2018ರಲ್ಲಿ ನಮ್ಮನ್ನ ಅಗಲಿದ ಗಣ್ಯರು

Public TV
4 Min Read
2018 died

ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ, ತಮಿಳುನಾಡಿನ ಡಿಎಂಕೆ ನಾಯಕ ಕರುಣಾನಿಧಿ, ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ, ಸಚಿವ ಅನಂತ್ ಕುಮಾರ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಈ ವರ್ಷ ವಿಧವಶರಾಗಿದ್ದಾರೆ. ಅಷ್ಟೇ ಅಲ್ಲದೆ ವರ್ಷ ಆರಂಭವಾದ ಕೆಲ ದಿನಗಳಲ್ಲಿಯೇ ಕಾಶಿನಾಥ್ ಅವರನ್ನು ಕಳೆದುಕೊಂಡಿದ್ದ ಸ್ಯಾಂಡ್‍ವುಲ್ ವರ್ಷಾಂತ್ಯದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಕಳೆದುಕೊಂಡಿತು.

ರಾಧಾ ವಿಶ್ವನಾಥ್:
ಎಂ.ಎಸ್. ಸುಬ್ಬಲಕ್ಷ್ಮಿ ಅವರ ಪುತ್ರಿ ಹಾಗೂ ಖ್ಯಾತ ಗಾಯಕಿಯಾಗಿದ್ದ ರಾಧಾ ವಿಶ್ವನಾಥ್ ಅವರು ಜನವರಿ 2ರಂದು ನಿಧನರಾದರು.

ಕಾಶಿನಾಥ್:
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರ ಕಾಶಿನಾಥ್(67) ಅವರು ಜನವರಿ 18ರಂದು ನಿಧನರಾದರು. ಅಂದು ಚಾಮರಾಜಪೇಟೆಯ ಟಿಆರ್ ಮಿಲ್‍ನ ರುದ್ರಭೂಮಿಯಲ್ಲಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು.

Kashinath 5 1

ಶ್ರೀದೇವಿ:
ಬಾಲಿವುಡ್‍ನ ಹಿರಿಯ ನಟಿ ಶ್ರೀದೇವಿ (54) ಹೃದಯಾಘಾತದಿಂದ ದುಬೈಯಲ್ಲಿ ಫೆಬ್ರವರಿ 24ರಂದು ರಾತ್ರಿ ಮೃತಪಟ್ಟಿದ್ದರು. ನಟಿ ಶ್ರೀದೇವಿ ಸಾವು ಭಾರೀ ಚರ್ಚೆಗೆ ಕಾರಣವಾಗಿತ್ತು. ದುಬೈನಿಂದ ಮೃತದೇಹವನ್ನು ಮುಂಬೈಗೆ ತಂದು ಫೆಬ್ರವರಿ 27ರಂದು ವಿಲೆ ಪಾರ್ಲೆ ಸೇವಾ ಸಮಾಜದ ಶವಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ತಮಿಳುನಾಡಿನ ಶಿವಕಾಶಿಯಲ್ಲಿ 1963ರ ಆಗಸ್ಟ್ 13ರಂದು ಜನಿಸಿದ್ದ ಶ್ರೀದೇವಿ 4ನೇ ವಯಸ್ಸಿನಲ್ಲಿಯೇ ತಮಿಳಿನ `ತುನೈವಾನ್’ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು.

