ರಾಜ್ಯಪಾಲರ ಅಂಗಳದಲ್ಲೀಗ ಸರ್ಕಾರದ ಚೆಂಡು: ಯಾವ ಸಮಯದಲ್ಲಿ ಏನಾಯ್ತು?

Public TV
4 Min Read
SIDDARAMAIAH AND BS YEDDYURAPPA

ಬೆಂಗಳೂರು: ಕರ್ನಾಟಕ ಕುರುಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಅತಂತ್ರ ಅಸೆಂಬ್ಲಿ ನಿರ್ಮಾಣವಾಗಿದೆ. ಮತ ಎಣಿಕೆ ಆರಂಭದಲ್ಲಿ ಕ್ಲಿಯರ್ ಮೆಜಾರಿಟಿಯತ್ತ ಬಿಜೆಪಿಯ ನಾಗಾಲೋಟ ಇತ್ತು. ಆದರೆ, ಮಧ್ಯಾಹ್ನದ ಹೊತ್ತಿಗೆ ಚಿತ್ರಣವೇ ಬದಲಾಗಿ ಹೋಯ್ತು.

ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಸರ್ಕಾರ ರಚನೆಗೆ ಬೇಕಾದಷ್ಟು ನಂಬರ್ ಸಿಗಲಿಲ್ಲ. ಆಡಳಿತಾರೂಢ ಕಾಂಗ್ರೆಸ್‍ಗೆ ತೀವ್ರ ಮುಖಭಂಗವಾದರೂ, ಬಿಜೆಪಿಗೆ ಬಹುಮತ ಸಿಕ್ಕಿಲ್ಲವಲ್ಲ ಅನ್ನೋದು ಕಾಂಗ್ರೆಸ್ ಪಾಲಿಗೆ ನಿರಾಳ. ಆದರೆ, ರಾಷ್ಟ್ರೀಯ ಪಕ್ಷಗಳು ಎಷ್ಟೇ ಬಲಶಾಲಿಯಾದರೂ ಪ್ರಾದೇಶಿಕ ಪಕ್ಷಗಳಿಗೆ ತನ್ನದೇ ಆದ ಪವರ್ ಇದೆ ಅನ್ನೋದು ಸಾಬೀತಾಗಿರೋದ್ರಿಂದ ಜೆಡಿಎಸ್ ಈಗ ಬೀಗ್ತಿದೆ.

ಫಲಿತಾಂಶದಲ್ಲಿ ಕಿಂಗ್ ಆಗದಿದ್ದರೂ ಸರ್ಕಾರ ರಚನೆ ವಿಷಯದಲ್ಲಿ ಕಿಂಗ್‍ಮೇಕರ್ ಆಗಿದೆ. ಇನ್ನು, ಸಿದ್ದರಾಮಯ್ಯ ನೀಚ ಅಂತ ದೇವೇಗೌಡರೂ ಅಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಅಂತ ಸಿದ್ದರಾಮಯ್ಯ ಅವರೂ ಬೈದಾಡಿಕೊಂಡಿದ್ದರು. ಆದ್ರೀಗ, ಕಾಲ ರಾಜಕೀಯ ನೋಡಿ ಒಂದು ಕಾಲದ ಗುರು-ಶಿಷ್ಯರಾದ ದೇವೇಗೌಡ್ರು-ಸಿದ್ದರಾಮಯ್ಯ ಅಷ್ಟು ಕೆಸರೆರಚಾಡಿಕೊಂಡರೂ ಈಗ ಒಂದೇ ಮುಖಾಮುಖಿ ಆಗ್ತಿದ್ದಾರೆ. ಎಲ್ಲಾ ಸುಸೂತ್ರವಾದರೆ ಪ್ರಮಾಣ ವಚನ ಕಾರ್ಯಕ್ರಮದಲ್ಲೂ ಒಂದೇ ವೇದಿಕೆಯಲ್ಲಿ ಇಬ್ಬರೂ ಕಾಣಿಸಿಕೊಳ್ಳಲಿದ್ದಾರೆ.

ಅತಂತ್ರ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜಭವನ ಭರ್ಜರಿ ಚಟುಟಿಕೆಗಳ ತಾಣವಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳ ನಾಯಕರು ರಾಜಭವನದ ಕದ ತಟ್ಟಿದ್ದಾರೆ. ಮೊದಲ ಪ್ರಯತ್ನವಾಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ರಾಜಭವನಕ್ಕೆ ಬಂದು ಅನುಮತಿ ಸಿಗದೇ ಬರಿಗೈಲಿ ವಾಪಸ್ ಆದ್ರು. ಬಳಿಕ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ರು. ಆದ್ರೆ, ಹೊಸ ಸರ್ಕಾರ ರಚನೆಯಾಗೋವರೆಗೂ ಹಂಗಾಮಿಯಾಗಿ ಮುಂದುವರಿಯುಂತೆ ಸೂಚಿಸಿದ್ರು.

