ಕುಚುಕು ದೋಸ್ತಿಗಳು ಅರಳಿಸಿದ ಕಮಲದ `ಮೊಗ್ಗು’ ಯಾರ ಮುಡಿಗೆ..?

Public TV
7 Min Read
shivamogga 2

ಹೈ ವೋಲ್ಟೇಜ್ ಮ್ಯಾಚನ್ನ ಸೀಟ್ ತುದೀಲಿ ಕೂತು ನೋಡಿದ ಹಾಗಿನ ಮಜಾ ಕೊಡುತ್ತೆ ಶಿವಮೊಗ್ಗದ ರಾಜಕಾರಣ. ಇಲ್ಲಿನ ಜನರ ನರ ನಾಡಿಗಳಲ್ಲಿ ರಕ್ತದ ಜೊತೆಗೆ ರಾಜಕೀಯವೂ ಬೆರೆತು ಹೋಗಿದೆ. ಕಡಿದಾಳ್ ಮಂಜಪ್ಪ, ಎಸ್. ಬಂಗಾರಪ್ಪ, ಶಾಂತವೇರಿ ಗೋಪಾಲ ಗೌಡರಂತಹಾ ದಿಗ್ಗಜ ರಾಜಕೀಯ ಪಟುಗಳ ತವರೂರು ಶಿವಮೊಗ್ಗ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೆ.ಎಸ್ ಈಶ್ವರಪ್ಪ, ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ನವರಂತಹಾ ದಿಗ್ಗಜರ ಊರು. ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪನವರ ರಾಜಕೀಯ ದಾಯಾದಿತ್ವವನ್ನ ನೋಡಿರೋ ಊರೇ ಶಿವಮೊಗ್ಗ. ಶಿವಮೊಗ್ಗ ಅನ್ನೋ ಸಾಮ್ರಾಜ್ಯದಲ್ಲಿ ಯಾವ ಪಕ್ಷ ತನ್ನ ಹಿಡಿತ ಸಾಧಿಸುತ್ತೆ ಅನ್ನೋದೇ ಕದನ ಕಣದ ಕುತೂಹಲವನ್ನ ಹೆಚ್ಚಿಸಿದೆ.

ಶಿವಮೊಗ್ಗೆಯ ಹೆಸರಿನ ಹಿಂದಿದೆ ಸಿಹಿಯಾದ ಕಥೆ..!
ಶಿವಮೊಗ್ಗ ಹೆಸರಿನ ಹಿಂದೆ ಒಂದು ರೋಚಕ ಇತಿಹಾಸವಿದೆ. ಶಿವಮುಖ ಅನ್ನೋ ಹೆಸರು ಮುಂದೆ ಸಿಹಿ ಮೊಗೆ ಅಂದ್ರೆ ಸಿಹಿಯಾದ ಮೊಗ್ಗಾಗಿ ಅರಳಿದ್ದೇ ಶಿವಮೊಗ್ಗ ಅನ್ನೋ ಸುಂದರ ಊರು. ಮೌರ್ಯ ಸಾಮ್ರಾಜ್ಯದ ಕುರುಹುಗಳೂ, ಚಾಲುಕ್ಯ, ಗಂಗರು, ರಾಷ್ಟ್ರಕೂಟರು, ಹೊಯ್ಸಳರ ಹೆಜ್ಜೆ ಗುರುತುಗಳೂ ಇಲ್ಲಿ ಆಳವಾಗಿ ಬೇರೂರಿವೆ. ಶಿವಮೊಗ್ಗೆಯ ಇತಿಹಾಸವೇ ರೋಚಕ, ರೋಮಾಂಚಕ.

