ಬೆಂಗಳೂರು: ಈ ಬಾರಿ ಕರ್ನಾಟಕ ಚುನಾವಣೆ ದೇಶದ ಗಮನ ಸೆಳೆದಿತ್ತು. ಚುನಾವಣೆಯ ಇದ್ದ ಕಾರಣ ಜನವರಿಯಿಂದ ಮೇ ವರೆಗೆ ಚುನಾವಣಾ ಸುದ್ದಿಗಳು ಪ್ರಾಮುಖ್ಯತೆ ಪಡೆದಿದ್ದರೆ ನಂತರ ಸರ್ಕಾರದ ಭಿನ್ನಮತ, ಸಂಪುಟ ವಿಸ್ತರಣೆ ಕಸರತ್ತು ಸುದ್ದಿಗಳು ಹೆಚ್ಚು ಚರ್ಚೆಯಾಗುತಿತ್ತು. ಇದರ ಜೊತೆ ಕೊಡಗಿನಲ್ಲಿ ಪ್ರಕೃತಿ ವಿಕೋಪ ದುರಂತ ನಡೆದು ಸಾವಿರಾರು ಮಂದಿ ಸಂತ್ರಸ್ತರಾದರು. ಹೀಗಾಗಿ ಇಲ್ಲಿ ಈ ವರ್ಷ ಕರ್ನಾಟಕದಲ್ಲಿ ನಡೆದ ಟಾಪ್ ಸುದ್ದಿಗಳ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದೆ.
ಕರ್ನಾಟಕ ಚುನಾವಣೆ:
2018 ರಾಜ್ಯ ವಿಧಾನಸಭಾ ಚುನಾವಣೆ ಈ ಬಾರಿ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿತ್ತು. ದೇಶದ ಪ್ರಮುಖ ರಾಜ್ಯಗಳಲ್ಲಿ ಸತತವಾಗಿ ಗೆಲುವು ಪಡೆದಿದ್ದ ಬಿಜೆಪಿಗೆ ದಕ್ಷಿಣ ಭಾರತವನ್ನು ಪ್ರವೇಶ ಮಾಡಲು ಇದ್ದ ಏಕೈಕ ರಾಜ್ಯ ಕರ್ನಾಟಕವಾಗಿದ್ದ ಕಾರಣ ಪ್ರತಿಷ್ಠೆಯ ಕಣವಾಗಿದ್ದರೆ, ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್‍ಗೆ ರಾಜ್ಯವನ್ನು ಉಳಿಸಿಕೊಳ್ಳುವ ಮೂಲಕ ಮತ್ತೆ ರಾಷ್ಟ್ರದಲ್ಲಿ `ಮಹಾಘಟ ಬಂಧನ್’ಗೆ ಶಕ್ತಿ ತುಂಬುವ ಕೇಂದ್ರವಾಗಿತ್ತು. ಇದರ ಪರಿಣಾಮವಾಗಿ ರಾಹುಲ್ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಸಮಾವೇಶಗಳನ್ನು ನಡೆಸಿ ಪಕ್ಷದ ಪರ ಪ್ರಚಾರ ಕೈಗೊಂಡಿದ್ದರು. ಚುನಾವಣೆಯ ಅಂತಿಮ ಫಲಿತಾಂಶ ಬಂದಾಗ ಆಡಳಿತ ಪಕ್ಷವಾದ ಕಾಂಗ್ರೆಸ್ ಕೇವಲ 78 ಸ್ಥಾನ ಪಡೆದಿದ್ದರೆ, ಬಿಜೆಪಿ 104 ಹಾಗೂ ಜೆಡಿಎಸ್ 37 ಸ್ಥಾನ, ಬಿಎಸ್‍ಪಿ 1 ಸ್ಥಾನ ಪಡೆಯುವ ಅತಂತ್ರ ಪರಿಸ್ಥಿತಿ ನಿರ್ಮಾಣವಾಯಿತು.
ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದಂತೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪವರು ಸರ್ಕಾರ ರಚನೆ ಮಾಡಲು ಅವಕಾಶ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದರೆ, ಇತ್ತ ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಬಹಿರಂಗ ಬೆಂಬಲ ನೀಡುವ ಮೂಲಕ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾಯಿತು.
