DistrictsKarnatakaKodaguLatest

ಕರುನಾಡಿನ ಕಾಶ್ಮೀರದಲ್ಲಿ ಬಿಸಿಯೇರಿಸಿದೆ ಪಾಲಿಟಿಕ್ಸ್..!

Advertisements

ಕಾಫಿ ಘಮದ ನಡುವೆ ಕರಿ ಮೆಣಸಿನ ಘಾಟು. ಮಡಿಕೇರಿಯ ಚಳಿಗೆ ಇವೆರಡು ಡೆಡ್ಲಿ ಕಾಂಬಿನೇಶನ್ನು..! ಅರೆ ಮಲೆನಾಡು ಹಾಗೂ ಮಲೆನಾಡು ಪ್ರದೇಶ ಹೊಂದಿರೋ ಕೂರ್ಗ್ ಪ್ರವಾಸಿಗರ ಎವರ್ ಗ್ರೀನ್ ಹಾಟ್ ಸ್ಪಾಟ್..!ಎತ್ತ ನೋಡಿದ್ರೂ ಸದಾ ಹಿಮದ ಹೊದಿಕೆಯೇ ಆವರಿಸಿ ಶ್ವೇತ ಸುಂದರಿಯಂತೆ ಕಾಣೋ ಕರುನಾಡ ಕಾಶ್ಮೀರ ನಿತ್ಯ ಸುಮಂಗಲೆ. ಚುಮು ಚುಮು ಚಳಿ. ಅದಕ್ಕೆ ಹಿತವಾದ ಅನುಭವ ನೀಡೋ ಕಾಫಿ ವಾಹ್, ಸ್ವರ್ಗ ಅಂತೇನಾದ್ರೂ ಇದ್ರೆ ಇದೇ ಕಣ್ರೀ..ಮಡಿಕೇರಿಯ ಸೌಂದರ್ಯ ಒಂದು ರೀತಿಯಲ್ಲಿ ವರ್ಣನಾತೀತ ಅನುಭವ ಕೊಡುತ್ತೆ. ಇಂತಿಪ್ಪ ಮಡಿಕೇರಿಯಲ್ಲಿ ಈಗ ಚುನಾವಣೆಯಿಂದಾಗಿ ಬಿಸಿ ಏರಿದೆ.

ಕೆಚ್ಚೆದೆಯ ಸಿಪಾಯಿಗಳಿಗೆ ಜನ್ಮವಿತ್ತ ವೀರಭೂಮಿ ಮಡಿಕೇರಿ..!
ಮುತ್ತಿನ ಹಾರ ಸಿನಿಮಾದ ಮಡಿಕೇರಿ ಸಿಪಾಯಿ ಅನ್ನೋ ಹಾಡನ್ನು ಕೇಳದೇ ಇದ್ದವರು ಬಹಳ ವಿರಳ ಅನ್ಸುತ್ತೆ. ಇದೇ ಕೊಡಗಿನ ವೀರ ಯೋಧನ ಸುತ್ತ ಸುತ್ತೋ ಕಥೆ ಹೃದಯ ಕಲಕಿ ಬಿಡುತ್ತೆ. ಹೌದು.. ಕೊಡಗು ಅನ್ನೋ ಕರ್ನಾಟಕದ ಕಾಶ್ಮೀರದಲ್ಲಿ ಇಂದಿಗೂ ಮನೆ ಮನೆಗೊಬ್ಬರಂತೆ ಸೇನೆ ಸೇರುವವರನ್ನು ಕಾಣಬಹುದು. ಫೀಲ್ಡ್ ಮಾರ್ಷಲ್ ಕಾರಿಯಪ್ಪ, ಜನರಲ್ ತಿಮ್ಮಯ್ಯ ಹೀಗೆ ಅನೇಕ ವೀರರನ್ನ ಕೊಟ್ಟ ಕೊಡಗು ದೇಶ ರಕ್ಷಣೆಯ ವಿಚಾರ ಬಂದಾಗ ಸದಾ ಸಿದ್ಧ.