ಮೊಗೆದಷ್ಟೂ ಮುಗಿಯಲ್ಲ ಶಿವಮೊಗ್ಗೆಯ ಪ್ರವಾಸೀ ತಾಣಗಳು
ಐದು ನದಿಗಳ ಹರಿವನ್ನು ಹೊಂದಿರುವ ಶಿವಮೊಗ್ಗ ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿದ್ದು ಕರ್ನಾಟಕ ಆಹಾರದ ತೊಟ್ಟಿಲು ಮತ್ತು ಕರ್ನಾಟಕದ ಅಕ್ಕಿಯ ಕಣಜ ಎಂಬ ಹೆಸರು ಪಡೆದಿದೆ. ಸಹ್ಯಾದ್ರಿ ಬೆಟ್ಟಗಳ ಸಾಲಿನಿಂದಾಗಿ ಶಿವಮೊಗ್ಗೆಯಲ್ಲಿ ಹರಿಯುವ ನದಿಗಳು ವರ್ಷಪೂರ್ತಿ ಮಳೆಯನ್ನು ಕಂಡು ತುಂಬಿ ಹರಿಯುತ್ತವೆ. ಸ್ಥಳೀಯರು ಶಿವಮೊಗ್ಗವನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯುತ್ತಾರೆ. ಇಲ್ಲಿ ದೇವಸ್ಥಾನಗಳು, ಬೆಟ್ಟಗುಡ್ಡಗಳು, ತರಕಾರಿ ಬೆಳೆಯುವ ಸ್ಥಳಗಳು ಮತ್ತು ಭಾರತದಲ್ಲಿಯೇ ಅತಿ ಎತ್ತರದ ಪ್ರಸಿದ್ದ ಜೋಗ ಜಲಪಾತ ಇಲ್ಲಿದೆ.

shivamogga 1

ಪ್ರವಾಸಿಗರಿಗೆ ಅಚ್ಚರಿಗಳ ತೊಟ್ಟಿಲು
ಆಗುಂಬೆಯಾ ಪ್ರೇಮ ಸಂಜೆಯಾ ಅನ್ನೋ ಹಾಡಿಗೆ ಸ್ಪೂರ್ತಿ ನೀಡಿದ ಸೂರ್ಯಾಸ್ತದ ಬೆಡಗಿ ಇಲ್ಲೇ ಇರೋದು. ಶಿವಮೊಗ್ಗದಿಂದ 90 ಕಿಲೋ ಮೀಟರ್ ದೂರದಲ್ಲಿದೆ ಈ ಸುಂದರಾತಿ ಸುಂದರ ತಾಣ. ಗಾಜನೂರಿನ ಬಳಿಯಿರೋ ತುಂಗಾ ಜಲಾಶಯ, ಕುಪ್ಪಳ್ಳಿಯ ಕುವೆಂಪು ಮನೆ, ತಾವರೆಕೊಪ್ಪ ಸಿಂಹಧಾಮ, ಬಳುಕೋ ಶ್ವೇತ ಸುಂದರಿ ಧರೆಗಿಳಿದಂತೆ ಕಾಣೋ ಜೋಗ ಜಲಪಾತ, ಲಿಂಗನಮಕ್ಕಿ ಅಣೆಕಟ್ಟು, ಕೊಡಚಾದ್ರಿ ಬೆಟ್ಟ, ಸಿರಿ ಮನೆ ಜಲಪಾತ ಹೀಗೆ ಪ್ರವಾಸಿಗರ ಮನಸ್ಸಿಗೆ ಮುದ ಕೊಡೋ ಸ್ಥಳಗಳು ಲೆಕ್ಕವಿಲ್ಲದಷ್ಟಿವೆ.