sridevi

ಕರುಣಾನಿಧಿ:
ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕಲೈನರ್ ಕರುಣಾನಿಧಿ(94) ಆಗಸ್ಟ್ 7ರಂದು ವಿಧಿವಶರಾದರು. ಮರಿನಾ ಬೀಚ್‍ನಲ್ಲಿ ಅಂತ್ಯಸಂಸ್ಕಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಜಾಗದ ಸಮಸ್ಯೆಯನ್ನು ಆಲಿಸಿದ ಕೋರ್ಟ್ ಆಗಸ್ಟ್ 8ರಂದು ರಾತ್ರಿಯೇ ವಿಚಾರಣೆ ನಡೆಸಿ, ಮರಿನಾ ಬೀಚ್‍ನಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ಕಲ್ಪಿಸಿತು. ಇದರಿಂದಾಗಿ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್, ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಮತ್ತು ಡಿಎಂಕೆ ಸ್ಥಾಪಕ ಅಣ್ಣಾದೊರೈ ಅವರ ಅಂತ್ಯಸಂಸ್ಕಾರ ನೆರವೇರಿದ ಮರಿನಾ ಬೀಚ್‍ನಲ್ಲಿಯೇ ಕರುಣಾನಿಧಿ ಅವರಿಗೂ ಜಾಗ ಸಿಕ್ಕಂತಾಯಿತು.

Karunanidhi 3

ಸೋಮನಾಥ ಚಟರ್ಜಿ:
ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ(89) ಆಗಸ್ಟ್ 13ರಂದು ಕೋಲ್ಕತಾದ ಆಸ್ಪತ್ರೆಯಲ್ಲಿ ನಿಧನರಾದರು. ಚಟರ್ಜಿ ಅವರು 10 ಬಾರಿ ಲೋಕಸಭಾ ಸದಸ್ಯರಾಗಿದ್ದರು ಮತ್ತು ಸಿಪಿಐ(ಎಂ) ನ ಕೇಂದ್ರ ಸಮಿತಿ ಸದಸ್ಯರಾಗಿದ್ದರು. 2004 ರಿಂದ 2009ರವರೆಗೆ ಲೋಕಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.

ಅಟಲ್ ಬಿಹಾರಿ ವಾಜಪೇಯಿ:
ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ(93) ಅವರು ಆಗಸ್ಟ್ 16ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಅನೇಕ ರಾಜಕೀಯ ನಾಯಕರು ಪಕ್ಷಭೇದ ಮರೆತು ದೇಶದ ಮೂಲೆ ಮೂಲೆಯಿಂದ ಬಂದು ಅಟಲ್ ಜೀ ಅವರ ಅಂತಿಮ ದರ್ಶನ ಪಡೆದರು. ಬ್ರಾಹ್ಮಣ ಸಂಪ್ರದಾಯದಂತೆ ವಾಜಪೇಯಿ ಅವರ ಅಂತ್ಯಸಂಸ್ಕಾರವು ಆಗಸ್ಟ್ 17ರಂದು ದೆಹಲಿಯ ಸ್ಮೃತಿ ಸ್ಥಳದಲ್ಲಿ ನೆರವೇರಿತು.

ATAL BIHARI VAJPAYE

ಅನಂತ್ ಕುಮಾರ್:
ದೆಹಲಿಯ ಕನ್ನಡ ಧ್ವನಿ ಎಂದೇ ಗುರುತಿಸಿಕೊಂಡಿದ್ದ ರಾಸಾಯನಿಕ ಮತ್ತು ರಸಗೊಬ್ಬರ, ಸಂಸದೀಯ ಸಚಿವ ಅನಂತ್ ಕುಮಾರ್ (59) ಅವರು ನವೆಂಬರ್ 12ರಂದು ನಿಧನರಾದರು. ಬೆಂಗಳೂರಿನ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅನಂತ್ ಕುಮಾರ್ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.