ಇವರ ಬೆನ್ನಲ್ಲೇ ಕುಮಾರಸ್ವಾಮಿ ಸಹ ರಾಜ್ಯಪಾಲರ ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಮೇಶ್ವರ್, ಸಿದ್ದರಾಮಯ್ಯ-ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರ ರಚನೆಗೆ ಎರಡೂ ಪಕ್ಷಗಳ ನಾಯಕರು ಸಮ್ಮತಿಸಿದ್ದೇವೆ ಅಂದ್ರು. ಇನ್ನು, ಬಿಜೆಪಿ ಸಹ ಹಿಂದುಳಿಯಲಿಲ್ಲ. ಸರ್ಕಾರ ರಚನೆಗೆ ಬಿಜೆಪಿಯನ್ನ ಆಹ್ವಾನಿಸುವಂತೆ ಯಡಿಯೂರಪ್ಪ ಸಹ ರಾಜಭವನದ ಕದ ತಟ್ಟಿದ್ರು. ಬಹುಮತ ಸಾಬೀತಿಗೆ ಎರಡು ದಿನಗಳ ಅವಕಾಶ ಕೋರಿದ್ರು. ಈ ಮಧ್ಯೆ, ನಾಳೆ ರೆಸಾರ್ಟ್ ರಾಜಕೀಯವೂ ಜೋರಾಗಲಿದೆ.

ಜಯನಗರ, ರಾಜರಾಜೇಶ್ವರಿ ನಗರ ಬಿಟ್ಟು 222 ಕ್ಷೇತ್ರಗಳಿಗೆ ಮತದಾನ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‍ನ ಫಲಿತಾಂಶಕ್ಕೆ ತಡೆ ನೀಡಲಾಗಿದೆ.

ಯಾರು ಎಷ್ಟು ಸ್ಥಾನ?
ಬಿಜೆಪಿ 103, ಕಾಂಗ್ರೆಸ್ 78, ಜೆಡಿಎಸ್ 38, ಇತರೆ 02 ಸ್ಥಾನಗಳನ್ನು ಗೆದ್ದಿದೆ.

 

SEAT NO

ಯಾರಿಗೆ ಎಷ್ಟು ವೋಟ್ ಬಿದ್ದಿದೆ?
ರಾಜ್ಯದಲ್ಲಿ ಈ ಬಾರಿ 70ಕ್ಕೂ ಹೆಚ್ಚಿನ ಪಕ್ಷಗಳು ಸ್ಪರ್ಧೆ ಮಾಡಿದ್ದವು. ಹೀಗಾಗಿ ಪಕ್ಷಗಳು ಪಡೆದ ಶೇಖಡವಾರು ಮತಗಳನ್ನು ನೀಡಲಾಗಿದೆ.

* ಕಾಂಗ್ರೆಸ್ – 37.09%
* ಬಿಜೆಪಿ – 36.02%
* ಜೆಡಿಎಸ್ – 18.04%
* ಪಕ್ಷೇತರರು – 3.9%
* ಬಿಎಸ್‍ಪಿ – 0.3%
* ಎಂಇಪಿ – 0.3%
* ಬಿಪಿಜೆಪಿ – 0.2%
* ಸಿಪಿಎಂ – 0.2%
* ಸ್ವರಾಜ್ ಇಂಡಿಯಾ- 0.2%
* ಕೆಪಿಜೆಪಿ – 0.2%
* ನೋಟಾ – 0.9%

VOTE SHARE

 

ಯಾವ ಸಮಯದಲ್ಲಿ ಏನಾಯ್ತು?
* ಬೆಳಗ್ಗೆ 7.30: ಮತ ಎಣಿಕೆ ಆರಂಭ
* ಬೆಳಗ್ಗೆ 8 ಗಂಟೆ: ಆರಂಭಿಕ ಫಲಿತಾಂಶದಲ್ಲಿ ಕಾಂಗ್ರೆಸ್‍ಗೆ ಮುನ್ನಡೆ
* ಬೆಳಗ್ಗೆ 8.30: ಬಿಜೆಪಿಗೆ ಆರಂಭಿಕ ಮುನ್ನಡೆ ಆರಂಭ
* ಬೆಳಗ್ಗೆ 8.45: 50ರ ಗಡಿ ದಾಟಿದ ಕಾಂಗ್ರೆಸ್, ಜೆಡಿಎಸ್

