– ಸಿಎಂ ಪುತ್ರನ ವಿರುದ್ಧ ಗೆದ್ದು ಬೀಗಿದ್ದ ಸುಮಲತಾ
– ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡಗೆ ಸೋಲು
– ಪಬ್ಲಿಕ್ ಟಿವಿ
2019 ಮೋದಿ (Narendra Modi) ನೇತೃತ್ವದ ಸರ್ಕಾರಕ್ಕೆ ಅತ್ಯಂತ ಮಹತ್ವದ ವರ್ಷವಾಗಿತ್ತು. ದೇಶದಲ್ಲಿ ಮೋದಿ ಅಲೆ ಹೇಗಿತ್ತು ಎಂಬುದು 17ನೇ ಸಾರ್ವತ್ರಿಕ ಚುನಾವಣಾ ಫಲಿತಾಂಶದಿಂದ ತಿಳಿಯಿತು. ಚುನಾವಣೆಗೂ ಮೊದಲು ಮೋದಿ ನೇತೃತ್ವದ ಐದು ವರ್ಷಗಳ ಆಡಳಿತದ ಬಗ್ಗೆ ಹಲವಾರು ಟೀಕೆಗಳೂ ಕೇಳಿಬಂದಿದ್ದವು. ನೋಟು ರದ್ದತಿ, ತನಿಖಾ ಸಂಸ್ಥೆಗಳ ದುರ್ಬಳಕೆ, ಸರ್ವಾಧಿಕಾರ ಆಡಳಿತ ಆರೋಪಗಳು ಕೇಳಿಬಂದಿದ್ದವು. ಇದರ ನಡುವೆ ಸ್ವಚ್ಛಭಾರತ ಅಭಿಯಾನ, ಸಿಎಎ ಜಾರಿ ಭರವಸೆ, ಆಯುಷ್ಮಾನ್ ಭಾರತದಂತಹ ಕ್ರಮಗಳು ಬಿಜೆಪಿ ಕೈಹಿಡಿದವು. ಇದೆಲ್ಲದಕ್ಕಿಂತ ಮುಖ್ಯವಾಗಿ ಚುನಾವಣಾ ಹೊತ್ತಲ್ಲಿ ಆದ ಪುಲ್ವಾಮಾ ದಾಳಿ ದೇಶದ ರಾಜಕೀಯ ದಿಕ್ಕನ್ನೇ ಬದಲಿಸಿತು.
Advertisement
ಸ್ವಚ್ಛಭಾರತ
2014 ರಲ್ಲಿ ಮೋದಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದರು. ಅವರ ಪ್ರಮುಖ ಯೋಜನೆಗಳಲ್ಲಿ ಸ್ವಚ್ಛಭಾರತ ಕೂಡ ಒಂದು. ಈ ಕಾರ್ಯಕ್ರಮದಡಿ ಭಾರತವು ಶೌಚ ಮುಕ್ತ ದೇಶವಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿತು. ಆದರೂ ಶೌಚಾಲಯ ಹೊಂದಿರುವ ಮನೆಗಳ ಪ್ರಮಾಣ ಶೇ.100 ಇಲ್ಲ. ಆದರೂ ಯೋಜನೆಯಿಂದಾಗಿ ದೇಶದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಸಿಕ್ಕಿತು. ಇದನ್ನೂ ಓದಿ: 2014; ಪಾತಾಳಕ್ಕೆ ಕುಸಿದ ಕಾಂಗ್ರೆಸ್ – ದಿಲ್ಲಿ ಗದ್ದುಗೆಯೇರಿದ ನರೇಂದ್ರ ಮೋದಿ
Advertisement
Advertisement
ನೋಟು ರದ್ದತಿ
2016 ರ ನವೆಂಬರ್ 8 ರಂದು ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ 500 ರೂ. ಮತ್ತು 1000 ರೂ. ಮುಖಬೆಲೆ ನೋಟುಗಳನ್ನು ರದ್ದು ಮಾಡಿ ಪ್ರಧಾನಿ ಮೋದಿ ಆದೇಶ ಹೊರಡಿಸಿದ್ದರು. ಹೆಚ್ಚು ಮುಖಬೆಲೆಯ ನೋಟುಗಳಿಂದ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಜೊತೆಗೆ ಭಯೋತ್ಪಾದನೆ ನಿಗ್ರಹಕ್ಕೆ ಈ ಕ್ರಮ ಅಗತ್ಯ ಎಂದು ಕೇಂದ್ರ ಸರ್ಕಾರ ನೋಟು ರದ್ದತಿ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ನೋಟು ರದ್ದತಿ ಕಾರಣದಿಂದಾಗಿ ಸುಮಾರು 100 ಜನ ತಮ್ಮ ಪ್ರಾಣ ಕಳೆದುಕೊಂಡರು. ಕೇಂದ್ರ ಕ್ರಮವನ್ನು ವಿಪಕ್ಷಗಳು ಟೀಕಿಸಿದ್ದವು. ಇದೊಂದು ಆರ್ಥಿಕ ನರಮೇಧ ಮತ್ತು ವ್ಯವಸ್ಥಿತ ಲೂಟಿ ಎಂದು ಕೇಂದ್ರ ಸರ್ಕಾರವನ್ನು ದೂರಿದ್ದವು.
