ಹೊಸ ವರ್ಷಕ್ಕೆ ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿ ಇದೆ. ಹೀಗಾಗಿ ಹೊಸ ವರ್ಷ ಬರುವ ಮುನ್ನ 2018ರಲ್ಲಿ ವಿಶ್ವದಲ್ಲಿ ಏನೇನು ನಡೆದಿದೆ ಎನ್ನುವ ಕಿರು ಮಾಹಿತಿ ಇಲ್ಲಿದೆ.
1) ಡೊನಾಲ್ಡ್ ಟ್ರಂಪ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವರ್ಷಪೂರ್ತಿ ಸುದ್ದಿಯಲ್ಲೇ ಇದ್ದರು. ಕೆಲವೊಮ್ಮೆ ತಮ್ಮ ಹೇಳಿಕೆಯಿಂದ ಸುದ್ದಿಯಾಗುತ್ತಿದ್ದರೆ, ಮತ್ತೆ ತಮ್ಮ ನಿರ್ಧಾರಗಳಿಂದ ಸುದ್ದಿಯಾಗುತ್ತಿದ್ದರು. ವಲಸೆ ನೀತಿ ವಿಚಾರದಲ್ಲಿ ಕಠಿಣ ನಿರ್ಧಾರ ತೆಗೆದು ಪೋಷಕರು ಮತ್ತು ಮಕ್ಕಳನ್ನು ಪ್ರತ್ಯೇಕ ಮಾಡಿದ ವಿಚಾರಕ್ಕೆ ಅಮೆರಿಕದಲ್ಲಿ ಭಾರೀ ಪ್ರತಿಭಟನೆ ನಡೆಯಿತು. ನಂತರ ಚೀನಾ ವಸ್ತುಗಳ ಮೇಲೆ ಆಮದು ಸುಂಕ ಹೇರಿದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿತ್ತು. ಉತ್ತರ ಕೊರಿಯಾದ ವಿರುದ್ಧ ಯುದ್ಧಕ್ಕೂ ಹೆದರುವುದಿಲ್ಲ ಎಂದು ಗುಡುಗಿದ್ದ ಟ್ರಂಪ್ ಅಚ್ಚರಿಯ ಬೆಳವಣಿಗೆಯಲ್ಲಿ ಸಿಂಗಾಪುರದಲ್ಲಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಜೊತೆ ಮಾತನಾಡಿದ್ದರು.
Advertisement
Advertisement
2) ಫೇಸ್‍ಬುಕ್ ಕ್ಷಮೆ: ಬಳಕೆದಾರರಿಗೆ ತಿಳಿಯದಂತೆ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಫೇಸ್‍ಬುಕ್ ನಿಂದ ಅವರ ವೈಯಕ್ತಿಕ ಮಾಹಿತಿಯನ್ನು ಕದ್ದು, ಅವರ ಮೇಲೆ ಪ್ರಭಾವ ಬೀರುವ ಕೆಲಸ ಮಾಡಿತ್ತು. ಆರಂಭದಲ್ಲಿ ಈ ಸುದ್ದಿಯನ್ನು ಫೇಸ್‍ಬುಕ್ ತಿರಸ್ಕರಿಸಿದ್ದರೆ, ಬಳಿಕ ಸಾಕ್ಷ್ಯಗಳ ಸಮೇತ ಸುದ್ದಿಗಳು ಪ್ರಕಟವಾದ ಬಳಿಕ ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದನ್ನು ಒಪ್ಪಿಕೊಂಡಿತು. ನಂತರ ಫೇಸ್‍ಬುಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಜೂಕರ್ ಬರ್ಗ್ ಕ್ಷಮೆ ಕೇಳಿ, ಮುಂದಿನ ದಿನಗಳಲ್ಲಿ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಸೋರಿಕೆಯಾಗದೇ ಇರಲು ಮತ್ತಷ್ಟು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತೇವೆ. ವಿಶೇಷವಾಗಿ ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಮೇಲೆ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದರು.