ರಾಷ್ಟ್ರ ಕ್ರೀಡೆ ಹಾಕಿಯೇ ಕೊಡವರ ಹಾಟ್ ಫೇವರೇಟ್..!
ನಮ್ಮ ದೇಶದ ಕ್ರೀಡೆ ಆಗಿದ್ರೂ ಕ್ರಿಕೆಟ್ ಬಗ್ಗೆಯೇ ನಮ್ಮ ಜನಕ್ಕೆ ಒಲವು ಜಾಸ್ತಿ. ಆದ್ರೆ, ಕೊಡವರು ಮಾತ್ರ ಇದ್ರಲ್ಲೂ ತಮ್ಮ ದೇಶಭಕ್ತಿಯನ್ನ ಮೆರೆದಿದ್ದಾರೆ. ಕ್ರಿಕೆಟ್‌, ವಾಲಿಬಾಲ್‌ ಟೂರ್ನಮೆಂಟ್ ಗಳು ಹೇಗೆ ನಡೆಯುತ್ವೋ ಕೊಡಗಿನಲ್ಲಿ ಮಾತ್ರ ಕೊಡವ ಮನೆತನಗಳ ನಡುವೆ ಹಾಕಿ ಟೂರ್ನಮೆಂಟ್ ಗಳು ನಡೆಯುತ್ತವೆ.

ಚಾರಣಿಗರ ಪಾಲಿನ ಅಗಣಿತ ರಹಸ್ಯಗಳ ಹೂರಣ..ಪ್ರವಾಸಿಗರಿಗೆ ಇದು ನಿತ್ಯ ನೂತನ..!
ಹನಿ ಮೂನ್ ಅಂದ್ರೆ ಇವತ್ತಿಗೂ ಕೊಡಗು ನವ ದಂಪತಿಗಳ ನೆಚ್ಚಿನ ತಾಣ. ಅದ್ರ ಹೊರತಾಗಿಯೂ ಚಾರಣಿಗರ, ಪ್ರವಾಸಿಗರ ಎಂದೂ ಮರೆಯಲಾಗದ ನೆನಪುಗಳ ಕಟ್ಟಿ ಕೊಡೋ ಸುಂದರ ಸ್ಥಳ. ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ ಎಂಟು ಕಿಲೋ ಮೀಟರ್ ದೂರದಲ್ಲಿದೆ ಅಬ್ಬಿ ಜಲಪಾತ. ಏಲಕ್ಕಿಯ ಹಾಗೂ ಕಾಫಿಯ ನವಿರಾದ ಘಮವನ್ನ ಆಸ್ವಾದಿಸುತ್ತಾ ಸ್ವಲ್ಪವೇ ದೂರ ನಡೆದರೆ ಸಿಗುತ್ತಾಳೆ ಹಾಲಿನ ಬಣ್ಣದ ಸುಂದರಿ ಅಬ್ಬಿ. ಬಿರು ಬೇಸಿಗೆಯಲ್ಲೂ ಅಬ್ಬಿ ಮಾತ್ರ ಸದಾ ತುಂಬಿ ಹರಿಯುತ್ತಾಳೆ.

ಕೊಡಗಿನ ಮತ್ತೊಂದು ಅಟ್ರಾಕ್ಟಿವ್ ಜಾಗ ಅಂದ್ರೆ ರಾಜಾ ಸೀಟ್. ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿರೋ ಕಥೆಯ ಪ್ರಕಾರ ರಾಜ ಮಹಾರಾಜರುಗಳು ಇಲ್ಲಿ ಸಂಜೆಯ ವಾಯುವಿಹಾರಕ್ಕೆ ಅಂತಾ ಬರ್ತಿದ್ರಂತೆ. ಹೀಗಾಗಿ ಇದಕ್ಕೆ ಮುಂದೆ ರಾಜಾಸ್ ಸೀಟ್ ಅನ್ನೋ ಹೆಸರು ಬಂತು. ಅದುವೇ ಮುಂದೆ ರಾಜಾ ಸೀಟ್ ಆಗಿದ್ದು ಈಗ ಇತಿಹಾಸ. ಇಲ್ಲಿನ ಸೂರ್ಯಾಸ್ತವನ್ನು ನೋಡೋದೇ ಮನಸ್ಸಿಗೆ ಮುದ ಕೊಡುತ್ತದೆ.

