ಬೆಂಗಳೂರು: 2020-21 ನೇ ಸಾಲಿನ ಶೈಕ್ಷಣಿಕ ಅವಧಿ ಮತ್ತು ರಜೆ ದಿನಗಳ ವೇಳಾಪಟ್ಟಿಯನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಶಾಲೆಗಳಿಗೆ ಮಾಹಿತಿ ನೀಡಲು ಶಾಲಾ ಅವಧಿ ಮತ್ತು ರಜೆ ಅವಧಿಯನ್ನು ಪ್ರಕಟ ಮಾಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಜಗದೀಶ್ ನೂತನ ಶಾಲಾ ವೇಳಾಪಟ್ಟಿ ಆದೇಶ ಹೊರಡಿಸಿದ್ದಾರೆ.
ಮೇ 29 ರಿಂದ 2020- 21 ನೇ ಸಾಲಿನ ಶಾಲೆಗಳ ಶೈಕ್ಷಣಿಕ ಚಟುವಟಿಕೆ ಆರಂಭವಾಗಲಿವೆ. ಶಾಲೆಗಳ ಮೊದಲ ಅವಧಿ ಮೇ 29 ರಿಂದ ಅಕ್ಟೋಬರ್ 2 ವರೆಗೆ ನಡೆಯಲಿದೆ. ಶಾಲೆಗಳ ಎರಡನೇ ಅವಧಿ ಅಕ್ಟೋಬರ್ 26 ರಿಂದ ಏಪ್ರಿಲ್ 14,2021 ಕ್ಕೆ ಮುಕ್ತಾಯವಾಗಲಿದೆ. ದಸರಾ ರಜೆ ಅಕ್ಟೋಬರ್ 3 ರಿಂದ 25 ವರೆಗೆ ನೀಡಲಾಗುತ್ತದೆ. ಬೇಸಿಗೆ ರಜೆಯನ್ನ 2021 ಏಪ್ರಿಲ್ 15 ರಿಂದ 2021 ಮೇ 29 ವರೆಗೆ ನೀಡಲು ಇಲಾಖೆ ಸೂಚನೆ ನೀಡಲಾಗಿದೆ. ಈ ವರ್ಷ ಒಟ್ಟಾರೆ 240 ದಿನ ಶಾಲೆಗಳು ನಡೆಯಲಿದ್ದು, 77 ದಿನ ರಜೆ ಘೋಷಣೆ ಮಾಡಲಾಗಿದೆ. ಇನ್ನು ಕ್ರಿಸ್ ಮಸ್ ರಜೆಯನ್ನು ಡಿಸೆಂಬರ್ ತಿಂಗಳಲ್ಲಿ ನೀಡಲು ಜಿಲ್ಲಾ ಉಪ ನಿರ್ದೇಶಕರಿಗೆ ಅಧಿಕಾರ ನೀಡಲಾಗಿದೆ.
ಏಪ್ರಿಲ್ 14 ರಂದು ನಡೆಯುವ ಅಂಬೇಡ್ಕರ್ ಜಯಂತಿಯನ್ನ ಬೇಸಿಗೆ ರಜೆ ಇದ್ದರು ಕಡ್ಡಾಯವಾಗಿ ಶಾಲೆಯಲ್ಲಿ ಆಚರಣೆ ಮಾಡಲು ಇಲಾಖೆ ಸೂಚನೆ ನೀಡಲಾಗಿದೆ. ಇದಲ್ಲದೆ ರಾಷ್ಟ್ರೀಯ ಹಬ್ಬಗಳನ್ನು ಕಡ್ಡಾಯವಾಗಿ ಅದೇ ದಿನದಂದೂ ರಜೆ ಇದ್ದರು ಆಚರಣೆ ಮಾಡಲು ಸೂಚನೆ ನೀಡಲಾಗಿದೆ. ಮುಷ್ಕರ ಇನ್ನಿತರ ಸಮಸ್ಯೆಯಿಂದ ಬೋಧನಾ ಅವಧಿ ಕಡಿಮೆ ಆದರೆ ಅದನ್ನ ಮುಂದಿನ ರಜೆ ದಿನಗಳಲ್ಲಿ ಪೂರ್ತಿ ದಿನ ಶಾಲೆ ನಡೆಸಿ ಸರಿದೂಗಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.