Advertisement
Advertisement
3) ಇಂಡೋನೇಷ್ಯಾದಲ್ಲಿ ಸುನಾಮಿ: ಸೆಪ್ಟಂಬರ್ 28 ರಂದು ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ ಸಂಭವಿಸಿದ ಭೀಕರ ಭೂಕಂಪ ಹಾಗೂ ಸುನಾಮಿಯಿಂದಾಗಿ 2,256 ಮಂದಿ ಮೃತಪಟ್ಟಿದ್ದರು. ಸುಲವೆಸಿ ದ್ವೀಪದಲ್ಲಿ ಸೆಪ್ಟೆಂಬರ್ 28 ಶುಕ್ರವಾರ ಬೆಳಗ್ಗೆ 6.1 ತೀವ್ರತೆಯ ಭೂಕಂಪ ದಾಖಲಾಗಿದ್ದರೆ, ಮಧ್ಯಾಹ್ನ 7.5 ತೀವ್ರತೆಯಲ್ಲಿ ಭೂಕಂಪ ಉಂಟಾಗಿತ್ತು. ಸುನಾಮಿಯಿಂದಾಗಿ 10,679 ಮಂದಿ ಗಾಯಗೊಂಡಿದ್ದರೆ, 1,075 ಜನ ನಾಪತ್ತೆಯಾಗಿದ್ದರು.
4) ಇಂಡೋನೇಷ್ಯಾ ವಿಮಾನ ದುರಂತ: ಅಕ್ಟೋಬರ್ 29 ರಂದು ಇಂಡೋನೇಷ್ಯಾದ ರಾಜಧಾನಿ ಜಕಾರ್ತದಿಂದ ಪಾಂಗ್‍ಕಲ್ ಪಿನಾಗ್ ದ್ವೀಪಕ್ಕೆ ಹೊರಟಿದ್ದ ಲಯನ್ ಏರ್‍ಲೈನ್ಸ್ ಸಂಸ್ಥೆಗೆ ಸೇರಿದ್ದ ವಿಮಾನ ಪಾಂಗ್‍ಕಲ್ ದ್ವೀಪದ ಬಳಿ ಪತನಗೊಂಡಿತ್ತು. ಪರಿಣಾಮ ವಿಮಾನದಲ್ಲಿದ್ದ ಎಲ್ಲಾ 189 ಮಂದಿ ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದರು.
5) ಖಶೋಗಿ ಹತ್ಯೆ: ಸೌದಿ ಅರೇಬಿಯಾ ಮೂಲದ ಪತ್ರಕರ್ತ, ಲೇಖಕ ಜಮಾಲ್ ಖಶೋಗಿ ಹತ್ಯೆ ಪ್ರಕರಣ ಅಂತಾರಾಷ್ಟ್ರೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಅಕ್ಟೋಬರ್ 2 ರಂದು ಟರ್ಕಿಯ ಇಸ್ತಾಂಬುಲ್‍ನ ಸೌದಿ ರಾಯಭಾರಿ ಕಚೇರಿಗೆ ತಮ್ಮ ಮದುವೆಯ ದಾಖಲಾತಿ ಪಡೆಯಲು ತೆರಳಿದ್ದ `ವಾಷಿಂಗ್ಟನ್ ಪೋಸ್ಟ್’ನ ಹಿರಿಯ ವರದಿಗಾರ ಜಮಾಲ್ ಖಶೋಗಿ (60) ನಿಗೂಢವಾಗಿ ಕಣ್ಮರೆಯಾಗಿದ್ದರು. ಈ ಪತ್ರಕರ್ತನ ಹತ್ಯೆ ಹಿಂದೆ ಸೌದಿ ರಾಜಮನೆತನದ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿತ್ತು.