ಕನ್ನಡನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ. ಏಳು ಪವಿತ್ರ ನದಿಗಳಲ್ಲಿ ಕಾವೇರಿಯ ಹೆಸರೂ ಉಲ್ಲೇಖವಾಗಿದೆ. ಬ್ರಹ್ಮಗಿರಿ ಬೆಟ್ಟ ಸಮುದ್ರ ಮಟ್ಟದಿಂದ 4500 ಅಡಿ ಎತ್ತರವಿದ್ದು ಇಲ್ಲೇ ಕಾವೇರಿ ಉಗಮವಾಗುತ್ತಾಳೆ. ತಲಕಾವೇರಿ ಉಗಮಸ್ಥಾನದ ದೊಡ್ಡ ಕೊಳದಲ್ಲಿ ಭಕ್ತರು ತೀರ್ಥ ಸ್ನಾನ ಮಾಡೋದು ಸರ್ವೇ ಸಾಮಾನ್ಯ. ತುಲಾ ಸಂಕ್ರಮಣದಂದು ತೀರ್ಥೋದ್ಭವವಾಗುತ್ತೆ. ಇನ್ನು, ಕಾವೇರಿ ಹುಟ್ಟಿದ ಜಾಗ ಬ್ರಹ್ಮಗಿರಿ, ಇಲ್ಲೇ ಸಪ್ತ ಋಷಿಗಳು ಯಜ್ಞ ಮಾಡಿದ್ರು ಅನ್ನೋ ಉಲ್ಲೇಖಗಳಿವೆ.

ಮಡಿಕೇರಿಯ ಮಧ್ಯಭಾಗದಲ್ಲಿರೋ ಪ್ರಮುಖ ಆಕರ್ಷಣೆ ಅಂದ್ರೆ 19ನೇ ಶತಮಾನದ ಕೋಟೆ. ಒಂದು ಮಂದಿರ ಹಾಗೂ ಕಾರಾಗೃಹ ಈ ಕೋಟೆಯ ಒಳಗಿದೆ. 1814ರಲ್ಲಿ ಲಿಂಗರಾಜೇಂದ್ರ ಒಡೆಯರ್‌ ಈ ಕೋಟೆಯನ್ನು ಕಟ್ಟಿಸಿದರು. ಈ ಕೋಟೆಯ ಮೇಲೆ ನಿಂತು ನೋಡಿದ್ರೆ ಮಡಿಕೇರಿಯ ಸೌಂದರ್ಯ ಗೋಚರಿಸುತ್ತೆ.

ಕಾವೇರಿ, ಕನ್ನಿಕಾ ಮತ್ತು ಸುಜ್ಯೋತಿ ಅನ್ನೋ ಮೂರು ನದಿಗಳು ಸಂಧಿಸೋ ಜಾಗ ಭಾಗಮಂಡಲ. ಈ ತ್ರಿವೇಣಿ ಸಂಗಮದಲ್ಲಿ ಕೇರಳ ಮಾದರಿಯ ಆಕರ್ಷಕ ದೇವಸ್ಥಾನವಿದೆ. ಭಾಗ ಮಂಡಲದ ತ್ರಿವೇಣಿ ಸಂಗಮದಲ್ಲಿ ಕೇರಳೀಯ ಶೈಲಿಯ ಆಕರ್ಷಕ ದೇವಸ್ಥಾನವಿದೆ. ಇನ್ನು, ಕುಶಾಲನಗರ ಸಮೀಪ ಕಾವೇರಿ ನದಿಗೆ ಕಟ್ಟಲಾದ ಹಾರಂಗಿ ಜಲಾಶಯವು ಮತ್ತೊಂದು ಪ್ರವಾಸಿ ಸ್ಥಳ.