* ಬೆಳಗ್ಗೆ 9.30: 100ರ ಗಡಿ ದಾಟಿದ ಬಿಜೆಪಿ
* ಬೆಳಗ್ಗೆ 9.45: ಖಾತೆ ತೆರೆದ ಬಿಜೆಪಿ, ಮೂಡಬಿದ್ರೆಯಲ್ಲಿ ಗೆಲುವು
* ಬೆಳಗ್ಗೆ 11 ಗಂಟೆ: 114 ಸ್ಥಾನಗಳಲ್ಲಿ ಮುನ್ನಡೆ – ಪೂರ್ಣ ಬಹುಮತದ ಬಿಜೆಪಿ

* ಬೆಳಗ್ಗೆ 11.45: ಬಹುಮತ್ತದತ್ತ ಮುನ್ನಡೆದಿದ್ದ ಬಿಜೆಪಿಗೆ ಆಘಾತ – ಅಲ್ಪಮತಕ್ಕೆ ಕುಸಿತ
(ರಾಜ್ಯ ರಾಜಕಾರಣದಲ್ಲಿ ಅತಂತ್ರ ಸರ್ಕಾರದ ಚರ್ಚೆ ಶುರು)
* ಮಧ್ಯಾಹ್ನ 12.20: ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಸೋಲು, ಬದಾಮಿಯಲ್ಲಿ ಪ್ರಯಾಸದ ಗೆಲುವು
* ಮಧ್ಯಾಹ್ನ 2 ಗಂಟೆ : ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಬಗ್ಗೆ ಚರ್ಚೆ ಶುರು
* ಮಧ್ಯಾಹ್ನ 2.30: ಜೆಡಿಎಸ್‍ಗೆ ಬೇಷರತ್ ಬೆಂಬಲ ಘೋಷಿಸಿದ ಸಿಎಂ, ಪರಮೇಶ್ವರ್

* ಮಧ್ಯಾಹ್ನ 2.40 : ಕಾಂಗ್ರೆಸ್‍ನಿಂದ ಜೆಡಿಎಸ್‍ಗೆ ಬೆಂಬಲ ಸೂಚಿಸಿ ರಾಜ್ಯಪಾಲರಿಗೆ ಪತ್ರ
* ಮಧ್ಯಾಹ್ನ 3 ಗಂಟೆ: ದೇವೇಗೌಡರ ಮನೆಗೆ ಕುಮಾರಸ್ವಾಮಿ ಭೇಟಿ
* ಮಧ್ಯಾಹ್ನ 4 ಗಂಟೆ: ರಾಜ್ಯಪಾಲರ ಭೇಟಿಯಾಗಿ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಕೆ
* ಮಧ್ಯಾಹ್ನ 4 ಗಂಟೆ: ಬಿಜೆಪಿ ಕಚೇರಿಯಲ್ಲಿ ಯಡಿಯೂರಪ್ಪ ಸುದ್ದಿಗೋಷ್ಠಿ

* ಮಧ್ಯಾಹ್ನ 4:15 : ಕಾಂಗ್ರೆಸ್ ಬೆಂಬಲ ಸ್ವೀಕರಿಸಿದ ಜೆಡಿಎಸ್, ಕುಮಾರಸ್ವಾಮಿ ಸಿಎಂ ಆಗಲು ಒಪ್ಪಿಗೆ
* ಸಂಜೆ 5 ಗಂಟೆ: ರಾಜ್ಯಪಾಲರನ್ನು ಭೇಟಿಯಾಗಿ ಹಕ್ಕು ಮಂಡಿಸಿದ ಯಡಿಯೂರಪ್ಪ
* ಸಂಜೆ 5.30: ರಾಜ್ಯಪಾಲರ ಭೇಟಿಯಾದ ಎಚ್‍ಡಿಕೆ- ಸಿಎಂ, ಸರ್ಕಾರ ರಚನೆಗೆ ಹಕ್ಕು ಮಂಡನೆ
* ರಾತ್ರಿ 8 ಗಂಟೆ: ದೆಹಲಿಯಲ್ಲಿ ಬಿಜೆಪಿ ಸಂಭ್ರಮಾಚರಣೆ, ಮೋದಿ-ಅಮಿತ್ ಷಾ ಮಾತು, ಕಾಂಗ್ರೆಸ್ ಟೀಕೆ

Share This Article