ರಾಜ್ಯಪಾಲರು 15 ದಿನಗಳ ಕಾಲ ಬಿಜೆಪಿಗೆ ಕಾಲಾವಕಾಶ ನೀಡಿದರೆ, ಇತ್ತ ಇದನ್ನು ವಿರೋಧಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ರಾಜ್ಯಪಾಲರ ಆದೇಶದ ಸಮಯವನ್ನು ಕಡಿಮೆ ಮಾಡಿದರು. ಇದರ ನಡುವೆಯೇ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದ್ದ ಯಡಿಯೂರಪ್ಪ ಅವರು ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇತ್ತ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್, ಹೋಟೆಲ್‍ಗಳಲ್ಲಿ ತಂಗುವಂತೆ ಮಾಡಿ ಆಪರೇಷನ್ ಕಮಲ ವಿಫಲ ಮಾಡಿದರು. ಅಂತಿಮವಾಗಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಹುಮತ ಸಾಬೀತು ಪಡಿಸುವ ಮೂಲಕ ಸರ್ಕಾರ ರಚನೆ ಮಾಡಿತು.
ಸುಳ್ವಾಡಿ ದುರಂತ : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ಡಿಸೆಂಬರ್ 14 ರ ಶುಕ್ರವಾರ ಗೋಪುರದ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದ ಬಳಿಕ, ಭಕ್ತರು ಪ್ರಸಾದದ ರೂಪದಲ್ಲಿ ರೈಸ್ ಬಾತ್ ಸೇವಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ರೈಸ್ ಬಾತ್ ಸೇವಿಸಿದ್ದ 100 ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯರು ಕೂಡಲೇ 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ಅಸ್ವಸ್ಥರನ್ನು ಆಸ್ಪತ್ರೆಗೆ ರವಾನಿಸಿದ್ದರು. ಪ್ರಸಾದದಲ್ಲಿ ಆರ್ಗಾನ್ ಪಾಸ್ಫರಸ್ ಕಾಂಪೌಂಡ್ ಮೋನೋಕ್ರೋಟೋಫೋಸ್ ಎಂಬ ಕ್ರಿಮಿನಾಶಕ ಮಿಶ್ರಣವಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ ವರದಿ ನೀಡಿತ್ತು. ಈ ಕ್ರಿಮಿನಾಶಕ ಮಿಶ್ರಣ ಮಾಡಿದ್ದ ಪ್ರಸಾದ ಸೇವಿಸಿದ್ದರ ಪರಿಣಾಮ ಇದುವರೆಗೂ 16 ಮಂದಿ ಮೃತಪಟ್ಟಿದ್ದರು. ಘಟನೆ ನಡೆದ 6 ದಿನಗಳ ಬಳಿಕ ಪ್ರಕರಣಕ್ಕೆ ಕಾರಣರಾಗಿದ್ದ ಪ್ರಮುಖ 4 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕನಗನಮರಡಿ ಬಸ್ ದುರಂತ: ಜಿಲ್ಲೆಯ ಪಾಂಡವಪುರದ ಕನಗನಮರಡಿಯಲ್ಲಿ ನವೆಂಬರ್ 24 ರಂದು ನಡೆದ ಬಸ್ ದುರಂತ ಪ್ರಕರಣ 30 ಮಂದಿಯನ್ನು ಬಲಿ ಪಡೆಯಿತು. ಚಾಲಕನ ನಿಯಂತ್ರಣ ತಪ್ಪಿದ ಬಸ್ ಕನಗನಮರಡಿ ವಿಸಿ ನಾಲೆಗೆ ಉರುಳಿತ್ತು. ಇದರಿಂದ ಬಸ್ಸಿನಲ್ಲಿದ್ದ 30 ಮಂದಿ ಜಲಸಮಾಧಿಯಾದರು. ಬಸ್ ಚಾಲಕ ಸೇರಿದಂತೆ ಇಬ್ಬರು ಪ್ರಯಾಣಿಕರು ಮಾತ್ರ ಜೀವ ರಕ್ಷಿಸಿಕೊಂಡಿದ್ದರು. ನಾಲೆಗೆ ತಡೆಗೋಡೆ ಇಲ್ಲದೆ ಇರುವುದು ಹಾಗೂ ಬಸ್ ಸೇವೆಗೆ ಯೋಗ್ಯವಲ್ಲದೇ ಇರುವುದು ದುರಂತಕ್ಕೆ ಪ್ರಮುಖ ಕಾರಣವಾಗಿತ್ತು.
ಮೇಕೆದಾಟು ಯೋಜನೆ: ಮೇಕೆದಾಟು ಯೋಜನೆಗೆ ಜನವರಿ 16 ರಂದು ರಾಜ್ಯ ಸರ್ಕಾರ ಸಂಪುಟ ತಾತ್ವಿಕ ಒಪ್ಪಿಗೆ ನೀಡಿತು. ಈ ಯೋಜನೆ ಮುಂದುವರಿಸಲು ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿತ್ತು. ಕೇಂದ್ರ ಸರ್ಕಾರ ಅನುಮತಿ ನೀಡಿದ್ದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿ ಈಗ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಕರ್ನಾಟಕ ಸಂಸದರು ಡಿಸೆಂಬರ್ ನಲ್ಲಿ ದೆಹಲಿಯ ಡಿವಿಎಸ್ ನಿವಾಸದಲ್ಲಿ ಸಭೆ ನಡೆಸಿ ಒಗ್ಗಟ್ಟಿನಿಂದ ಹೋರಾಟ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ.