ಕಾವೇರಿ ನದಿ ತಟದಲ್ಲಿರೋ ದುಬಾರೆ ಆನೆಗಳ ತರಬೇತಿ ಕೇಂದ್ರ ಬಹಳ ಆಕರ್ಷಿಸುತ್ತೆ. ಕಾಡಿನಿಂದ ನಾಡಿಗೆ ಬಂದು ತೊಂದರೆ ಕೊಡೋ ಆನೆಗಳನ್ನು ಇಲ್ಲಿಗೆ ಕರೆತಂದು ಪಳಗಿಸಲಾಗಿಸುತ್ತದೆ. ಪ್ರವಾಸೋಧ್ಯಮ ನಿಟ್ಟಿನಿಂದ ಇಲ್ಲಿ ಮಾವುತರ ಸಹಾಯದಿಂದ ಆನೆ ಸವಾರಿಗೂ ಕೂಡ ಸರ್ಕಾರ ಅನುಮತಿ ನೀಡಿದೆ. ಬೋಟಿಂಗ್‌ ಇಲ್ಲಿನ ವಿಶೇಷ. ಸಂಜೆ ವೇಳೆ ಆನೆಗಳು ಸ್ನಾನಕ್ಕೆ ಬರೋದನ್ನ ನೋಡೋದೇ ಚೆಂದ. ಅಂದ ಹಾಗೆ ಇದು ಸಿದ್ದಾಪುರ-ಕುಶಾಲನಗರ ರಸ್ತೆಯಲ್ಲಿದೆ.

ಕೊಡವರ ಆಚರಣೆ, ಭಾಷೆ, ವೇಷ ಭೂಷಣ ಸಖತ್ ಡಿಫರೆಂಟ್..!
ಕೊಡವರದ್ದು ಕ್ಷಾತ್ರ ಧರ್ಮ. ಹೀಗಾಗಿ ಧೈರ್ಯ ಅನ್ನೋದು ರಕ್ತದಲ್ಲೇ ಬಂದಿದೆ. ಪ್ರಕೃತಿ ಹಾಗೂ ಪೂರ್ವಜರನ್ನು ಪೂಜೆ ಮಾಡೋದನ್ನ ಇವರು ಪಾಲಿಸಿಕೊಂಡು ಬಂದಿರೋದು. ಮಾತೃ ಭಾಷೆ ಕೊಡವ ತಕ್ಕ್. ಕೈಲ್‌ ಪೊಳ್ದ್, ಕಾವೇರಿ ಸಂಕ್ರಮಣ ಹಾಗೂ ಪುತ್ತರಿ ಹಬ್ಬವನ್ನು ಇಲ್ಲಿ ಕೊಡವರು ಬಹಳ ಸಂಭ್ರಮದಿಂದ ಆಚರಿಸ್ತಾರೆ. ಕುಪ್ಯ, ಚೇಲೆ, ಪೀಚೆಕತ್ತಿ, ಮಂಡೆ ತುಣಿ ಅನ್ನೋ ವಿಭಿನ್ನ ಸಾಂಪ್ರದಾಯಿಕ ವಸ್ತ್ರವನ್ನ ಪುರುಷರು ತೊಡ್ತಾರೆ. ಮಹಿಳೆಯರು ಸೀರೆ ಉಡುವ ಶೈಲಿಗೆ ಕೊಡವ ಪೊಡೆಯ ಅನ್ನೋದಾಗಿ ಕರೆಯಲಾಗುತ್ತೆ. ಪತ್ತಾಕ್, ಜೋಮಾಲೆ, ಕೊಕ್ಕೆತತ್ತಿ, ಪೊಮ್ಮಾಲೆ, ಅಡ್ಡಿಗೆ ಹೀಗೆ ವಿವಿಧ ರೀತಿಯ ಆಭರಣಗಳಿಂದ ತಮ್ಮನ್ನ ತಾವು ಸಿಂಗರಿಸಿಕೊಳ್ತಾರೆ.

