳಿದಂತೆ ಇಲ್ಲಿ ಯಾವ ಪಕ್ಷವೂ ನಿರ್ಣಾಯಕವಲ್ಲ.
ಮಂಗಳೂರು ದಕ್ಷಿಣದಲ್ಲಿ ರಂಗೇರಿದೆ ರಣಕಣ
ಮಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿಗೆ ಸರಿಯಾಗೇ ಮಣ್ಣು ಮುಕ್ಕಿಸಿದ್ದ ಕ್ಷೇತ್ರ. ಸತತ ನಾಲ್ಕು ಬಾರಿ ಗೆದ್ದು ಬೀಗಿದ್ದ ಯೋಗೀಶ ಭಟ್ ರಿಗೆ ಕಾಂಗ್ರೆಸ್ ನ ಜೆ ಆರ್ ಲೋಬೋ ಕೊಟ್ಟ ಹೊಡೆತಕ್ಕೆ ಬಿಜೆಪಿ ತತ್ತರಿಸಿ ಹೋಗಿತ್ತು. ಹಾಲಿ ಶಾಸಕ ಲೋಬೋ ಬಗ್ಗೆ ಕ್ಷೇತ್ರದಲ್ಲಿ ಯಾವುದೇ ತಕರಾರಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸ್ಪರ್ಧೆಗೆ ಇದೆ ಅನ್ನೋದು ಬಿಟ್ರೆ ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಎಸ್.ಪಿ.ಚಂಗಪ್ಪ ಕೇವಲ 1672 ಮತಗಳನ್ನಷ್ಟೇ ಗಳಿಸಿದ್ರು. ಕುತೂಹಲ ಮೂಡಿಸಿದ್ದ ಬಿಜೆಪಿ ಟಿಕೆಟ್ ಪಟ್ಟಿಯಲ್ಲಿ ಅಂತಿಮವಾಗಿ ಉದ್ಯಮಿ ವೇದವ್ಯಾಸ ಕಾಮತ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಾಗಾಗಿ, ಈ ಬಾರಿ ರಣಕಣ ಮತ್ತಷ್ಟು ಕಾವು ಪಡೆದುಕೊಳ್ಳೋದ್ರಲ್ಲಿ ಯಾವ ಅನುಮಾನಾನೂ ಇಲ್ಲ.
ಬೆಳ್ತಂಗಡಿಯಲ್ಲಿ ಬಂಗೇರರಿಗೆ ಠಕ್ಕರ್ ಕೊಡೋರು ಯಾರಣ್ಣ..?
ಬೆಳ್ತಂಗಡಿಯಲ್ಲಿ ಕಳೆದ ಐದು ಅವಧಿಯಿಂದಲೂ ಶಾಸಕರಾಗಿರೋ ವಸಂತ ಬಂಗೇರರಿಗೆ ಠಕ್ಕರ್ ಕೊಡೋರು ಯಾರು ಅನ್ನೋದೇ ಬಿಜೆಪಿಯ ತಲೆ ನೋವು. ಆದ್ರೆ, ಇಲ್ಲಿ ಯಾವತ್ತೂ ಒಂದೇ ಪಕ್ಷ ಹಿಡಿತ ಸಾಧಿಸಿದ ಉದಾಹರಣೆ ಇಲ್ಲ. ಬಿಲ್ಲವ ಹಾಗೂ ಗೌಡರೇ ಚುನಾವಣೆಯಲ್ಲಿ ನಿರ್ಣಾಯಕ. 1983 ಮತ್ತು 1985ರಲ್ಲಿ ವಸಂತ ಬಂಗೇರರು ಬಿಜೆಪಿ ಪಾಳಯದಲ್ಲಿದ್ರು. 2013ರಲ್ಲಿ ಇವ್ರ ಪ್ರಬಲ ಪ್ರತಿಸ್ಫರ್ಧಿ ಅಂತಾ ಬಿಜೆಪಿ ರಂಜನ್ ಗೌಡರನ್ನ ಕಣಕ್ಕಿಳಿಸಿತ್ತು. ಆದ್ರೆ, 16000 ಮತಗಳ ಭಾರೀ ಅಂತರದಲ್ಲಿ ರಂಜನ್ ಸೋಲನ್ನಪ್ಪಿದ್ರು. ಬೆಳ್ತಂಗಡಿ ಕ್ಷೇತ್ರದ ಮೇಲೆ ವಸಂತ ಬಂಗೇರರ ಹಿಡಿತ ಎಷ್ಟಿದೆ ಅನ್ನೋದಕ್ಕೆ ಮೂರು ಬೇರೆ ಬೇರೆ ಪಕ್ಷಗಳಿಂದ ಅವರು 5 ಬಾರಿ ಗೆದ್ದಿದ್ದೇ ಸಾಕ್ಷಿ. ಇನ್ನು ಈ ಬಾರಿಯೂ ರಂಜನ್ ಜಿ. ಗೌಡ ಟಿಕೆಟ್ ಬಯಸಿದ್ರೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಕ್ಸಸ್ ಆಗಿದ್ದಾರೆ.
ಪುತ್ತೂರಿನ ಮುತ್ತು ಶಕ್ಕು ಅಕ್ಕನ ತಾಕತ್ತು!
ಪುತ್ತೂರು ಕ್ಷೇತ್ರದಲ್ಲಿ ಶಕ್ಕು ಅಕ್ಕನದ್ದೇ ದರ್ಬಾರ್ ಜೋರಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ನಲ್ಲಿ ಬಂಡಾಯದ ಸ್ಪೋಟವಾಗಿದೆ. ಉರಿಮಜಲು ರಾಮಭಟ್ ರಿಂದ ರಾಜಕೀಯ ಪಟ್ಟುಗಳನ್ನ ಕಲಿತ ಶಕುಂತಳಾ ಶೆಟ್ಟಿ ನಂತರ ಕಾಂಗ್ರೆಸ್ ಕದ ತಟ್ಟಿದ್ದು ಇತಿಹಾಸ. 20 ವರ್ಷಗಳಿಂದ ಬಿಜೆಪಿ ಭದ್ರ ಕೋಟೆಯಾಗಿತ್ತು ಪುತ್ತೂರು. ಆದ್ರೆ, ಅದೇ ಬಿಜೆಪಿ ಬಿಟ್ಟು ಶಕುಂತಳಾ ಶೆಟ್ಟಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದಾಗ ಛಿದ್ರ ಛಿದ್ರವಾಯ್ತು. ಶಕ್ಕು ಅಕ್ಕನ ಕೈಬಿಡದ ಪುತ್ತೂರಿನ ಜನ 66,345 ಮತಗಳನ್ನು ಧಾರೆ ಎರೆದ್ರು. ಈ ಮೂಲಕ ಬಿಜೆಪಿ ವಿರುದ್ಧ ಟಿಕೆಟ್ ಕೈತಪ್ಪಿದ ಸೇಡು ತೀರಿಸಿಕೊಂಡು ಹೆಣ್ಣು ಮುನಿದರೆ ಮಾರಿ ಅನ್ನೋದನ್ನ ತೋರಿಸಿದ್ರು. ಈ ಬಾರಿಯೂ ಬಿಜೆಪಿಯಿಂದ ಸಂಜೀವ ಮಠಂದೂರು ಕಣಕ್ಕಿಳಿಯೋ ಹುರಿಯಾಳು.