ಲಿಂಗಾಯತ ಧರ್ಮ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿದ್ದ ಲಿಂಗಾಯತ ಧರ್ಮ ಹೋರಾಟ ಸಿಎಂ ಸಿದ್ದರಾಮಯ್ಯ ಅವರ ಆಡಳಿತ ಅವಧಿಯಲ್ಲಿ ಬೃಹತ್ ಮಟ್ಟದಲ್ಲಿ ನಡೆಯಿತು. ರಾಜ್ಯ ಸರ್ಕಾರವೂ ಈ ಕುರಿತು ಸಮಿತಿ ನೇಮಕ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಕಾಂಗ್ರೆಸ್ ಪಕ್ಷ ಕೆಲ ನಾಯಕರು ಪ್ರತ್ಯೇಕ ಧರ್ಮ ರಚನೆ ಮುಂದಾಳತ್ವ ವಹಿಸಿ ಚುನಾವಣೆ ಎದುರಿಸಿದ್ದರು, ಇದರದಲ್ಲಿ ಅಂದಿನ ಜಲಸಂಪ್ಮೂಲ ಸಚಿವ ಎಂ ಬಿ ಪಾಟೀಲ್ ಬಿಟ್ಟು ಉಳಿದ ಎಲ್ಲಾ ನಾಯಕರು ಸೋಲುಂಡಿದ್ದರು. ಬಳಿಕ ನಡೆದ ಬೆಳವಣಿಗೆಗಳಲ್ಲಿ ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರತ್ಯೇಕ ಧರ್ಮ ವಿಚಾರವಾಗಿ ತಪ್ಪು ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ಕುರಿತಂತೆ ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಮಡಿಕೇರಿ ಜಲ ಪ್ರಳಯ: ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಪಡೆದಿದ್ದ ಕೊಡಗು ಈ ಬಾರಿ ಮಹಾ ಮಳೆಯ ಹೊಡೆತಕ್ಕೆ ತತ್ತರಿಸಿತ್ತು. ಕಾಡು ಕಡಿದು ರೆಸಾರ್ಟ್ ನಿರ್ಮಾಣ, ಭೂಮಿಯ ಬಳಕೆಯಲ್ಲಾಗಿರುವ ಬದಲಾವಣೆ, ಅವೈಜ್ಞಾನಿಕವಾಗಿ ಹೋಂ ಸ್ಟೇಗಳ ನಿರ್ಮಾಣ, ನಿರಂತರವಾಗಿ ಸುರಿದ ಭಾರೀ ಮಳೆ, ಅರಣ್ಯ ನಾಶ ಮೊದಲಾದ ಕಾರಣಗಳಿಂದ ಕೊಡಗಿನಲ್ಲಿ ಭೂಕುಸಿತ ಉಂಟಾಗಿ ಜಲ ಪ್ರಳಯ ಸೃಷ್ಟಿಯಾಗಿತ್ತು. ಕೊಡಗಿನ ನೋವಿಗೆ ಮೀಡಿದ ಕನ್ನಡ ಹೃದಯಗಳು ಸಹಾಯ ಹಸ್ತವನ್ನು ಚಾಚಿ ಜನರಿಗೆ ನೆರವು ನೀಡಿದ್ದರು. ಹಲವು ಸಂಘ ಸಂಸ್ಥೆಗಳು ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರವೂ ಕೂಡ ಪ್ರವಾಹ ಸಂತ್ರಸ್ತರ ನೆರವು ಘೋಷಿಸಿತ್ತು. ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆ 87 ವರ್ಷದ ಹಿಂದಿನ ದಾಖಲೆಯನ್ನು ಅಳಿಸಿಹಾಕಿತ್ತು. 1931ರಲ್ಲಿ ಆಗಸ್ಟ್ ತಿಂಗಳಿನಲ್ಲಿ ಒಟ್ಟು 1,559 ಮಿ.ಮೀ ಮಳೆಯಾಗಿದ್ದರೆ ಆಗಸ್ಟ್ ನಲ್ಲಿ 1,675 ಮಿ.ಮೀ(ಆಗಸ್ಟ್ 21ರ ಅಂತ್ಯಕ್ಕೆ) ಮಳೆಯಾಗಿತ್ತು ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮಾಹಿತಿ ನೀಡಿತ್ತು.