6) ಉತ್ತರ ಕೊರಿಯಾ-ದಕ್ಷಿಣ ಕೊರಿಯಾ ಮಾತುಕತೆ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಈ ವರ್ಷ ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾದ ನಾಯಕರು ಮುಖಾಮುಖಿಯಾಗಿದ್ದಾರೆ. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಉಭಯ ದೇಶಗಳ ಗಡಿ ಪ್ರದೇಶದಲ್ಲಿನ ತಟಸ್ಥ ನಗರವೆಂದೇ ಖ್ಯಾತವಾಗಿರುವ ಪಾನ್‍ಮೂಂಜಾಮ್‍ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. 1950-53ರ ನಡುವೆ ನಡೆದ ಕೊರಿಯಾ ಯುದ್ಧದ ನಂತರ ಪ್ರಪ್ರಥಮ ಬಾರಿಗೆ ಉತ್ತರ ಕೊರಿಯಾದ ಅಧ್ಯಕ್ಷರು ದಕ್ಷಿಣ ಕೊರಿಯಾ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು.
7) ವ್ಲಾದಿಮಿರ್ ಪುಟಿನ್: ಡೊನಾಲ್ಡ್ ಟ್ರಂಪ್ ನಂತರ ವಿಶ್ವದಲ್ಲಿ ಅತಿ ಹೆಚ್ಚು ಸುದ್ದಿಯಾದ ವ್ಯಕ್ತಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್. ಸತತ ನಾಲ್ಕನೇಯ ಬಾರಿ ಪುಟಿನ್ ಆಯ್ಕೆ ಆಗಿದ್ದು ವಿಶೇಷ. ಅಮೆರಿಕ ಅಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಹಿಲರ್ ಕ್ಲಿಂಟನ್ ವಿರುದ್ಧ ಟ್ರಂಪ್ ಪರ ಆನ್‍ಲೈನ್ ನಲ್ಲಿ ಪ್ರಚಾರ ನಡೆಸಲಾಗಿದ್ದು, ಪುಟಿನ್ ನಿರ್ದೇಶನದಂತೆ ಈ ಪ್ರಚಾರ ವ್ಯವಸ್ಥಿತವಾಗಿ ರೂಪಿಸಲಾಗಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಆದರೆ ಈ ಆರೋಪವನ್ನು ಪುಟಿನ್ ಮತ್ತು ಟ್ರಂಪ್ ನಿರಾಕರಿಸಿದ್ದರು.
8) ನೇಪಾಳ ವಿಮಾನ ದುರಂತ: ಯುಎಸ್-ಬಾಂಗ್ಲಾ ಏರ್‍ಲೈನ್ಸ್ ಗೆ ಸೇರಿದ್ದ ವಿಮಾನವೊಂದು ನೇಪಾಳದ ಕಠ್ಮಂಡುವಿನ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿ ಸ್ಫೋಟಗೊಂಡು 52 ಪ್ರಯಾಣಿಕರು ಮೃತಪಟ್ಟಿದ್ದರು.
9) ಆಪಲ್ ಸಾಧನೆ: ಅಮೆರಿಕದ ಐಟಿ ದಿಗ್ಗಜ ಆಪಲ್ ಕಂಪನಿಯ ಮಾರುಕಟ್ಟೆ ಮೌಲ್ಯ ಲಕ್ಷ ಕೋಟಿ ಡಾಲರ್ ದಾಟಿದೆ. ಈ ಸಾಧನೆ ನಿರ್ಮಿಸಿದ ವಿಶ್ವದ ಮೊದಲ ಕಂಪನಿ ಎನ್ನುವ ಹೆಗ್ಗಳಿಕೆಗೆ ಆಪಲ್ ಪಾತ್ರವಾಗಿದೆ.