ರೆಬಲ್ ಸ್ಟಾರ್ ಅಂಬರೀಶ್:
ಮಾಜಿ ಸಚಿವ, ಸ್ಯಾಂಡಲ್‍ವುಡ್ ಟ್ರಬಲ್ ಶೂಟರ್, ರೆಬೆಲ್ ಸ್ಟಾರ್ ಅಂಬರೀಶ್ ಅವರು ನವೆಂಬರ್ 24ರಂದು ರಾತ್ರಿ ವಿಧಿವಶರಾದರು. ಕಂಠೀರವ ಸ್ಟೇಡಿಯಂನಲ್ಲಿ ಅಂಬರೀಶ್ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬಳಿಕ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಹೆಲಿಕಾಪ್ಟರ್ ಮೂಲಕ ಸಾಗಿಸಿ ಅಲ್ಲಿನ ಜನತೆಗೆ ದರ್ಶನ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಿತು. ಅಂಬರೀಶ್ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಪುತ್ರ ಅಭಿಷೇಕ್ ಅಗ್ನಿ ಸ್ಪರ್ಶ ನೆರವೇರಿಸಿದರು.

ambi politics copy

ಜಾಫರ್ ಶರೀಫ್:
ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಷರೀಫ್(85) ಅವರು ನವೆಂಬರ್ 25ರಂದು ನಿಧನರಾದರು. ನವೆಂಬರ್ 3, 1933 ರಂದು ಜನಿಸಿದ್ದ ಷರೀಫ್ 1991-95ರ ಅವಧಿಯಲ್ಲಿ ಕೇಂದ್ರ ರೈಲ್ವೇ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಆಪ್ತರಾಗಿದ್ದ ಜಾಫರ್ ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ರೈಲ್ವೇ ಸಚಿವರಾಗಿದ್ದರು. ಬೆಂಗಳೂರಿನ ಖಬರಸ್ತಾನ ಸ್ಮಶಾನದಲ್ಲಿ ನವೆಂಬರ್ 26ರಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.

Jaffer f1

ಮಧುಕರ್ ಶೆಟ್ಟಿ:
ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ(47) ಅವರು ಹೈದ್ರಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಡಿಸೆಂಬರ್ 28ರಂದು ವಿಧಿವಶರಾದರು. ಉಡುಪಿ ಮೂಲದ ಮಧುಕರ್ ಶೆಟ್ಟಿ ಅವರು, ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿಯವರ ಪುತ್ರ. 1999ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ, ರಾಮನಗರ ಚನ್ನಪಟ್ಟಣದಿಂದ ವೃತ್ತಿ ಜೀವನ ಆರಂಭಿಸಿದ್ದರು. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಯಡಾಡಿಯ ಮನೆಯ ಅಡಿಕೆ ತೋಟದಲ್ಲಿ ಡಿಸೆಂಬರ್ 30ರಂದು ಅಂತ್ಯಕ್ರಿಯೆ ನೆರವೇರಿತು.

Sulagitti Narasamma 2

ಸೂಲಗಿತ್ತಿ ನರಸಮ್ಮ:
ದೇಶದ ಉನ್ನತ ನಾಗರಿಕ ಪದ್ಮ ಪ್ರಶಸ್ತಿ ಪುರಸ್ಕೃತ ಕನ್ನಡತಿ ಸೂಲಗಿತ್ತಿ(98) ನರಸಮ್ಮ ಅವರು ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಡಿಸೆಂಬರ್ 25ರಂದು ನಿಧನರಾದರು. ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಕೃಷ್ಣಾಪುರದ ಮೂಲದವರಾದ ಸೂಲಗಿತ್ತಿ ನರಸಮ್ಮ ಆಸ್ಪತ್ರೆ, ವೈದ್ಯರಿಲ್ಲದ ಕಾಲದಲ್ಲಿ ಆಧುನಿಕ ಕಾಲದ ಹೆರಿಗೆ ತಜ್ಞೆಯಂತೆ 15 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದರು. ಸೂಲಗಿತ್ತಿ ನರಸಮ್ಮ ಅವರ ಅಂತ್ಯ ಸಂಸ್ಕಾರ ಡಿಸೆಂಬರ್ 26ರಂದು ನಗರದ ಗಂಗಸಂದ್ರ ಸರ್ಕಾರಿ ಜಮೀನಿನಲ್ಲಿ ನೆರವೇರಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *