– ಬಳಿಕ ಸಿಎಂ ಆಯ್ಕೆ ಬಗ್ಗೆ ಚರ್ಚೆ
ವಿಜಯಪುರ: 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆಗ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗುತ್ತೆ. ನಮ್ಮ ಪಕ್ಷ 113ಕ್ಕೂ ಹೆಚ್ಚು ಸ್ಥಾನ ಬಂದಾಗ, ಯಾವ ನಾಯಕ ಇರುತ್ತಾರೆ ಅವರು ಸಿಎಂ ಆಗುತ್ತಾರೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನಡೆಯುವುದಕ್ಕೂ ಮೊದಲೇ ಅವರು ಮುಖ್ಯಮಂತ್ರಿ, ಇವರು ಮುಂದಿನ ಸಿಎಂ ಎಂದು ಹೇಳಿಕೆ ಕೊಡುವುದು ತಪ್ಪು. ಸಿದ್ದರಾಮಯ್ಯ ಕೂಡ ಹೀಗೆ ಹೇಳಬೇಡಿ ಎಂದಿದ್ದಾರೆ. ಇನ್ನು ಮುಂದೆ ಯಾರು ಸಿಎಂ, ಇವರೇ ಎನ್ನುವ ಹೇಳಿಕೆಯನ್ನು ಯಾರೂ ನೀಡುವುದಿಲ್ಲ ಎಂದರು.
ಪಕ್ಷದ ಶಿಸ್ತು, ಕಾಂಗ್ರೆಸ್ ಸಿದ್ಧಾಂತ, ಆದರ್ಶ ಅರ್ಥ ಮಾಡಿಕೊಂಡವರು ಹೀಗೆ ಹೇಳಲ್ಲ. ಈಗ ಸಿಎಂ ವಿಚಾರ ತೆಗೆಯೋದು ಸರಿಯಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಬೆಂಬಲಿಗರಿಗೆ ಟಾಂಗ್ ನೀಡಿದರು.
ರಾಜ್ಯ ಸರ್ಕಾರಕ್ಕೆ ಆಪರೇಶನ್ ಕಮಲದ ಪಾಪ ತಟ್ಟಿದೆ. ಬಿಜೆಪಿಯವರು 17 ಜನರಿಗೆ ರಾಜೀನಾಮೆ ಕೊಡಿಸಿ ಏನು ಸುಖ ಉಂಡರು? ಪ್ರವಾಹದಿಂದ ರಾಜ್ಯ ತತ್ತರಿಸಿದೆ, ಕೋವಿಡ್ ನಿಂದ ನಲುಗಿದೆ. ಇವರಿಗೆ ಆಪರೇಶನ್ ಕಮಲದ ಪಾಪ ತಟ್ಟಿದೆ, ಸುಖದಿಂದ ಇದ್ದಾರಾ ಎಂದು ಪ್ರಶ್ನಿಸಿದರು.
ಶಾಸಕ ಸ್ಥಾನಕ್ಕೆ, ಪಕ್ಷಕ್ಕೆ ರಾಜೀನಾಮೆ ಕೊಡಿಸಿದ್ದರು. ಇಂಥದ್ದನ್ನು ಹಿಂದೆಂದೂ ಕಂಡಿಲ್ಲ, ಇದರ ಪಾಪ ತಟ್ಟಿದೆ. ರಾಜ್ಯದ ಜನತೆ ನೋವಿನಲ್ಲಿದ್ದಾರೆ, ಎರಡು ಬಾರಿ ಪ್ರವಾಹ ಬಂತು, ಪರಿಹಾರ ಕೊಡಿಸೋಕೆ ಆಗಿಲ್ಲ ಎಂದು ಕಿಡಿ ಕಾರಿದರು.
ರಮೇಶ್ ಜಾರಕಿಹೊಳಿಯವರನ್ನು ಪಕ್ಷಕ್ಕೆ ಆಹ್ವಾನಿಸುವ ಪ್ರಶ್ನೆಯೇ ಇಲ್ಲ. ಅವರು ರಾಜೀನಾಮೆ ನೀಡಿ, ನಮ್ಮ ಪಕ್ಷಕ್ಕೆ ಅರ್ಜಿ ಹಾಕಲಿ. ಆಗ ನಮ್ಮ ವರಿಷ್ಠರು ತಿರ್ಮಾನಿಸುತ್ತಾರೆ. ಅವರು ಪಕ್ಷಕ್ಕೆ ಬರ್ತೀನಿ ಎಂದಿಲ್ಲ. ಶಾಸಕ ಸ್ಥಾನಕ್ಕೆ ಅರ್ಜಿ ಹಾಕಿಲ್ಲ, ಈಗ ಮಾತನಾಡೋದು ಸರಿ ಅಲ್ಲ ಎಂದರು.