– ಅಕ್ರಮ ಬಯಲು; ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ದೂರು
ಬೆಂಗಳೂರು: ವೈದ್ಯಕೀಯ ಸೀಟಿಗಾಗಿ ನಕಲಿ ದಾಖಲೆ ನೀಡಿ ವಿಕಲಚೇತನ ಕೋಟಾದಡಿ ಅರ್ಜಿ ಹಾಕಿದ್ದ 21 ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದೂರು ನೀಡಿದೆ.
ಮೆಡಿಕಲ್ ಸೀಟ್ ಪಡೆಯೋದಕ್ಕೆ ಅನ್ಯಮಾರ್ಗ ಹಿಡಿದಿದ್ದ 21 ಮಂದಿ ಅಭ್ಯರ್ಥಿಗಳು ಲಾಕ್ ಆಗಿದ್ದಾರೆ. 2025 ನೇ ಸಾಲಿನ ಯುಜಿಸಿಇಟಿ ಮತ್ತು ಯುಜಿ ನೀಟ್ ಸೀಟು ಕೋರಿ 21 ಅಭ್ಯರ್ಥಿಗಳು ವಿಕಲಚೇತನ ಕೋಟಾದಡಿ ಅರ್ಜಿ ಹಾಕಿದ್ದರು. ಆರಂಭದಲ್ಲಿ ಅರ್ಜಿ ಹಾಕದೆ, ಅರ್ಜಿ ತಿದ್ದುಪಡಿ ಮೂಲಕ ಪಿಹೆಚ್ ಮೀಸಲಾತಿ ಕೋರಿದ್ದಾರೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅನುಮಾನ ಬಂದಿದೆ. ಕಿವಿ ಕೇಳಿಸಲ್ಲ ಎಂದು ಅರ್ಜಿ ಹಾಕಿದ್ದ 21 ಮಂದಿಯನ್ನ ನಿಯಾಮವಳಿಗಳ ಪ್ರಕಾರ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇಲ್ಲಿಂದ ಆಡಿಯೋ ಗ್ರಾಂ ಮತ್ತು ಅಂಗವಿಕಲತೆಯ ಪರೀಕ್ಷೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಅಕ್ರಮ ಸಾಬೀತಾಗಿದ್ದು, ನಕಲಿ ಅಂಗವಿಕಲ ಪ್ರಮಾಣ ಪತ್ರವನ್ನು ಸಲ್ಲಿಸಿರುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಗಮನಕ್ಕೆ ಬಂದಿದೆ. ಕೂಡಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಅಭ್ಯರ್ಥಿಗಳು ಮೆಡಿಕಲ್ ಬೋರ್ಡ್ ಚೇರ್ಮನ್ ನಕಲಿ ಸಹಿ, ಸೀಲ್ ಬಳಸಿ ನಕಲಿ ಅಂಗವಿಕಲ ವೈದ್ಯಕೀಯ ಪ್ರಮಾಣ ಪತ್ರವನ್ನ ಸಲ್ಲಿಸಿದ್ದರು. ಇದರ ಜೊತೆಗೆ UD ಐಡಿ ಕಾರ್ಡ್ ನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಿಂದ ಪ್ರಮಾಣ ಪತ್ರವನ್ನ ಪಡೆದಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳನ್ನ ತಂದು ಹಾಜರುಪಡಿಸುವಂತೆ ನೋಟಿಸ್ ನೀಡಲಾಗಿತ್ತು. ಈ ವೇಳೆಯೂ ಅಕ್ರಮ ಪತ್ತೆಯಾಗಿದೆ. ನಿಮ್ಹಾನ್ಸ್ ಆಸ್ಪತ್ರೆಯಿಂದ ಮೆಡಿಕಲ್ ಸರ್ಟಿಫಿಕೇಟ್ ಕೊಟ್ಟಿದ್ದಾರೆಂದು ನೀಡಿದ ಸರ್ಟಿಫಿಕೇಟ್ ಕೂಡ ನಕಲಿ ಅನ್ನೋದು ಬೆಳಕಿಗೆ ಬಂದಿದೆ.
21 ಜನರನ್ನೊಳಗೊಂಡು ಇನ್ನೂ ಐವರನ್ನ ಈ ಪಟ್ಟಿಗೆ ಸೇರಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಮಲ್ಲೇಶ್ವರಂ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.