ಈಸೂರಿನ ಕದನ ಕಲಿಗಳು ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದು ಹೇಗೆ ಗೊತ್ತಾ..?
ಈಸೂರಿನ ಸ್ವಾತಂತ್ರ್ಯ ಕಲಿಗಳು ಬ್ರಿಟೀಷರ ವಿರುದ್ಧ ತೊಡೆ ತಟ್ಟಿ ಸಮರಾಹ್ವಾನ ಕೊಟ್ಟಿದ್ದೂ ಇದೇ ಮಣ್ಣಿನಲ್ಲಿ. ಏಸೂರು ಕೊಟ್ಟರೂ ಈಸೂರು ಕೊಡೆವು ಅನ್ನೋ ಎಂಬ ಘೋಷಣೆಯೊಂದಿಗೆ ಸಣ್ಣ ಸಣ್ಣ ಹುಡುಗರಿಂದ ಶುರುವಾದ ಈಸೂರು ಸ್ವಾತಂತ್ರ್ಯ ಚಳವಳಿ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಮುದ್ರಿತಗೊಂಡಿವೆ. ಮಾನಪ್ಪ ನಾಯಕರ ನೇತೃತ್ವದಲ್ಲಿ ಇಡೀ ಜಿಲ್ಲೆಗೆ ಜಿಲ್ಲೆಯ ಜನ್ರೇ ರೊಚ್ಚಿಗೆದ್ದಿದ್ರು. ಕರನಿರಾಕರಣೆ, ಉಪ್ಪಿನ ಮೇಲಿನ ತೆರಿಗೆ, ಅರಣ್ಯ ಹೀಗೆ ಅನೇಕ ವಿಷಯಗಳನ್ನಿಟ್ಕೊಂಡು ಬ್ರಿಟೀಷರ ವಿರುದ್ಧ ದೊಡ್ಡ ಮಟ್ಟದ ಜನಾಂದೋಲನವೇ ನಡೆದು ಹೋಯ್ತು. ಜನರನ್ನ ಸಂಘಟಿಸೋಕೆ ಹರಿಕಥೆ, ಕೀರ್ತನೆ ಹಾಗೂ ಹಾಡುಗಳು ನೆರವಾದ್ವು. ಏಸೂರ ಕೊಟ್ಟರೂ ಈಸೂರ ಬಿಡೆವು ಅನ್ನೋ ಗೀತೆ ಇಂದಿಗೂ ಮಾರ್ದನಿಸುತ್ತದೆ.

shivamogga 3 1

ಶಿವಮೊಗ್ಗದ ರಂಗೀನ್ ರಾಜಕಾರಣಕ್ಕೆ ಇದೆ ಭರ್ಜರಿ ಇತಿಹಾಸ..!!

ಹೋರಾಟ ಹಾಗೂ ರಾಜಕಾರಣವನ್ನ ತನ್ನಲ್ಲಿ ಮೊದಲಿನಿಂದಲೂ ಹೊತ್ತುಕೊಂಡು ಬಂದ ಶಿವಮೊಗ್ಗ ಸ್ಟಾರ್ ಕ್ಷೇತ್ರವೂ ಹೌದು. ಕರ್ನಾಟಕ ಚುನಾವಣೆ ಅಂದ್ರೆ ಜನರ ಕುತೂಹಲ ಮೊದಲು ಹೋಗೋದೇ ಶಿವಮೊಗ್ಗೆಯತ್ತ. ಹಾಗಾದ್ರೆ, ಶಿವಮೊಗ್ಗದ ರಾಜಕೀಯ ಚಿತ್ರಣ ಹೇಗಿದೆ ಅನ್ನೋದನ್ನ ನೋಡೋಣ ಬನ್ನಿ. ಕಾಂಗ್ರೆಸ್ ನ ಏಳು ಸುತ್ತಿನ ಕೋಟೆಯನ್ನ ಅಂದ ಕಾಲದಲ್ಲಿ ಬೇಧಿಸಿದ್ದು ಯಡಿಯೂರಪ್ಪ ಮತ್ತು ಈಶ್ವರಪ್ಪ ಅನ್ನೋ ಜಗರಿ ದೋಸ್ತ್ ಗಳು. ಕಾಂಗ್ರೆಸ್ ತನ್ನ ಸಾಮ್ರಾಜ್ಯ ವಿಸ್ತರಣೆಯ ತವಕದಲ್ಲಿದ್ರೆ, ಬಿಜೆಪಿಗೆ ಮತ್ತೆ ತನ್ನ ಬಲಿಷ್ಠತೆಯನ್ನ ಒರೆಗೆ ಹಚ್ಚೋ ಸಮಯ. ಇದೆಲ್ಲದ್ರ ನಡುವೆ ಜೆಡಿಎಸ್ ಗೂ ಇಲ್ಲಿ ಅಳಿವು ಉಳಿವಿನ ಪ್ರಶ್ನೆ.

