ನಮ್ಮ ಪಕ್ಷದಿಂದ ರಾಜ್ಯದ 28 ಕ್ಷೇತ್ರಗಳಿಂದ ಸ್ಪರ್ಧೆ: ಉಪೇಂದ್ರ

Public TV
2 Min Read
upendra 1

-ಅಭ್ಯರ್ಥಿಗಳ ಆಯ್ಕೆ ಹೇಗಿರುತ್ತೆ?

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಗೆ ನಮ್ಮ ಪಕ್ಷದಿಂದ 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷ ಉಪೇಂದ್ರ ಹೇಳಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಗುರುತು ಆಟೋ ಆಗಿದ್ದು, ಅಧಿಕಾರಕ್ಕಾಗಿ ನಾನು ಪಕ್ಷ ಮಾಡಿಲ್ಲ. ಜನರಿಗೆ ಒಳ್ಳೆಯದಾಗಬೇಕು ಮತ್ತು ವ್ಯವಸ್ಥೆ ಬದಲಾವಣೆ ಆಗಬೇಕು ಅನ್ನೋದು ನಮ್ಮ ಗುರಿಯಾಗಿದೆ. ಪ್ರತಿಯೊಬ್ಬರಿಗೂ ಬದಲಾವಣೆ ಬೇಕು ಅನ್ನಿಸುತ್ತಿದೆ. ಹಾಗಾಗಿ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

upendra 2

ಚುನಾವಣಾ ಪ್ರಣಾಳಿಕೆ ಎಂಬ ಪರಿಕಲ್ಪನೆ ತಪ್ಪು. ನಿಜವಾದ ಪ್ರಣಾಳಿಕೆ ಏನು ಎಂಬುದು ಜನರಿಗೆ ಗೊತ್ತಿದೆ. ನಮ್ಮ ಅಭ್ಯರ್ಥಿ ಜನರೊಂದಿಗೆ ಚರ್ಚಿಸಿ ಮಾಹಿತಿ ಸಂಗ್ರಹಿಸುತ್ತಾರೆ. ಹಾಗಾಗಿ ಅಭ್ಯರ್ಥಿಗಳೇ ನಮ್ಮ ಪಕ್ಷದ ಪ್ರಣಾಳಿಕೆ ಆಗಿರುತ್ತಾರೆ. ಈ ವಿಷಯಲ್ಲಿ ನಾವು ಒಬ್ಬಿಬ್ಬರ ಅಭಿಪ್ರಾಯವನ್ನು ಪಡೆದುಕೊಳ್ಳಲ್ಲ. ಶೇ.55ರಷ್ಟು ಜನರ ಅಭಿಪ್ರಾಯವನ್ನು ನಮ್ಮ ಪಕ್ಷ ಒಪ್ಪಿಕೊಳ್ಳಲಿದೆ. ಅದರಂತೆಯೇ ಕೆಲಸವನ್ನು ಮಾಡಲಿದೆ ಎಂದು ಉಪೇಂದ್ರ ಚುನಾವಣಾ ತಯಾರಿಯನ್ನು ಬಿಚ್ಚಿಟ್ಟರು.

ಸಂವಿಧಾನದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ಇಂತಹದೇ ವಿದ್ಯಾರ್ಹತೆ ಇರಬೇಕೆಂದು ಹೇಳಿಲ್ಲ. ಆಡಳಿತ ನಡೆಸಲು ಕೆಎಎಸ್, ಐಎಎಸ್ ಅಂತಹ ಅಧಿಕಾರಿಗಳು ಅಡಳಿತ ವರ್ಗದಲ್ಲಿರುತ್ತಾರೆ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ನಮ್ಮನ್ನು ಪ್ರತಿನಿಧಿಸುವ ವ್ಯಕ್ತಿಯನ್ನು ಗೆಲ್ಲಿಸಬೇಕು. ಹಾಗಾಗಿ ಅಭ್ಯರ್ಥಿಗಳೇ ನಮ್ಮ ಚುನಾವಣಾ ಪ್ರಣಾಳಿಕೆ ಆಗಿರುತ್ತಾರೆ ಎಂದು ಹೇಳಿದರು.

upendra 3

ನಮ್ಮ ಪಕ್ಷದಿಂದ ಎರಡು ಪ್ರಣಾಳಿಕೆ ಇರುತ್ತದೆ. ಪಕ್ಷದಿಂದ ಸ್ಪರ್ಧೆ ಮಾಡುವ ಇಚ್ಚಿಸುವ ನಾಯಕರು ತಮ್ಮ ಪ್ರಣಾಳಿಕೆ ಮೂಲಕ ಬನ್ನಿ. ಪ್ರಣಾಳಿಕೆಯಲ್ಲಿ ನೀವು ಹೇಗೆ ಕೆಲಸ ಮಾಡುತ್ತೀರಿ? ಜನರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಹೇಗೆ ನಿಲ್ಲುತ್ತೀರಿ ಎಂಬುದನ್ನು ನಮಗೆ ತೋರಿಸಬೇಕು. ಒಬ್ಬ ವ್ಯಕ್ತಿಯನ್ನು ಈ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುತ್ತಿದ್ದಾರೆಂದು ಒಂದು ಚಿಕ್ಕ ಸಮೀಕ್ಷೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಮೀಕ್ಷೆಯಲ್ಲಿ ಉತ್ತಮ ಪ್ರತಿಕ್ರಿಯೆ ಬರದೇ ಇದ್ದಲ್ಲಿ ಅಂತವರನ್ನು ರಿಜೆಕ್ಟ್ ಮಾಡಲಾಗುವುದು. ಪಕ್ಷದ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿ ಇರಲಿವೆ. ಗೆದ್ದ ಬಳಿಕ ಏನು ಕೆಲಸ ಮಾಡುತ್ತಾರೆ ಎಂಬುದರ ಬಗ್ಗೆ ಅಫಡವಿಟ್ ಪಡೆದುಕೊಳ್ಳುತ್ತೇವೆ. ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.

https://youtu.be/ZqLSa6pP7LU

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *