ಬೆಂಗಳೂರು: ಜೂನ್ 1 ರಂದು ಕಸದ ತೊಟ್ಟಿಯಲ್ಲಿ ಸಿಕ್ಕ ನವಜಾತ ಶಿಶುವಿಗೆ ಹಾಲುಣಿಸಿ ಮೆಚ್ಚುಗೆಗೆ ಪಾತ್ರವಾಗಿದ್ದ ಪೊಲೀಸ್ ಮಹಿಳಾ ಪೇದೆ ಅರ್ಚನಾ ಅವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲು ತೀರ್ಮಾನಿಸಿದ್ದಾಗಿ ಬಿಬಿಎಂಪಿ ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ.
ಇಂದು ಅರ್ಚನಾರನ್ನು ಸನ್ಮಾನಿಸಿ ಬಳಿಕ ಮಾತನಾಡಿದ ಅವರು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಪೇದೆ ಅರ್ಚನಾ ಅವರ ಮಾನವೀಯತೆ ಕಾರ್ಯ ಮೆಚ್ಚುವಂತಹದ್ದು. ಅದ್ದರಿಂದ ಅವರಿಗೆ ಸನ್ಮಾನ ಮಾಡಿ ಸೀರೆ ಹಾಗೂ ಕೆಂಪೇಗೌಡ ಪದಕ ನೀಡಲಾಗಿದೆ. ಅಲ್ಲದೇ ಈ ಬಾರಿಯ ಕೆಂಪೇಗೌಡ ಪ್ರಶಸ್ತಿಯನ್ನ ಮೊದಲು ಅರ್ಚನಾ ಅವರಿಗೆ ನೀಡಲು ಪಕ್ಷಾತೀತವಾಗಿ ತೀರ್ಮಾನ ಮಾಡಿದ್ದೇವೆ. ಈಗಾಗಲೇ ಸಿಎಂ ಹಾಗೂ ಡಿಸಿಎಂ ಜೊತೆ ಈ ಕುರಿತು ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಏನಿದು ಘಟನೆ?
ಜೂನ್ 1 ರಂದು ಅನೈತಿಕ ಸಂಬಂಧಕ್ಕೋ ಅಥವಾ ಮದುವೆಗೆ ಮುಂಚೆ ಹುಟ್ಟಿದ್ದಕ್ಕೋ ತಾಯಿಯೊಬ್ಬಳು ತನ್ನ ಮಗುವನ್ನು ಪೊದೆಯೊಂದರ ಬಳಿ ಎಸೆದು ಹೋಗಿದ್ದಳು. ರಸ್ತೆಯಲ್ಲಿ ಓಡಾಡೋ ಜನ ಮಗುವಿನ ಅಳುವಿನ ಶಬ್ಧ ಕೇಳಿ ಮಗುವನ್ನು ರಕ್ಷಿಸಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಒಪ್ಪಿಸಿದ್ದರು.
Advertisement
ಹೊಟ್ಟೆ ಹಸಿವಿನಿಂದ ಅಳುತ್ತಿದ್ದ ಮಗುವಿನ ಕೂಗಿಗೆ ಕೆಲವು ದಿನಗಳ ಹಿಂದಷ್ಟೇ ಬಾಣಂತನ ಮುಗಿಸಿ ಕೆಲಸಕ್ಕೆ ಬಂದಿದ್ದ ಮಹಿಳಾ ಪೇದೆ ಅರ್ಚನಾ ಹಿಂದು-ಮುಂದು ನೋಡದೆ ಹಾಲುಣಿಸಿ ಮಗುವನ್ನು ಬಾಲವಿಹಾರಕ್ಕೆ ಕಳುಹಿಸಿದ್ದರು. ಆದರೆ ಕೆಲ ದಿನಗಳ ಬಳಿಕ ಬಾಲ ವಿಹಾರದಲ್ಲಿದ್ದ ಮಗು ಅನಾರೋಗ್ಯದಿಂದ ಮೃತಪಟ್ಟಿತ್ತು. ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅರ್ಚನಾ, ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ ಮುಂದಿನ ಜನ್ಮದಲ್ಲಾದ್ರೂ ಮಗುವಿಗೆ ಒಳ್ಳೆ ತಾಯಿ ಸಿಗಲಿ ಎಂದು ಹೇಳಿದ್ದರು. ಅಲ್ಲದೇ ಒಂದು ಬಾರಿ ಹಾಲುಣಿಸಿದ್ದ ಮಗುವಿನ ಸಾವನ್ನು ತನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾತನಾಡುತ್ತಲೇ, ದುಃಖ ತಡೆಯಲಾರದೆ ಅಳುತ್ತಾ ತೆರಳಿದ್ದರು.