ಯಡಿಯೂರಪ್ಪನವರು ಈ ಬಾರಿಯೂ ಶಿಕಾರಿ ಹೊಡೀತಾರಾ..?
ಉತ್ತರ ಕರ್ನಾಟಕ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಈ ಹಿಂದೆ ಕೇಳಿ ಬರ್ತಿತ್ತು. ಆದ್ರೆ, ಯಡಿಯೂರಪ್ಪನವರು ತಮ್ಮ ಸ್ವ ಕ್ಷೇತ್ರ ಶಿಕಾರಿಪುರದಲ್ಲೇ ಶಿಕಾರಿ ಹೊಡೆಯೋಕೆ ನಿಂತಿದ್ದಾರೆ. 2013ರಲ್ಲಿ ನಡೆದ ಎಲೆಕ್ಷನ್ ನಲ್ಲಿ ಬಿಎಸ್ ಯಡಿಯೂರಪ್ಪನವರು 69, 126 ಮತಗಳನ್ನು ಗಳಿಸಿದ್ರು. ಆ ಟೈಮಲ್ಲಿ ಯಡಿಯೂರಪ್ಪನವರ ವಿರುದ್ಧ ಕಾಂಗ್ರೆಸ್ ನ ಶಾಂತವೀರಪ್ಪ ಸ್ಪರ್ಧಿಸಿದ್ರೆ, ಜೆಡಿಎಸ್ ನಿಂದ ಎಚ್ ಬಳಿಗಾರ್ ಕಣದಲ್ಲಿದ್ರು. ನಂತ್ರ ನಡೆದ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರರನ್ನ ಜನ ಆರಿಸಿದ್ರು. ಶಿಕಾರಿಪುರ ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್ ಜಿ ಬಿ ಮಾಲತೇಶ್ ರನ್ನ ಕಣಕ್ಕಿಳಿಸಿದೆ. ಮಾಲತೇಶ್ ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯೋ ಕ್ಯಾಂಡಿಡೇಟ್ ಅಲ್ಲ ಅನ್ನೋದು ಕಾಂಗ್ರೆಸ್ ವಲಯದವ್ರಲ್ಲೇ ಕೇಳಿ ಬರ್ತಿರೋ ಮಾತು. ಹೀಗಾಗಿ ಶಿಕಾರಿಪುರ ಯಡಿಯೂರಪ್ಪನವರಿಗೆ ಸಲಭದ ತುತ್ತಾಗುತ್ತೆ ಅಂತಾನೂ ಹೇಳಲಾಗ್ತಿದೆ. ಇನ್ನು ಜೆಡಿಎಸ್ ಎಚ್.ಟಿ.ಬಳಿಗಾರ್ ರನ್ನ ಅಖಾಡಕ್ಕಿಳಿಸಿದೆ. ಯಡಿಯೂರಪ್ಪನವರು ಶಿಕಾರಿಪುರ ಕ್ಷೇತ್ರದಲ್ಲಿ ಮಾಡಿರೋ ಅಭಿವೃದ್ಧಿ ಕೆಲಸಗಳೇ ಅವ್ರಿಗೆ ಶ್ರೀರಕ್ಷೆ. ಆದ್ರೆ, ಈ ಹಿಂದೊಮ್ಮೆ ಯಡಿಯೂರಪ್ಪನವರೂ ಈ ಕ್ಷೇತ್ರದಲ್ಲಿ ಸೋತಿದ್ದನ್ನೂ ಮರೆಯುವಂತಿಲ್ಲ.

ಶಿವಮೊಗ್ಗದಲ್ಲಿ ಅರಳೋರು ಯಾರು..? ಅಳೋರು ಯಾರು..?
ಶಿವಮೊಗ್ಗದಲ್ಲಿ ಈ ಬಾರಿ ಕೆ.ಎಸ್ ಈಶ್ವರಪ್ಪ ಬಿಜೆಪಿ ಹುರಿಯಾಳು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆ.ಎಸ್ ಈಶ್ವರಪ್ಪನವರಿಗೆ ಕಳೆದ ಬಾರಿ ಕಾಂಗ್ರೆಸ್ ನ ಕೆ ಬಿ ಪ್ರಸನ್ನ ಕುಮಾರ್ ಸೆಡ್ಡು ಹೊಡೆದು ಗೆಲುವಿನ ನಗೆ ಬೀರಿದ್ರು. ಬಿಜೆಪಿ-ಕೆಜೆಪಿಯ ನಡುವಿನ ರಾಜಕೀಯದಲ್ಲಿ ಪ್ರಸನ್ನ ಕುಮಾರ್ ಗೆದ್ದಿದ್ರು. ಆದ್ರೆ ಆ ತಪ್ಪುಗಳನ್ನ ಈ ಬಾರಿ ಸರಿಪಡಿಸಿಕೊಳ್ಳೋ ತವಕದಲ್ಲಿ ಬಿಜೆಪಿ ಇದೆ.

ಗ್ರಾಮಾಂತರದಲ್ಲಿ ರಾಜಕೀಯದ್ದೇ ಗಮ್ಮತ್ತು..!
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಶಾಸಕಿ ಜೆಡಿಎಸ್ ನ ಶಾರದಾ ಪೂರ್ಯಾನಾಯ್ಕ ಈ ಬಾರಿಯೂ ರಣಕಣದಲ್ಲಿದ್ದಾರೆ. ಇನ್ನು ಬಿಜೆಪಿಯಿಂದ ಕಳೆದ ಬಾರಿಯ ಅಭ್ಯರ್ಥಿ ಕೆ.ಜಿ ಕುಮಾರಸ್ವಾಮಿಯವ್ರ ಬದಲಾಗಿ ಕೆ.ಬಿ.ಅಶೋಕ ನಾಯ್ಕ್ ರನ್ನ ಬಿಜೆಪಿ ತನ್ನ ಕ್ಯಾಂಡಿಡೇಟ್ ಆಗಿ ಆಯ್ಕೆ ಮಾಡಿದೆ. ಇನ್ನು ಕಾಂಗ್ರೆಸ್ ನಿಂದ ಮಾಜಿ ಶಾಸಕ ಕರಿಯಣ್ಣ ಪುತ್ರ ಡಾ. ಶ್ರೀನಿವಾಸ್ ಕರಿಯಣ್ಣ ಅವ್ರಿಗೆ ಟಿಕೆಟ್ ಘೋಷಣೆಯಾಗಿದೆ. ಹೀಗಾಗಿ ಯಾವ ರೀತಿ ಫೈಟ್ ಇರುತ್ತೆ ಅನ್ನೋ ಕುತೂಹಲ ಇದ್ದೇ ಇದೆ.