ದೀಪಕ್ ರಾವ್ ಹತ್ಯೆ: ವರ್ಷದ ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆ, ಇದರ ಬೆನ್ನಲ್ಲೇ ದೀಪಕ್ ಹತ್ಯೆಗೆ ಪ್ರತೀಕಾರವಾಗಿ ಮಂಗಳೂರಿನಲ್ಲಿ ಬಶೀರ್ ಅವರನ್ನು ಕೊಲೆ ಮಾಡಲಾಗಿತ್ತು. ಹಿಂದೂ ಕಾರ್ಯಕರ್ತರ ಹತ್ಯೆ ವಿಚಾರವನ್ನು ಬಿಜೆಪಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಆಸ್ತ್ರವನ್ನಾಗಿ ಪ್ರಯೋಗಿಸಿ ಪ್ರಚಾರ ನಡೆಸಿತ್ತು. ಹಿಂದೂ ಕಾರ್ಯಕರ್ತರ ಹತ್ಯೆಯನ್ನು ತಡೆಯಲು ಸಿದ್ದರಾಮಯ್ಯ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಸೋತಿದೆ ಎನ್ನುವ ವಿಶ್ಲೇಷಣೆ ಕೇಳಿ ಫಲಿತಾಂಶ ಬಳಿಕ ಕೇಳಿ ಬಂದಿತ್ತು.
ಗೌರಿ ಲಂಕೇಶ್ ಆರೋಪಿಗಳ ಬಂಧನ: ಯಾವುದೇ ಸಾಕ್ಷ್ಯಗಳು ಸಿಗದೇ ಪ್ಲಾನ್ ಮಾಡಿ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಕೊನೆಗೂ ಎಸ್‍ಐಟಿ ಬಂಧಿಸಿತ್ತು. ಕೋಕಾ ಅಡಿ ಪ್ರಕರಣ ದಾಖಲಿಸಿದ್ದ ಎಸ್‍ಐಟಿ ಒಟ್ಟು 18 ಮಂದಿಗಳನ್ನು ಬಂಧಿಸಿ 9,235 ಪುಟಗಳಿರುವ ಚಾರ್ಜ್ ಶೀಟನ್ನು ಕೋಕಾ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಪ್ರಧಾನ ಸಂಚುಕೋರ ಅಮುಲ್ ಕಾಳೆ ಎ1 ಆರೋಪಿಯಾಗಿದ್ದರೆ, ಶೂಟರ್ ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ ಎ2 ಆರೋಪಿಯಾಗಿದ್ದಾನೆ.
ಮಹದಾಯಿ ಐತೀರ್ಪು: ಮಹದಾಯಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಆಗಸ್ಟ್ 14 ರಂದು ನ್ಯಾ. ಜೆ.ಎಂ.ಪಾಂಚಾಲ್ ನೇತೃತ್ವದ ನ್ಯಾಯಾಧಿಕರಣ ಐತೀರ್ಪು ಪ್ರಕಟಿಸಿತ್ತು. ಕುಡಿಯುವ ನೀರಿಗಾಗಿ ಕೇವಲ 5.5 ಟಿಎಂಸಿ ಸೇರಿದಂತೆ ಒಟ್ಟು ಕರ್ನಾಟಕಕ್ಕೆ ಒಟ್ಟು 13.7 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿತ್ತು. ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ಮಹದಾಯಿ ನದಿಯಲ್ಲಿ ವಾರ್ಷಿಕವಾಗಿ ಲಭ್ಯವಿರುವ 188.06 ಟಿಎಂಸಿ ನೀರಿನಲ್ಲಿ 147 ಟಿಎಂಸಿ ನೀರನ್ನು ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗಲು ಬಿಟ್ಟಿರುವ ಮಹದಾಯಿ ಜಲವಿವಾದ ನ್ಯಾಯಾಧಿಕರಣ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಕರ್ನಾಟಕ ದೂರಿದೆ. ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಯಾವುದೇ ನದಿಯ ನೀರನ್ನು ನದಿಪಾತ್ರದ ರಾಜ್ಯಗಳಿಗೆ ಹಂಚಿಕೆ ಮಾಡುವಾಗ ಅನುಸರಿಸಬೇಕಾದ ‘ನ್ಯಾಯಸಮ್ಮತ ಹಂಚಿಕೆ’ ಸೂತ್ರವನ್ನು ಮಹದಾಯಿ ಜಲವಿವಾದ ನ್ಯಾಯಾಧಿಕರಣ ಅನುಸರಿಸಿಲ್ಲ ಎನ್ನುವುದನ್ನು ಕರ್ನಾಟಕ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv