ಜೈಪುರ: ಪಾಕಿಸ್ತಾನದಿಂದ ವಲಸೆ ಬಂದು ಸುಮಾರು 19 ವರ್ಷದಿಂದ ಭಾರತದಲ್ಲಿ ವಾಸಿಸುತ್ತಿದ್ದ 21 ಮಂದಿಗೆ ರಾಜಸ್ಥಾನ ಸರ್ಕಾರ ಬುಧವಾರ ಭಾರತೀಯ ಪೌರತ್ವ ನೀಡಿದೆ.
ಈ ಜನರು ಪಾಕಿಸ್ತಾನದಿಂದ ಸ್ಥಳಾಂತರಗೊಂಡ ನಂತರ ಇಲ್ಲಿ ಹಲವಾರು ವರ್ಷದಿಂದ ವಾಸಿಸುತ್ತಿದ್ದಾರೆ. ಆದರೆ ಅವರಿಗೆ ಭಾರತೀಯ ಪೌರತ್ವವಿಲ್ಲದ ಕಾರಣ, ಸರ್ಕಾರಿ ಉದ್ಯೋಗಗಳನ್ನು ಪಡೆಯುವಲ್ಲಿ ಮತ್ತು ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಜೈಪುರದ ಜಿಲ್ಲಾಧಿಕಾರಿ ಜಗ್ರೂಪ್ ಸಿಂಗ್ ಯಾದವ್ ಹೇಳಿದ್ದಾರೆ.
Advertisement
Advertisement
ಕಳೆದ ಎರಡು ತಿಂಗಳಲ್ಲಿ 35 ಪಾಕ್ ವಲಸಿಗರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಇನ್ನೂ 28 ಪೌರತ್ವದ ಅರ್ಜಿಗಳು ಪರಿಶೀಲನೆ ನಡೆಯುತ್ತಿದೆ. 68 ಪೌರತ್ವದ ಅರ್ಜಿಗಳು ತನಿಖಾ ಹಂತದಲ್ಲಿ ಇದೆ. ಅವರಿಗೂ ಪೌರತ್ವ ನೀಡಲಾಗುವುದು. ಪಾಕ್ ವಲಸಿಗರ ಎಲ್ಲಾ ಪೌರತ್ವದ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ ಆನ್‍ಲೈನ್ ಪ್ರಕ್ರಿಯೆ ಮೂಲಕ ಅವರಿಗೆ ಪೌರತ್ವದ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಸಿಂಗ್ ಹೇಳಿದ್ದಾರೆ.
Advertisement
ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ್ ರಾಯ್ ಲೋಕಸಭೆಗೆ ನೀಡಿರುವ ಮಾಹಿತಿ ಪ್ರಕಾರ, ಜುಲೈ ತಿಂಗಳಿನಲ್ಲಿ ಒಟ್ಟು 1,310 ವಲಸಿಗರಿಗೆ ರಾಜಸ್ಥಾನ ಸರ್ಕಾರ ಪೌರತ್ವವನ್ನು ನೀಡಿದೆ. ಜೋಧಪುರ್, ಜೈಸಲ್ಮೇರ್ ಮತ್ತು ಜೈಪುರ ಜಿಲ್ಲಾಧಿಕಾರಿಗಳಿಗೆ ಪೌರತ್ವ ಪತ್ರವನ್ನು ನೀಡುವ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.
Advertisement
ಅಲ್ಲದೇ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಹಿಂದೂಗಳು, ಸಿಖ್ಖ, ಬೌದ್ಧರು, ಜೈನರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸೇರಿದಂತೆ ಆರು ಅಲ್ಪಸಂಖ್ಯಾತ ಸಮುದಾಯದ ವಲಸಿಗರಿಗೆ ಸೂಕ್ತ ತನಿಖೆ ನಂತರ ಭಾರತೀಯ ಪೌರತ್ವ ನೀಡಲು ರಾಜಸ್ಥಾನದ ಜೋಧ್ ಪುರ, ಜೈಸಲ್ಮೇರ್ ಮತ್ತು ಜೈಪುರದ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕೇಂದ್ರ ಸರ್ಕಾರ ಅಧಿಕಾರ ನೀಡಿದೆ.