ಹುಟ್ಟುತ್ತಾ ಅಣ್ಣತಮ್ಮಂದಿರು ಈಗ ರಾಜಕೀಯದಲ್ಲೂ ದಾಯಾದಿಗಳು..!
ಸೊರಬ ಕ್ಷೇತ್ರ ಈ ಬಾರಿ ಅಣ್ಣ ತಮ್ಮಂದಿರ ಕದನಕ್ಕೆ ಸಾಕ್ಷಿಯಾಗ್ತಿದೆ. ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪರ ಮಕ್ಕಳಾದ ಕುಮಾರ್ ಬಂಗಾರಪ್ಪ ಕಮಲದ ಕೈ ಹಿಡಿದು ಕಂಟೆಸ್ಟ್ ಮಾಡ್ತಿದ್ರೆ, ಮಧು ಬಂಗಾರಪ್ಪ ತೆನೆ ಹೊತ್ತೇ ದಿಟ್ಟ ಉತ್ತರ ಕೊಡೋದಕ್ಕೆ ರೆಡಿಯಾಗಿದ್ದಾರೆ. ಹಾಲಿ ಶಾಸಕ ಮಧು ಬಂಗಾರಪ್ಪ 2013ರ ಎಲೆಕ್ಷನ್ ನಲ್ಲಿ 58,541 ಮತಗಳನ್ನು ಪಡೆದು ಗೆಲುವನ್ನ ಸಾಧಿಸಿದ್ರು. ಇನ್ನು ಕುಮಾರ್ ಬಂಗಾರಪ್ಪ ಕೈ ಬಿಟ್ಟು ಕಮಲ ಹಿಡಿದಿರೋದ್ರಿಂದ ಕಾಂಗ್ರೆಸ್ ಅನಿವಾರ್ಯವಾಗಿ ಬಿಜೆಪಿಯನ್ನ ಬಿಟ್ಟು ಬಂದ ರಾಜು ಎಂ ತಲ್ಲೂರ್ ಅವ್ರನ್ನ ಕಣಕ್ಕೆ ಇಳಿಸಿದೆ. ಏನಿದ್ರೂ ಇಲ್ಲಿ ದಾಯಾದಿಗಳ ಕುಟುಂಬ ಕಲಹ ಮನೆ ಬಾಗಿಲು ದಾಟಿ ರಾಜಕೀಯದವರೆಗೆ ತಲುಪಿರೋದೇ ದೊಡ್ಡ ದುರಂತ..!

ತೀರ್ಥಹಳ್ಳಿಯಲ್ಲಿ ಯಾರ ಮುಕುಟಕ್ಕೆ `ರತ್ನ’?
ತೀರ್ಥಹಳ್ಳಿ ಕ್ಷೇತ್ರದಲ್ಲಿ ಈ ಬಾರಿಯೂ ಹಾಲಿ ಶಾಸಕ ಹಾಗೂ ಮಾಜಿ ಸಚಿವರೂ ಆಗಿರುವ ಕಿಮ್ಮನೆ ರತ್ನಾಕರ್ ಪ್ರಬಲ ಅಭ್ಯರ್ಥಿ. ಬಿಜೆಪಿಯಲ್ಲಿ ಮಾಜಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಮೊದಲೇ ಟಿಕೆಟ್ ಫಿಕ್ಸ್ ಆಗಿತ್ತು. ಇನ್ನು, ಜೆಡಿಎಸ್ ನಿಂದ ಕಾಂಗ್ರೆಸ್ನಿಂದ ಬಂದಂತಹಾ ಆರ್. ಎಂ ಮಂಜುನಾಥ್ ಗೌಡ ಸ್ಪರ್ಧೆಯಲ್ಲಿದ್ದಾರೆ. ಆದ್ರೆ, ಈ ಕ್ಷೇತ್ರದಲ್ಲೇನಿದ್ರೂ ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಮೆಲುಗೈ ಸಾಧಿಸಿದೆ ಅನ್ನೋ ಲೆಕ್ಕಾಚಾರ ಇದೆ.