ಬಾಯಲ್ಲಿ ನೀರೂರಿಸುತ್ವೆ ಕೊಡವರ ತಿಂಡಿ ತಿನಿಸುಗಳು
ಅನ್ನ, ಗಂಜಿ, ಹಿಟ್ಟಿನಿಂದ ರೊಟ್ಟಿ ಮತ್ತು ನೂಪುಟ್ಟ್, ತರಿಯಿಂದ ಪಾಪುಟ್ಟ್ ಮತ್ತು ಕಡಂಬುಟ್ಟ್, ಇತ್ಯಾದಿಗಳಲ್ಲದೆ, ವಿಶೇಷ ಸಂದರ್ಭಗಳಲ್ಲಿ ತುಪ್ಪದನ್ನ ಮಾಡುತ್ತಾರೆ. ತಳಿಯಪುಟ್ಟ್ ಮತ್ತು ದೋಸೆ ಕೊಡವರ ಸಾಂಪ್ರದಾಯಿಕ ಸೈಡ್ ಢಿಶ್ ಜೊತೆ ಆಸ್ವಾದಿಸ್ಲೇಬೇಕು. ಇವರು ಶುದ್ಧ ಮಾಂಸಾಹಾರಿಗಳು. ಕೊಡವ ಶೈಲಿಯ ಪಂದಿಕರಿ ಹಾಗೂ ಅಕ್ಕಿ ರೊಟ್ಟಿ ಒಳ್ಳೇ ಕಾಂಬಿನೇಷನ್.

ಕರ್ನಾಟಕದ ಕಾಶ್ಮೀರದಲ್ಲಿ ಬೊಂಬಾಟ್ ರಾಜಕೀಯ..!
ಕಳೆದ ಹಲವಾರು ದಶಕಗಳಿಂದ ಕೊಡಗು ಪ್ರತ್ಯೇಕ ರಾಜ್ಯವಾಗಬೇಕು ಅನ್ನೋ ಕೂಗು ಕೇಳ್ತಾನೇ ಇದೆ. ಇದಕ್ಕೆ ಸಂಬಂಧ ಪಟ್ಟಂತೆ ಹಲವಾರು ಹೋರಾಟಗಳೂ ನಡೆದು ಹೋಗಿವೆ. ಇದೂ ಕೂಡಾ ಇಲ್ಲಿ ರಾಜಕೀಯದ ಅಸ್ತ್ರವಾಗಿ ದಶಕಗಳೇ ಕಳೆದಿವೆ. ಅಂದ ಹಾಗೆ, ಕೊಡಗಿನಲ್ಲಿ ಕಾಫಿ ಹಾಗೂ ಕಾಳು ಮೆಣಸು ಪ್ರಧಾನ ಬೆಳೆ. ಆದ್ರೆ, ಇವೆಲ್ಲದ್ರ ನಡುವೆ ಅನೇಕ ಸಮಸ್ಯೆಗಳು ಇಲ್ಲಿ ಬಾಧಿಸ್ತಿವೆ. ಕಾಡಾನೆ ಹಾವಳಿ, ಬೇಸಿಗೆಯಲ್ಲಿ ಕುಡಿಯೋ ನೀರಿನ ಸಮಸ್ಯೆ, ಮಲ್ಲಳ್ಳಿ ಜಲಪಾತದ ತೂಗು ಸೇತುವೆ ಬೇಡಿಕೆ,

ಕೊಡಗಿನಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿವೆ. ಮಡಿಕೇರಿ ಹಾಗೂ ವಿರಾಜ ಪೇಟೆ. ಮಾಜಿ ಮುಖ್ಯಮಂತ್ರಿ ದಿ. ಆರ್ ಗುಂಡೂರಾವ್ ಇಲ್ಲಿಂದ ಗೆದ್ದು ಮುಂದೆ ಸಿಎಂ ಆಗಿದ್ದು ಇತಿಹಾಸ. ಇಲ್ಲಿ ಅರೆ ಒಕ್ಕಲಿಗ ಗೌಡ್ರು ಪ್ರಾಬಲ್ಯ ಹೊಂದಿದ್ರೂ ಕೊಡವ, ಬ್ರಾಹ್ಮಣ ಹಾಗೂ ಇತರರೇ ಗೆದ್ದಿದ್ದಾರೆ.

ಮಡಿಕೇರಿಯ ಕೇರಿ ಏರೋ ದಿಲ್ ದಾರ್ ಯಾರು..?
2013ರಲ್ಲಿ ಬಿಜೆಪಿಯಿಂದ ಕಂಟೆಸ್ಟ್ ಮಾಡಿದ್ದ ಅಪ್ಪಚ್ಚು ರಂಜನ್ 56,696 ಮತಗಳನ್ನು ಗಳಿಸಿ ಮಡಿಕೇರಿ ಜನರ ಕೃಪೆಗೆ ಪಾತ್ರರಾಗಿದ್ರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಜೀವಿಜಯ 4000 ಮತಗಳ ಅಂತರದಿಂದ ಸೋತರೂ ಟಫ್ ಫೈಟ್ ಕೊಟ್ಟಿದ್ರು. ಕಾಂಗ್ರೆಸ್ ನ ಕೆ.ಎಂ ಲೋಕೇಶ್ 21% ವೋಟು ಗಳಿಸಿದ್ರು. ಈ ಬಾರಿ ಬಿಜೆಪಿ ಗೆಲ್ಲೋ ಲಕ್ಷಣಗಳಿದ್ರೂ ಜೆಡಿಎಸ್ ನಿಂದ ಮತ್ತೆ ಬಲವಾದ ಸ್ಪರ್ಧೆ ಒಡ್ಡೋ ಎಲ್ಲಾ ನಿರೀಕ್ಷೆಗಳೂ ಕಾಣಿಸ್ತಿವೆ. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ಟಿಪ್ಪು ಜಯಂತಿ ಆಚರಣೆ ವಿವಾದಗಳು ತನಗೆ ಪ್ಲಸ್ ಆಗಬಹುದು ಅನ್ನೋ ನಿರೀಕ್ಷೆ ಬಿಜೆಪಿಯದ್ದು. ಹಾಗಾಗಿ ಈ ಬಾರಿ ಬಿಜೆಪಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದೆ. ಈ ಬಾರಿ ಕಾಂಗ್ರೆಸ್ ನಿಂದ  ಕೆಪಿ ಚಂದ್ರಕಲಾ ಅಖಾಡದಲ್ಲಿದ್ದಾರೆ.

ವಿರಾಜಪೇಟೆಯಲ್ಲಿ ರಾರಾಜಿಸೋರು ಯಾರು..?
ವಿರಾಜಪೇಟೆಯಿಂದ ಈ ಬಾರಿ ಜೆಡಿಎಸ್ ಮೊದಲೇ ಟಿಕೆಟ್ ಘೋಷಣೆ ಮಾಡಿಯಾಗಿತ್ತು. ರೈತ ಪರ ಹೋರಾಟಗಾರ ಸಂಕೇತ್ ಪೂವಯ್ಯ ಕಣದಲ್ಲಿದ್ದಾರೆ. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಾದಪ್ಪ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯ್ತು. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಿ ಶಾಸಕ ಕೆಜಿ ಬೋಪಯ್ಯ 67,250 ಮತಗಳನ್ನು ಗಳಿಸಿ ವಿಜಯದ ನಗೆ ಬೀರಿದ್ರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬಿಟಿ ಪ್ರದೀಪ್ ಎರಡನೇ ಸ್ಥಾನ ಪಡೆಯಲಷ್ಟೇ ಶಕ್ತರಾದ್ರು. ಈ ಬಾರಿ ಕಾಂಗ್ರೆಸ್ ನಿಂದ ಅರುಣ್ ಮಾಚಯ್ಯ ಸ್ಪರ್ಧಿಸ್ತಾ ಇದ್ದಾರೆ. ಹಾಗಾದ್ರೆ, ಈ ಬಾರಿ ವಿರಾಜ ಪೇಟೆಯ ಗದ್ದುಗೆಯಲ್ಲಿ ವಿರಾಜಮಾನರಾಗೋಕೆ ಯಾರಿಗೆ ಅವಕಾಶ ಮಾಡಿಕೊಡ್ತಾರೆ ಅನ್ನೋದಷ್ಟೇ ಕುತೂಹಲ.

Leave a Reply

Your email address will not be published.

Back to top button