Advertisement
ಒಂದು ದೇಶ ಒಂದು ತೆರಿಗೆ
2017 ರಲ್ಲಿ ಸರಕು ಮತ್ತು ಸೇವಾ ತೆರಿಗೆ-ಜಿಎಸ್‌ಟಿಯನ್ನು (GST) ಕೇಂದ್ರ ಸರ್ಕಾರ ಜಾರಿಗೆ ತಂದಿತು. ಒಂದು ದೇಶ ಒಂದು ತೆರಿಗೆ ಪರಿಕಲ್ಪನೆಯಲ್ಲಿ ಯೋಜನೆ ಜಾರಿಗೊಳಿಸಿತು. ಆದರೂ ಜಿಎಸ್‌ಟಿ ಜಾರಿಯಿಂದ ರಾಜ್ಯ ಸರ್ಕಾರಗಳು ನಷ್ಟ ಅನುಭವಿಸಿದವು. ಇದನ್ನು ಕೇಂದ್ರ ಸರ್ಕಾರವೇ ಭರಿಸುವುದಾಗಿ ಒಪ್ಪಿಕೊಂಡರೂ, ಪರಿಹಾರವನ್ನು ಪೂರ್ಣ ಪ್ರಮಾಣದಲ್ಲಿ ರಾಜ್ಯ ಸರ್ಕಾರಗಳಿಗೆ ನೀಡಿಲ್ಲ. ಇದನ್ನೂ ಓದಿ: 2009, 2014, 2019ರ ಲೋಕಸಭಾ ಚುನಾವಣೆಯಲ್ಲಿ ಏನಾಗಿತ್ತು? ಗೆದ್ದ ಕಲಿಗಳು ಯಾರು? – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
ಪುಲ್ವಾಮಾ ದಾಳಿ
ಚುನಾವಣೆ ಇನ್ನೇನು ಹತ್ತಿರದಲ್ಲಿದೆ ಎನ್ನುವಾಗಲೇ ಜಮ್ಮುವಿನ ಪುಲ್ವಾಮಾದಲ್ಲಿ (Pulwama Attack) ಸಿಆರ್‌ಪಿಎಫ್ ಯೋಧರ ವಾಹನಗಳ ಮೇಲೆ ಉಗ್ರರ ದಾಳಿ ನಡೆಯಿತು. ಸಿಆರ್‌ಪಿಎಫ್‌ನ 40 ಯೋಧರು ದಾಳಿಯಲ್ಲಿ ಮೃತಪಟ್ಟರು. ಪುಲ್ವಾಮಾ ದಾಳಿ ಪ್ರತಿಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ತಾಣಗಳ ಮೇಲೆ ದಾಳಿ ನಡೆಸಿತು. ಬಾಲಾಕೋಟ್ ವೈಮಾನಿಕ ದಾಳಿ ಮತ್ತು ಸೇನಾ ಕಾರ್ಯಾಚರಣೆಗಳು ಹೆಚ್ಚು ಸದ್ದು ಮಾಡಿದವು. ನಂತರ ನಡೆದ ಚುನಾವಣೆಯಲ್ಲಿ ಮೋದಿ ಸರ್ಕಾರ ಅಭೂತಪೂರ್ವ ಜಯ ಸಾಧಿಸಿತು.
39 ದಿನ ಚುನಾವಣೆ
ಏ.11 ರಿಂದ ಮೇ 19 ರ ವರೆಗೆ ಚುನಾವಣೆ ನಡೆಯಿತು. ಒಟ್ಟು 543 ಕ್ಷೇತ್ರಗಳಿಗೆ 39 ದಿನ ಮತದಾನ ನಡೆಯಿತು.