10) ಮೊದಲ ಸಮುದ್ರ ಸೇತುವೆ: ಅಕ್ಟೋಬರ್ 23 ರಂದು ವಿಶ್ವದ ಅತಿ ಉದ್ದದ ಸಮುದ್ರ ಸೇತುವೆ ಚೀನಾದ ಝಹೈನಲ್ಲಿ ಉದ್ಘಾಟನೆಯಾಗಿದೆ. ಈ ಸೇತುವೆಯು ಹಾಂಗ್‍ಕಾಂಗ್ ಮತ್ತು ಮಕಾವ್ ರಾಷ್ಟ್ರಗಳಿಗೆ ಸಂರ್ಪಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಾಗಿದೆ. ಒಟ್ಟು 55 ಕಿ.ಮೀ ಉದ್ದವನ್ನು ಹೊಂದಿರುವ ಈ ರಸ್ತೆಯೂ ಸೇತುವೆ ಹಾಗೂ ನೀರೊಳಗಿನ ಸುರಂಗ ಮಾರ್ಗವನ್ನು ಹೊಂದಿದೆ.
11) ಪಾಕ್ ಪ್ರಧಾನಿಯಾಗಿ ಮಾಜಿ ಕ್ರಿಕೆಟರ್: ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕರಿಸಿದ್ದರು. ಪಾಕಿಸ್ತಾನದ ಸಂಸತ್‍ಗೆ ನಡೆದ 25ನೇ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಿಟಿಐ(ಪಾಕಿಸ್ತಾನ್ ತೆಹರಿಕ್ ಇನ್ಸಾಫ್) 116 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ದೇಶದ ಮೀಸಲು ಕ್ಷೇತ್ರಗಳ ಫಲಿತಾಂಶವನ್ನು ಅಲ್ಲಿನ ಚುನಾವಣಾ ಆಯೋಗ ಪ್ರಕಟಿಸಿದ ನಂತರ ಅವರ ಪಿಟಿಐನ ಗಳಿಕೆ 158 ಸ್ಥಾನಕ್ಕೆ ಏರಿತ್ತು. ಇಮ್ರಾನ್ ಖಾನ್ ಪದಗ್ರಹಣ ಸಮಾರಂಭಕ್ಕೆ ಭಾರತದ ಮಾಜಿ ಕ್ರಿಕೆಟರ್ ಹಾಗೂ ಪಂಜಾಬ್ ನ ಸಚಿವ ನವಜೋತ್ ಸಿಂಗ್ ಸಿಧು ಕೂಡ ಭಾಗವಹಿಸಿದ್ದರು. ಅವರನ್ನು ಸೇನಾ ಪಡೆಯ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಇಮ್ರಾನ್ ಖಾನ್ ಪದಗ್ರಹಣಕ್ಕೆ ಭೇಟಿ ನೀಡಿದ್ದ ಸಿಧು ವಿರುದ್ಧ ದೇಶದಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.
12) ಎಐ ನ್ಯೂಸ್ ಆ್ಯಂಕರ್ ಅನಾವರಣ: ನವೆಂಬರ್ 7 ರಂದು ಚೀನಾ ಜಗತ್ತಿನ ಮೊದಲ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಎಐ ಅಥವಾ ಕೃತಕ ಬುದ್ಧಿಮತ್ತೆ) ನ್ಯೂಸ್ ಆ್ಯಂಕರ್ ಅನ್ನು ಬೀಜಿಂಗ್ ನಲ್ಲಿ ಅನಾವಣರಣಗೊಳಿಸಿತ್ತು. ಅಲ್ಲದೇ ವಿಶ್ವ ಅಂತರ್ಜಾಲದ ಸಮ್ಮೇಳನದಲ್ಲಿ ಚೀನಾ `ಝಿನುವಾ’ ಸುದ್ದಿ ಸಂಸ್ಥೆಯು ಮೊದಲ ಬಾರಿಗೆ ಎಐ ನ್ಯೂಸ್ ಆ್ಯಂಕರ್ ಅನ್ನು ಜಗತ್ತಿಗೆ ಪರಿಚಯಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv