2021ರ ಆರಂಭದಲ್ಲಿ ಕೊರೊನಾ ಲಸಿಕೆ- ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್

Public TV
3 Min Read
harsh vardhan

ನವದೆಹಲಿ: ಕೊರೊನಾ ವೈರಸ್ ಪ್ರಪಂಚವನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದು, ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಿದೆ. ಅಲ್ಲದೇ ಇಡೀ ಪ್ರಪಂಚವೇ ಕೊರೊನಾಗೆ ನಲುಗಿ ಹೋಗಿದೆ. ದೇಶದಲ್ಲಿ ಸಹ ಪ್ರತಿ ದಿನ ಸರಾಸರಿ 90 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಅದೇ ರೀತಿ ಡೆಡ್ಲಿ ವೈರಸ್‍ನಿಂದ ಸಾವಿನ ಸಂಖ್ಯೆ ಸಹ ಹೆಚ್ಚಳವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಲಸಿಕೆ ಕುರಿತು ಸಂಶೋಧನೆ ತೀವ್ರಗೊಂಡಿದ್ದು, ಬಹುತೇಕ ರಾಷ್ಟ್ರಗಳು ಇದರಲ್ಲಿ ಮಗ್ನವಾಗಿವೆ. ಇದೇ ವೇಳೆ ಭಾರತದಲ್ಲಿ ಲಸಿಕೆ ಬಿಡುಗಡೆ ಕುರಿತು ಕೇಂದ್ರ ಸರ್ಕಾರ ಮಹತ್ವದ ಸುಳಿವು ನೀಡಿದೆ.

coronavirus covid19 vaccine l

ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 50 ಲಕ್ಷ ಗಡಿಯತ್ತ ಧಾವಿಸುತ್ತಿದ್ದು, ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 80 ಸಾವಿರದ ಗಡಿಯತ್ತ ಲಗ್ಗೆ ಇಟ್ಟಿದೆ. ಹೀಗಾಗಿ ದೇಶದ ಜನತೆ ಲಸಿಕೆಯತ್ತ ಎದುರು ನೋಡುತ್ತಿದ್ದು, ಇನ್ನೂ ಯಾವಾಗ ಲಸಿಕೆ ಸಿಗಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಮ್ಮ ಸಾಮಾಜಿಕ ಜಾಲತಾಣದ ‘ಸಂಡೇ ಸಂವಾದ’ದಲ್ಲಿ ಮಹತ್ವದ ಹೇಳಿಕೆ ನೀಡಿದ್ದು, 2021ಕ್ಕೂ ಮುಂಚೆ ಲಸಿಕೆ ಬಳಕೆಗೆ ಸಿಗುವುದಿಲ್ಲ. ಲಸಿಕೆ ಬಿಡುಗಡೆ ಕುರಿತು ಈ ವರೆಗೆ ದಿನಾಂಕವನ್ನು ನಿಗದಿಪಡಿಸಿಲ್ಲ. 2021ರ ಮೊದಲ ತ್ರೈಮಾಸಿಕದ ವೇಳೆ ಸಿದ್ಧವಾಗಬಹುದು ಎಂದು ತಿಳಿಸಿದ್ದಾರೆ.

CORONA VIRUS 2

ಅಲ್ಲದೆ ಒಂದು ವೇಳೆ ಲಸಿಕೆ ಬಿಡುಗಡೆಯಾದರೆ ಮೊದಲು ಯಾರಿಗೆ ನೀಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯ ನಾಗರಿಕರು ಹಾಗೂ ಹೆಚ್ಚು ಅಪಾಯದಲ್ಲಿರುವವರಿಗೆ ಆದ್ಯತೆ ಮೇರೆಗೆ ಕೊರೊನಾ ಲಸಿಕೆ ನೀಡುವ ತುರ್ತು ಅಧಿಕಾರವನ್ನು ಕೇಂದ್ರ ಸರ್ಕಾರ ಪರಿಗಣಿಸಲಿದೆ. ಒಮ್ಮತದ ನಿರ್ಧಾರದ ಬಳಿಕ ಈ ಕೆಲಸ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

coronavirus

ಲಸಿಕೆಯ ಸುರಕ್ಷತೆ, ಬೆಲೆ, ಇಕ್ವಿಟಿ, ಕೋಲ್ಡ್ ಚೈನ್ ಅವಶ್ಯಕತೆಗಳು ಉತ್ಪಾದನಾ ಸಮಯ ಸೇರಿದಂತೆ ಹಲವು ವಿಚಾರಗಳ ಕುರಿತು ಸಹ ತೀವ್ರವಾಗಿ ಚರ್ಚಿಸಲಾಗಿದೆ. ಸರಬರಾಜಿನ ಕುರಿತು ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ವಿವರವಾದ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಸಾಧ್ಯವಾದಷ್ಟು ಜನರನ್ನು ರೋಗನಿರೋಧಕ ಮಾಡುವುದು ಹೇಗೆ ಎಂಬ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಮಾನವರ ಮೇಲೆ ಲಸಿಕೆ ಪ್ರಯೋಗ ನಡೆಸುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಸಹ ಕೈಗೊಳ್ಳಲಾಗುತ್ತಿದೆ ಎಂದು ಇದೇ ವೇಳೆ ಅವರು ವಿವರಿಸಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ 94,372 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಒಂದೇ ದಿನದಲ್ಲಿ 94,372 ಮಂದಿಗೆ ಸೋಂಕು ದೃಢವಾಗುವ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 47,54,357ಕ್ಕೆ ಏರಿಕೆ ಆಗಿದೆ. ಅಲ್ಲದೇ 24 ಗಂಟೆಯಲ್ಲಿ 1,114 ಮಂದಿ ಕೊರೊನಾದಿಂದ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

CORONA 1 2

ಒಟ್ಟು 47,54,357 ಪೈಕಿ 9,73,175 ಸಕ್ರಿಯ ಪ್ರಕರಣಗಳಿದ್ದು, 37,02,596 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಒಂದೇ ದಿನ ಕೊರೊನಾದಿಂದ 1,114 ಮಂದಿ ಮೃತಪಟ್ಟಿದ್ದು, ಇದುವರೆಗೆ ದೇಶದಲ್ಲಿ 78,586 ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ. ದೇಶದಲ್ಲಿ ಶನಿವಾರ 10,71,702 ಮಂದಿಯನ್ನು ಕೊರೊನಾ ಟೆಸ್ಟ್‍ಗೆ ಒಳಪಡಿಸಲಾಗಿತ್ತು. ಈ ಮೂಲಕ ಇದುವರೆಗೂ 5,62,60,928 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

CORONA VIRUS 1 2

ದೇಶದಲ್ಲಿ ಚೇತರಿಕೆ ಪ್ರಮಾಣ ಶೇಕಡಾ 77.77 ದಾಟಿದೆ. ಶನಿವಾರ ಮಹಾರಾಷ್ಟ್ರದಲ್ಲಿ ಬರೋಬ್ಬರಿ 24,886 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದೆ.

Share This Article
Leave a Comment

Leave a Reply

Your email address will not be published. Required fields are marked *