ಒಟ್ಟು ಮತದಾರರು: 91.2 ಕೋಟಿ
ಮತ ಚಲಾಯಿಸಿದವರ ಸಂಖ್ಯೆ: 61,20,81,902
ಮತ ಪ್ರಮಾಣ: 69.05%
ರಾಜ್ಯಗಳು: 36
ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಬಿಜೆಪಿ – 303
ಕಾಂಗ್ರೆಸ್ – 52
ಡಿಎಂಕೆ – 23
ಎಐಟಿಸಿ – 22
ವೈಎಸ್‌ಆರ್‌ಸಿಪಿ – 22
ಪಕ್ಷೇತರ – 4
ಇತರೆ – 116
ಮತ್ತೆ ಗೆದ್ದ ಮೋದಿ
ಚುನಾವಣೆಯಲ್ಲಿ ಬಿಜೆಪಿ 37.36% ಮತಗಳನ್ನು ಪಡೆಯಿತು. ಇದು 1989 ರ ಸಾರ್ವತ್ರಿಕ ಚುನಾವಣೆಯ ನಂತರ ರಾಜಕೀಯ ಪಕ್ಷವೊಂದು ಪಡೆದ ಅತ್ಯಧಿಕ ಮತ ಪ್ರಮಾಣವಾಗಿದೆ. 303 ಸ್ಥಾನಗಳನ್ನು ಗೆದ್ದ ಬಿಜೆಪಿ ಕಳೆದ ಚುನಾವಣೆಗಿಂತ ಬಹುಮತವನ್ನು ಹೆಚ್ಚಿಸಿಕೊಂಡಿತು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 353 ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ 52 ಸ್ಥಾನಗಳನ್ನು ಗೆದ್ದುಕೊಂಡಿತು. ವಿರೋಧ ಪಕ್ಷವಾಗಲು ಬೇಕಾದ ಸ್ಥಾನಗಳನ್ನು ಪಡೆಯುವಲ್ಲೂ ವಿಫಲವಾಯಿತು. ಇದರ ಜೊತೆಗೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) 91 ಸ್ಥಾನಗಳನ್ನು ಗೆದ್ದಿತು.
ಕರ್ನಾಟಕದಲ್ಲಿ ಏನಾಗಿತ್ತು?
ಬಿಜೆಪಿ – 25
ಕಾಂಗ್ರೆಸ್ – 1
ಜೆಡಿಎಸ್ – 1
ಪಕ್ಷೇತರ – 1
ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಹೊಡೆತ
ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಲೋಕಸಭಾ ಚುನಾವಣೆಯಲ್ಲಿ (2019 Lok Sabha Elections) ಬಿಜೆಪಿ ವಿರುದ್ಧ ಮೈತ್ರಿ ಪಕ್ಷಗಳು ಸ್ಪರ್ಧೆ ಮಾಡಿದ್ದವು. ಆದರೆ ಮೋದಿ ಅಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹೀನಾಯ ಸ್ಥಿತಿ ತಲುಪಿದವು. ಬಿಜೆಪಿ 25 ಸ್ಥಾನಗಳನ್ನು ಗೆದ್ದರೆ, ಮೈತ್ರಿ ಪಕ್ಷಗಳು ತಲಾ 1 ಸ್ಥಾನಗಳನ್ನು ಮಾತ್ರ ಗೆದ್ದವು. ಇದನ್ನೂ ಓದಿ: 1999: ಮತ್ತೆ ಪ್ರಧಾನಿಯಾದ ‘ಅಜಾತಶತ್ರು’ – 5 ವರ್ಷ ಪೂರ್ಣ ಆಡಳಿತ ನಡೆಸಿದ ಮೊದಲ ಬಿಜೆಪಿ ನಾಯಕ
ಗೆದ್ದು ಬೀಗಿದ ಮಂಡ್ಯ ಸೊಸೆ
2019 ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದ ಕ್ಷೇತ್ರ ಮಂಡ್ಯ. ನಟ ಅಂಬರೀಶ್ ನಿಧನದ ಬಳಿಕ ಆಪ್ತರ ಸಲಹೆಯಂತೆ ಅನಿರೀಕ್ಷಿತವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಚುನಾವಣಾ ಕಣಕ್ಕಿಳಿದರು. ರಾಜಕೀಯವಾಗಿ ಅನುಭವ ಇಲ್ಲದ ಸುಮಲತಾ ಅವರು ಗೆಲ್ಲುತ್ತಾರೆಯೇ ಎಂಬ ಪ್ರಶ್ನೆ ಮೂಡಿತ್ತು. ಇತ್ತ ಮೈತ್ರಿ ಅಭ್ಯರ್ಥಿಯಾಗಿ ಆಗಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧೆ ಮಾಡಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡ್ಯದಲ್ಲಿ ತನ್ನ ಅಭ್ಯರ್ಥಿಯನ್ನು ಹಾಕಲಿಲ್ಲ. ಸುಮಲತಾ ಅವರಿಗೆ ಬೆಂಬಲ ಘೋಷಿಸಿತು. ಜಿದ್ದಾಜಿದ್ದಿನ ಕಣದಲ್ಲಿ ಸುಮಲತಾ ಗೆದ್ದು ಬೀಗಿದರು. ಈ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಏಕೈಕ ಅಭ್ಯರ್ಥಿಯಾದರು.
ಮಾಜಿ ಪ್ರಧಾನಿಗೆ ಸೋಲು
ಹಲವು ವರ್ಷಗಳ ಬಳಿಕ ಕಾರ್ಯಕರ್ತರ ಒತ್ತಾಯದ ಮೇರೆಗೆ ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೋಲಿನ ರುಚಿ ಕಂಡರು. ಅವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಗೆದ್ದು ಬೀಗಿದರು. ಮಾಜಿ ಪ್ರಧಾನಿ ಸ್ಪರ್ಧೆ ಕಾರಣಕ್ಕೆ ಈ ಕ್ಷೇತ್ರವೂ ಗಮನ ಸೆಳೆದಿತ್ತು.