ಭದ್ರಾವತಿಯಲ್ಲಿ ಗೆಲ್ಲೋ ಉಕ್ಕಿನ ಮನುಷ್ಯ ಯಾರು..?
ಉಕ್ಕಿನ ನಗರಿ ಭದ್ರಾವತಿಯಲ್ಲಿ ಜೆಡಿಎಸ್ ದ್ದೇ ಪಾರುಪತ್ಯ. ಹಾಲಿ ಶಾಸಕ ಜೆಡಿಎಸ್ ನ ಎಂಜೆ ಅಪ್ಪಾಜಿ ಯವರೇ ಅಭ್ಯರ್ಥಿ. ಕಳೆದ ಬಾರಿ ಟಿಕೆಟ್ ಕೈ ತಪ್ಪಿದ್ರಿಂದ ಪಕ್ಷ ಬಿಟ್ಟು ಮುನಿಸಿಕೊಂಡಿದ್ದ ಬಿ.ಕೆ ಸಂಗಮೇಶ್ ಗೆ ಈ ಬಾರಿ ಕಾಂಗ್ರೆಸ್ ಜೈ ಅಂದಿದೆ. ಇಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಪರಿಸ್ಥಿತಿ. ಏನಿದ್ರೂ ಅಪ್ಪಾಜಿ ಗೌಡ ಹಾಗೂ ಸಂಗಮೇಶ್ ನಡ್ವೇನೇ ಫೈಟ್ ಆಗೋದು.

ಸಾಗರದ ಸರದಾರ ಯಾರಾಗ್ತಾರೆ..?
ಲಿಂಗನಮಕ್ಕಿಯಿಂದ ನಾಡಿಗೆ ಬೆಳಕು ಹರಿಯುತ್ತೆ. ಆದ್ರೆ, ಬಿಜೆಪಿ ಮಟ್ಟಿಗೆ ಇಲ್ಲಿ ಈ ಬಾರಿ ಇದ್ದ ಪವರ್ ಕೂಡಾ ಸ್ವಲ್ಪ ಮಟ್ಟಿಗೆ ಆಫ್ ಆಗಿರೋ ರೀತಿ ಕಾಣಿಸ್ತಿದೆ. ಹಾಲಿ ಶಾಸಕ ಕಾಗೋಡು ತಿಮ್ಮಪ್ಪ ಅವ್ರು ಇಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಆದ್ರೆ, ಈ ಬಾರಿ ಕಾಂಗ್ರೆಸ್ ಹಲವಾರು ಗೊಂದಲಗಳ ನಡುವೆ ಅವ್ರಿಗೇ ಮಣೆ ಹಾಕಿದೆ. ಇನ್ನು, ಹರತಾಳು ಹಾಲಪ್ಪ ಹಾಗೂ ಬೇಳೂರು ಗೋಪಾಲ ಕೃಷ್ಣ ನಡುವೆ ಟಿಕೆಟ್ ಗಾಗಿ ನಡೆದ ಪ್ರಹಸನದ ಬಳಿಕ ಅಂತಿಮವಾಗಿ ಹರತಾಳು ಟಿಕೆಟ್ ಗಿಟ್ಟಿದ್ರು. ಇದ್ರಿಂದ ಸಿಟ್ಟಿಗೆದ್ದ ಬೇಳೂರು ಕಾಂಗ್ರೆಸ್ ಕೈ ಹಿಡಿದು ಜೈ ಅಂದಿದ್ದೂ ಆಯ್ತು. 2013ರ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ 71, 960 ಮತ ಪಡೆದಿದ್ರು. ಕೆಜೆಪಿಯ ಬಿ.ಆರ್.ಜಯಂತ್ 30,712 , ಜೆಡಿಎಸ್‌ನ ಬೇಳೂರು ಗೋಪಾಲಕೃಷ್ಣ 23,217 ಮತ, ಬಿಜೆಪಿಯ ಶರಾವತಿ ಸಿ.ರಾವ್ 5,355 ಮತಗಳನ್ನು ಪಡೆದಿದ್ರು. ಹೀಗಾಗಿ ಈ ಬಾರಿ ಸಾಗರದ ಜನ ಯಾರಿಗೆ ಜೈ ಅಂತಾರೆ ಅನ್ನೋದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.

Share This Article
Leave a Comment

Leave a Reply

Your email address will not be published. Required fields are marked *