9 ವರ್ಷದ ರಾಜಸ್ಥಾನ್ ನಂಟು ಮುರಿದು ದೆಹಲಿ ಪರ ಬ್ಯಾಟ್ ಬೀಸಲಿದ್ದಾರೆ ರಹಾನೆ

Public TV
2 Min Read
Rahane

ಮುಂಬೈ: ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಮುಂದಿನ ಇಂಡಿಯನ್ ಪ್ರಿಮಿಯರ್ ಲೀಗ್ ಆವೃತ್ತಿಯಲ್ಲಿ ದೆಹಲಿ ಪರ ಆಡಲಿದ್ದಾರೆ. ಈ ಮೂಲಕ ಐಪಿಎಲ್‍ನಲ್ಲಿ ಒಂಬತ್ತು ವರ್ಷಗಳಿಂದ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ರಹಾನೆ ತಂಡದಿಂದ ಹೊರಬಿದ್ದಿದ್ದಾರೆ.

ಐಪಿಎಲ್ ಉಭಯ ತಂಡಗಳ ನಡುವಿನ ವರ್ಗಾವಣೆ ಪ್ರಕ್ರಿಯೆ ಇಂದು ಪೂರ್ಣಗೊಳ್ಳಲಿದೆ. ಈ ಮೂಲಕ ರಹಾನೆಯನ್ನು ಕೈಬಿಟ್ಟಿರುವ ರಾಜಸ್ಥಾನ ತಂಡವು ದೆಹಲಿ ಕ್ಯಾಪಿಟಲ್ಸ್ ತಂಡದ ಇಬ್ಬರು ಆಟಗಾರರನ್ನು ಪಡೆಯಲಿದೆ. ಇದಲ್ಲದೆ ಮುಂದಿನ ಆವೃತ್ತಿಯಲ್ಲಿ ವರ್ಗಾವಣೆ ಒಪ್ಪಂದಗಳ ನಂತರ, ಟ್ರೆಂಟ್ ಬೋಲ್ಟ್ ಈಗ ಮುಂಬೈ ಇಂಡಿಯನ್ಸ್ ಮತ್ತು ಅಂಕಿತ್ ರಜಪೂತ್ ರಾಜಸ್ಥಾನದಲ್ಲಿ ಆಡಲಿದ್ದಾರೆ. ವರ್ಗಾವಣೆ ಪ್ರಕ್ರಿಯೆ ಗುರುವಾರ ಮುಕ್ತಾಯವಾದ ನಂತರ, ಯಾವುದೇ ಆಟಗಾರರನ್ನು ಫ್ರಾಂಚೈಸಿಗಳ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.

Rahane A

ಅಜಿಂಕ್ಯ ರಹಾನೆ 2011ರಿಂದ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ್ದರು. ಕಳೆದ ಆವೃತ್ತಿಯಲ್ಲಿ ಅವರನ್ನು 4 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ರಹಾನೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ತಂಡವು ಅವರನ್ನು ಕೈಬಿಟ್ಟಿದೆ ಎಂದು ವರದಿಯಾಗಿದೆ.

ರಹಾನೆಯನ್ನು ತಂಡಕ್ಕೆ ಸೇರಿಸಿಕೊಳ್ಳಲು ದೆಹಲಿ ಕ್ಯಾಪಿಟಲ್ಸ್ ರಾಜಸ್ಥಾನ್ ತಂಡದೊಂದಿಗೆ ಮಾತುಕತೆ ನಡೆಸಿತ್ತು. ಸೌರವ್ ಗಂಗೂಲಿ ದೆಹಲಿ ಸಲಹೆಗಾರರಾಗಿದ್ದಾಗ ರಹಾನೆ ಅವರನ್ನು ತಂಡಕ್ಕೆ ಸೇರಿಸುವ ಬಗ್ಗೆ ಸಲಹೆ ನೀಡಿದ್ದರು. ರಹಾನೆ ಎಲ್ಲಾ ಮಾದರಿಯ ಆಟಗಾರ ಎಂದು ಗಂಗೂಲಿ ಭಾವಿಸಿದ್ದಾರೆ. ವರದಿಗಳ ಪ್ರಕಾರ, ರಹಾನೆ ಕೂಡ ತಂಡವನ್ನು ಬದಲಾಯಿಸಲು ಬಯಸಿದ್ದರು. ಐಪಿಎಲ್‍ನ 2019ರ ಆವೃತ್ತಿಯಲ್ಲಿ ಎಂಟು ಪಂದ್ಯಗಳ ನಂತರ ರಹಾನೆ ನಾಯಕತ್ವವನ್ನು ಹಿಂಪಡೆದು ಸ್ಟೀವ್ ಸ್ಮಿತ್‍ಗೆ ಹಸ್ತಾಂತರಿಸಲಾಗಿತ್ತು. ಈ ನಡೆಯ ಬಗ್ಗೆ ರಹಾನೆ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

