ರಾಯ್ಪುರ್: 110 ಮಹಿಳೆಯರು ಮತ್ತು 98 ಪುರುಷರು ಸೇರಿದಂತೆ 208 ನಕ್ಸಲರು ಛತ್ತೀಸ್‌ಗಢದ (Chhattisgarh) ದಂಡಕಾರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳ ಮುಂದೆ (Naxals Surrender) ಶರಣಾಗಿದ್ದಾರೆ. ಶರಣಾದ ನಕ್ಸಲರಿಗೆ ಸಂವಿಧಾನದ ಪ್ರತಿ ಮತ್ತು ಗುಲಾಬಿಯನ್ನು ನೀಡಿ ಮುಖ್ಯವಾಹಿನಿಗೆ ಸ್ವಾಗತಿಸಲಾಯಿತು.
ಶರಣಾದ ನಕ್ಸಲರು ಸರ್ಕಾರದ ಪುನರ್ವಸತಿ ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಮಹತ್ವದ ಬೆಳವಣಿಗೆಯೊಂದಿಗೆ ಅಬುಜ್ಮದ್‌ನ ಹೆಚ್ಚಿನ ಭಾಗ ನಕ್ಸಲರ ಪ್ರಭಾವದಿಂದ ಮುಕ್ತವಾಗಲಿದೆ. ಭಾರೀ ಸಂಖ್ಯೆಯ ನಕ್ಸಲರು ಶರಣಾಗಿರುವುದರಿಂದ ಉತ್ತರ ಬಸ್ತಾರ್‌ನಲ್ಲಿ ಕೆಂಪು ಭಯೋತ್ಪಾದನೆ ಕೊನೆಗೊಂಡಿದೆ. ಇದನ್ನೂ ಓದಿ: ಕೊಲೆ, ಸುಲಿಗೆ ಸೇರಿ 18 ಪ್ರಕರಣದಲ್ಲಿ ಬೇಕಾಗಿದ್ದ ಬಿಹಾರದ ಶಂಕಿತ ನಕ್ಸಲ್ ರಾಯಚೂರಲ್ಲಿ ಅರೆಸ್ಟ್
ಶರಣಾಗತಿಯ ಸಮಯದಲ್ಲಿ ಒಟ್ಟು 153 ಶಸ್ತ್ರಾಸ್ತ್ರಗಳನ್ನು ನಕ್ಸಲರು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಶಸ್ತ್ರಾಸ್ತ್ರಗಳಲ್ಲಿ 19 AK-47 ರೈಫಲ್‌ಗಳು, 17 SLR ರೈಫಲ್‌ಗಳು, 23 INSAS ರೈಫಲ್‌ಗಳು, 1 INSAS LMG, 36.303 ರೈಫಲ್‌ಗಳು, 4 ಕಾರ್ಬೈನ್‌ಗಳು, 11 BGL ಲಾಂಚರ್‌ಗಳು, 41 12-ಬೋರ್/ಸಿಂಗಲ್-ಶಾಟ್ ಗನ್‌ಗಳು ಮತ್ತು 1 ಪಿಸ್ತೂಲ್ ಸೇರಿವೆ.
ಶರಣಾದ 208 ನಕ್ಸಲರಲ್ಲಿ ಒಬ್ಬ ಕೇಂದ್ರ ಸಮಿತಿ ಸದಸ್ಯರು (CCM), ನಾಲ್ವರು ದಂಡಕಾರಣ್ಯ ವಿಶೇಷ ಪ್ರಾದೇಶಿಕ ಸಮಿತಿ (DKSZC) ಸದಸ್ಯರು, ಒಬ್ಬ ಪ್ರಾದೇಶಿಕ ಸಮಿತಿ ಸದಸ್ಯರು, 21 ವಿಭಾಗೀಯ ಸಮಿತಿ ಸದಸ್ಯರು (DVCM), 61 ಪ್ರದೇಶ ಸಮಿತಿ ಸದಸ್ಯರು (ACM), 98 ಪಕ್ಷದ ಸದಸ್ಯರು ಮತ್ತು 22 PLGA/RPC/ಇತರ ಕಾರ್ಯಕರ್ತರು ಸೇರಿದ್ದಾರೆ.
ಈ ಶರಣಾಗತಿಯೊಂದಿಗೆ, ಉತ್ತರ ಬಸ್ತಾರ್‌ನಲ್ಲಿ ನಕ್ಸಲೀಯರ ಚಟುವಟಿಕೆ ಬಹುತೇಕ ಕೊನೆಗೊಂಡಿದೆ ಎಂದು ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಹೇಳಿವೆ. ಮುಂದಿನ ಹಂತದ ಕಾರ್ಯಾಚರಣೆ ದಕ್ಷಿಣ ಬಸ್ತಾರ್‌ನ ಗುರಿಯಾಗಿಸಿಕೊಂಡು ನಡೆಯಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ಇಡೀ ದೇಶಕ್ಕೆ ಇಂದು ಐತಿಹಾಸಿಕ ದಿನ. ಸಂವಿಧಾನವನ್ನು ನಂಬುವ ಹೆಚ್ಚಿನ ಸಂಖ್ಯೆಯ ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಸೇರಲಿದ್ದಾರೆ. ಅವರಿಗೆ ಸ್ವಾಗತ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಾರ್ಖಂಡ್| ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹ್ರಾ ಸೇರಿ ಇಬ್ಬರು ನಕ್ಸಲ್ ನಾಯಕರ ಎನ್‌ಕೌಂಟರ್