delhi capitals A

ರಹಾನೆ ಆಗಮನದಿಂದ ದೆಹಲಿ ತಂಡದ ಬ್ಯಾಟಿಂಗ್ ಕ್ರಮಾಂಕ ಇನ್ನಷ್ಟು ಬಲಗೊಳ್ಳಲಿದೆ. ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ಹನುಮಾ ವಿಹಾರಿ ಅವರಂತಹ ಆಟಗಾರರಿಗೆ ರಹಾನೆ ಸಾಥ್ ನೀಡಲಿದ್ದಾರೆ. ದೆಹಲಿ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ವೈಯಕ್ತಿಕ ತರಬೇತುದಾರ ಪ್ರವೀಣ್ ಅಮ್ರೆ ಅವರೊಂದಿಗೆ ರಹಾನೆ ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಐಪಿಎಲ್‍ನಲ್ಲಿ ರಹಾನೆ ದಾಖಲೆ ಅಂತರಾಷ್ಟ್ರೀಯ ಟಿ-20 ವೃತ್ತಿಜೀವನಕ್ಕಿಂತ ಉತ್ತಮವಾಗಿದೆ. ಐಪಿಎಲ್‍ನ 140 ಪಂದ್ಯಗಳಲ್ಲಿ ರಹಾನೆ ಸುಮಾರು 33 ಸರಾಸರಿಯಲ್ಲಿ 3,820 ರನ್ ಗಳಿಸಿದ್ದಾರೆ. ಅಂತರಾಷ್ಟ್ರೀಯ ಟಿ-20ಯ 20 ಪಂದ್ಯಗಳಲ್ಲಿ 21 ಸರಾಸರಿಯಲ್ಲಿ 375 ರನ್ ಗಳಿಸಿದ್ದಾರೆ.

rahane

2020ರ ಐಪಿಎಲ್‍ನಲ್ಲಿ ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ದೆಹಲಿ ಕ್ಯಾಪಿಟಲ್ಸ್ ಬದಲಿಗೆ ಮುಂಬೈ ಇಂಡಿಯನ್ಸ್ ಪರ ಆಡಲಿದ್ದು, ದೇಶೀಯ ವೇಗದ ಬೌಲರ್ ಅಂಕಿತ್ ರಜಪೂತ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬದಲು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡಲಿದ್ದಾರೆ. ಬೋಲ್ಟ್ 2014ರಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದರು. ಅವರು ಕಳೆದ ಎರಡು ಆವೃತ್ತಿಗಳಲ್ಲಿ ದೆಹಲಿ ತಂಡದ ಪರ ಆಡಿದ್ದರು. ಒಟ್ಟು 33 ಪಂದ್ಯಗಳನ್ನು ಆಡಿರುವ ಬೋಲ್ಟ್ ಒಟ್ಟು 38 ವಿಕೆಟ್ ಪಡೆದಿದ್ದಾರೆ. ಪಂಜಾಬ್ ತಂಡವನ್ನು 2018ರಲ್ಲಿ ಸೇರಿಕೊಂಡಿದ್ದ ಅಂಕಿತ್ 23 ಐಪಿಎಲ್ ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ. ಅಂಕಿತ್ 2018ರಲ್ಲಿ ಹೈದರಾಬಾದ್ ತಂಡದ ವಿರುದ್ಧ ಪಂದ್ಯದಲ್ಲಿ ಕೇವಲ 14 ರನ್ ನೀಡಿ, 5 ವಿಕೆಟ್ ಉಳಿಸಿ ಭರ್ಜರಿ ಮಿಂಚಿದ್ದರು.

Share This Article
Leave a Comment

Leave a Reply

Your email address will not be published. Required fields are marked *